Sunday, May 25, 2025
Homeರಾಜ್ಯಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಬಹುಮತ ಗ್ಯಾರಂಟಿ : ಸಮೀಕ್ಷೆ

ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಬಹುಮತ ಗ್ಯಾರಂಟಿ : ಸಮೀಕ್ಷೆ

BJP will come to power with a majority if elections are held in the state now: Survey

ಬೆಂಗಳೂರು, ಮೇ25 – ಒಂದು ವೇಳೆ ರಾಜ್ಯದಲ್ಲಿ ಈಗಲೇ ವಿಧಾನಸಭೆ ಚುನಾವಣೆ ನಡೆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜನಪ್ರಿಯ ಪಂಚಗ್ಯಾರಂಟಿ ಯೋಜನೆಗಳನ್ನು ಮೆಟ್ಟಿ ಪ್ರತಿಪಕ್ಷ ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ಸ್ಪಷ್ಟ ಜನಾದೇಶ ಪಡೆದು ಸರ್ಕಾರ ರಚನೆ ಮಾಡಲಿದೆ ಎಂದು ಖಾಸಗಿ ಸಂಸ್ಥೆಯ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಆದಾಗ್ಯೂ ಸಮೀಕ್ಷೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದುವರೆದಿದ್ದಾರೆ.

ಹೈದರಾಬಾದ್ ಮೂಲದ ಪೀಪಲ್ಸ್ ಪಲ್ಸ್ ಆರ್ಗನೈಸೇಷನ್ ಎಂಬ ಸರ್ಕಾರೇತರ ಸಂಸ್ಥೆಯೊಂದು, ಕೊಮೆಡೊ ಟೆಕ್ನಾಲಜೀಸ್ ಎಂಬ ಸಂಸ್ಥೆಯೊಂದಿಗೆ ಸೇರಿ ಕರ್ನಾಟಕದ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆಯ ವರದಿಯಂತೆ, ಕರ್ನಾಟಕದ ಪ್ರಸಕ್ತ ಸನ್ನಿವೇಶದಲ್ಲೇನಾದರೂ ಚುನಾವಣೆ ನಡೆದರೆ ಬಿಜೆಪಿಯು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಅಂಶ ತಿಳಿದುಬಂದಿದೆ.

ಒಂದು ತಿಂಗಳ ಕಾಲ ನಡೆದ ಸಮೀಕ್ಷೆಯಲ್ಲಿ, ಬಿಜೆಪಿ 136-159 ಸ್ಥಾನಗಳನ್ನು ಗಳಿಸುವ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 40.3 ಪ್ರತಿಶತದಷ್ಟು (2023ರಲ್ಲಿ 42.88 ಪ್ರತಿಶತ) ಕಡಿಮೆ ಮತ ಹಂಚಿಕೆಯೊಂದಿಗೆ 62-82 ಸ್ಥಾನಗಳನ್ನು ಗೆಲ್ಲಲಿದೆ ಎಂದು ಊಹಿಸಲಾಗಿದೆ. ಆಡಳಿತ ಪಕ್ಷವು ಗಮನಾರ್ಹ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂದು ಸಮೀಕ್ಷೆಯಿಂದ ಗೊತ್ತಾಗಿದೆ.

ಕುತೂಹಲಕಾರಿಯಾಗಿ, ಜೆಡಿ(ಎಸ್) ಕೇವಲ 3-6 ಸ್ಥಾನಗಳನ್ನು ಮಾತ್ರ ಗೆಲ್ಲುವ ಮೂಲಕ ಶೇ. 5ರಷ್ಟು (2023 ರಲ್ಲಿ ಶೇ. 18.3) ಮತಗಳ ಪಾಲನ್ನು ಪಡೆಯಲಿದೆ. ಬಿಜೆಪಿ ಕಳೆದ 20 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಮೂರು ಬಾರಿ (2004, 2008, 2018) ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಒಟ್ಟು 224 ಸ್ಥಾನಗಳಲ್ಲಿ 113 ಸ್ಥಾನಗಳ ಮ್ಯಾಜಿಕ್ ಸಂಖ್ಯೆಯನ್ನು (ಸರಳ ಬಹುಮತ) ಮುಟ್ಟುವ ಮೂಲಕ ಅದು ಎಂದಿಗೂ ಅಧಿಕಾರವನ್ನು ಪಡೆದುಕೊಂಡಿಲ್ಲ.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಕಾಂಗ್ರೆಸ್, ಆನಂತರ ತನ್ನ ಹಲವಾರು ನಿರ್ಧಾರಗಳಿಂದ ಜನರಿಗೆ ಬೇಸರ ತರಿಸಿತು ಎಂದರೆ ತಪ್ಪೇನಿಲ್ಲ. ಅಭಿವೃದ್ಧಿ ಕೆಲಸದ ಜೊತೆಗೆ ಒಂದಿಷ್ಟು ಹಗರಣಗಳೂ ಕೇಳಿ (ಉದಾಹರಣೆಗೆ ವಾಲ್ಮೀಕಿ ಹಗರಣ, ಮುಡಾ ಹಗರಣ) ಬಂದಿತ್ತು. ಅದರಲ್ಲೂ ಮುಡಾ ಹಗರಣ ರಾಜ್ಯಾದಂತ ಆಲ್ಲೋಲ್ಲ-ಕಲ್ಲೋಲ ಸೃಷ್ಟಿಸಿತ್ತಲ್ಲದೆ, ಸರ್ಕಾರಕ್ಕೆ ಭಾರೀ ಮುಜುಗರ ತಂದೊಡ್ಡಿತ್ತು. ವಾಲ್ಮೀಕಿ ನಿಗಮ ಹಗರಣ ಸಚಿವ ನಾಗೇಂದ್ರರ ರಾಜೀನಾಮೆಗೆ ಕಾರಣವಾಗಿತ್ತು. ಹಾಗಾಗಿ, ಇತ್ತೀಚೆಗೆ ನಡೆಸಲಾಗಿದ್ದ ಸಮೀಕ್ಷೆಯಲ್ಲಿ 2 ವರ್ಷಗಳ ಕಾಂಗ್ರೆಸ್ ಆಡಳಿತ ನಮಗೆ ತೃಪ್ತಿ ತಂದಿಲ್ಲ ಎಂದು ಹೇಳಿದ್ದರು.

ಕಳೆದ 20 ವರ್ಷಗಳಿಂದ ಕರ್ನಾಟಕ ರಾಜಕೀಯದಲ್ಲಿ ಪ್ರಧಾನ ಪಕ್ಷವಾಗಿರುವ ಬಿಜೆಪಿ, ಮೂರು ಬಾರಿ (2004, 2008 ಹಾಗೂ 2018) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಆ ಮೂರೂ ಸಂದರ್ಭಗಳಲ್ಲಿ ತನ್ನ ಸ್ವಂತ ಬಲದಲ್ಲಿ ಅಧಿಕಾರ ಪಡೆದಿಲ್ಲ, ಅಂದರೆ, 224 ಸೀಟುಗಳಲ್ಲಿ ಅಧಿಕಾರ ಹಿಡಿಯಲು ಬೇಕಾದ 113 ಸ್ಥಾನಗಳನ್ನು ಅದು ಗಳಿಸಿಲ್ಲ, ಆದರೆ, ಈಗ ಚುನಾವಣೆ ನಡೆದರೆ 136ರಿಂದ 159 ಸೀಟುಗಳು ಬಿಜೆಪಿಗೆ ಬಂದು ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಂತಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಈಗ ಅಧಿಕಾರದಲ್ಲಿರುವ ಕಾಂಗ್ರೆಸ್, 62ರಿಂದ 82 ಸ್ಥಾನಗಳನ್ನು ಗಳಿಸಬಹುದಷ್ಟೇ. ಅಲ್ಲದೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಆ ಪಕ್ಷದ ವೋಟ್ ಶೇರ್ ಶೇ. 40.3ಕ್ಕೆ ಇಳಿಯಲಿದೆ ಎಂದು ಹೇಳಲಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಶೇ. 42.33 ವೋಟ್ ಶೇರ್ ಸಿಕ್ಕಿತ್ತು. ಇಂದು ಚುನಾವಣೆ ನಡೆದರೆ ಆಡಳಿತಾರೂಢ ಕಾಂಗ್ರೆಸ್ಸಿಗೆ ಈ ಮಟ್ಟದಲ್ಲಿ ಹಿನ್ನಡೆಯಾಗಲು, ರಾಜ್ಯಾದ್ಯಂತ ಎದ್ದಿರುವ ಆಡಳಿತ ವಿರೋಧಿ ಅಲೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜೆಡಿಎಸ್ ಕಥೆಯೇನು?
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್, ಈಗಲೂ ಅದೇ ಮೈತ್ರಿಯಲ್ಲಿ ಮುಂದುವರಿದಿದೆ. ಈಗ ಕರ್ನಾಟಕದಲ್ಲಿ ಚುನಾವಣೆ ನಡೆದರೆ, ಜೆಡಿಎಸ್ ಪಕ್ಷ 3ರಿಂದ 6 ಸೀಟುಗಳನ್ನು ಗೆಲ್ಲಬಹುದಷ್ಟೇ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಿದ್ದರಾಮಯ್ಯನವರೇ ಪಾಪ್ಯುಲರ್!
ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಾತೀತವಾಗಿ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಮುಖವಾಗಿ ಉಳಿದಿದ್ದಾರೆ. ಶೇಕಡಾ 29.2 ರಷ್ಟು ಮತದಾರರು ಸಿದ್ದರಾಮಯ್ಯ ಅವರಿಗೆ ಮತ ಹಾಕಿದರೆ, ಶೇಕಡಾ 10.7 ರಷ್ಟು ಮತದಾರರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮತ ಹಾಕಿದ್ದಾರೆ. ಕುತೂಹಲಕಾರಿಯಾಗಿ, ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ (ಶೇಕಡಾ 5.5), ಬಸವರಾಜ ಬೊಮ್ಮಾಯಿ (ಶೇಕಡಾ 3.6) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (ಶೇಕಡಾ 5.2) ಅವರಂತಹ ಬಿಜೆಪಿ ಅಭ್ಯರ್ಥಿಗಳಲ್ಲಿ ಯಾರೂ ಎರಡಂಕಿಯ ಗಡಿ ದಾಟದಿದ್ದರೂ, ಶೇಕಡಾ 16.9 ರಷ್ಟು ಜನರು ಯಾವುದೇ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಶೇಕಡಾ 48.4 ರಷ್ಟು ಜನರು ಕಾಂಗ್ರೆಸ್ ಆಡಳಿತವು ತುಂಬಾ ಒಳ್ಳೆಯದು ಅಥವಾ ಒಳ್ಳೆಯದು ಎಂದು ಭಾವಿಸಿದರೆ, ಉಳಿದ ಶೇಕಡಾ 51.6 ರಷ್ಟು ಜನರು ಅದು ಸರಾಸರಿ, ಕೆಟ್ಟದು ಅಥವಾ ತುಂಬಾ ಕೆಟ್ಟದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ, ಚುನಾವಣೆಯಾದರೆ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂದು ಸಮೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಗೆ, ಶೇ. 29.2ರಷ್ಟು ಜನರು ಸಿದ್ದರಾಮಯ್ಯ ಎಂದು ಹೇಳಿದ್ದರೆ, ಶೇ. 10.7 ರಷ್ಟು ಜನರು ಹಾಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೆಸರು ಹೇಳಿದ್ದಾರೆ.

ಜಾತಿ ಜನಗಣತಿಗೆ ಒಲವು :
ಪ್ರತಿಕ್ರಿಯಿಸಿದವರಲ್ಲಿ ಶೇ.42.3ರಷ್ಟು ಜನರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು (ಜಾತಿ ಜನಗಣತಿ) ಸಂಪೂರ್ಣವಾಗಿ ಅಥವಾ ಭಾಗಶಃ (ಶೇ. 26.3 ರಷ್ಟು ಸಂಪೂರ್ಣವಾಗಿ, ಶೇ.16 ಭಾಗಶಃ) ನಂಬಿದ್ದಾರೆ. ಶೇ. 35ರಷ್ಟು ಜನರು ವರದಿಯನ್ನು ನಂಬಲಿಲ್ಲ. ಆದರೆ ಶೇ.22.7ರಷ್ಟು ಜನರು ಈ ಪ್ರಕ್ರಿಯೆಯ ಬಗ್ಗೆ ತಿಳಿದಿರಲಿಲ್ಲ.ಕಾಂಗ್ರೆಸ್ ಪರವಾಗಿ ಪ್ರತಿಕ್ರಿಯಿಸಿದವರಲ್ಲಿ ಶೇ. 39.6 ರಷ್ಟು ಜನರು ವರದಿಯನ್ನು ಸಂಪೂರ್ಣವಾಗಿ ನಂಬಿದ್ದರೆ, ಬಿಜೆಪಿಯನ್ನು ಆಯ್ಕೆ ಮಾಡಿದ ಶೇ. 18.5ರಷ್ಟು ಜನರು ಅದನ್ನು ಸಂಪೂರ್ಣವಾಗಿ ನಂಬಿದ್ದಾರೆ.

ಗೃಹ ಲಕ್ಷ್ಮಿ ಅತ್ಯಂತ ಜನಪ್ರಿಯ ಖಾತರಿ :
ಶೇಕಡಾ 45.4 ರಷ್ಟು ಮತದಾರರ ಬಹುಮತದೊಂದಿಗೆ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ.ಗಳನ್ನು ಒದಗಿಸುವ ಗೃಹ ಲಕ್ಷ್ಮಿ ಯೋಜನೆಯು ಕಾಂಗ್ರೆಸ್‌ನ ಐದು ಪ್ರಮುಖ ಭರವಸೆಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ ಎಂದು ಕಂಡುಬಂದಿದೆ.ಶಕ್ತಿ (ಶೇಕಡಾ 19), ಅನ್ನ ಭಾಗ್ಯ (ಶೇಕಡಾ 17), ಗೃಹ ಜ್ಯೋತಿ (ಪ್ರತಿಶತ 13.5) ಮತ್ತು ಯುವ ನಿಧಿ (ಶೇಕಡಾ 2) ಯೋಜನೆಗಳು ನಂತರ ಬಂದವು. ಶೇಕಡ 3 ರಷ್ಟು ಪ್ರತಿಕ್ರಿಯಿಸಿದವರು ತಮಗೆ ಖಾತರಿಗಳ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದಿದ್ದ ರಾಜ್ಯ ಕಾಂಗ್ರೆಸ್ ಸರಕಾರದ ಸಾಧನಾ ಸಮಾವೇಶದ ಬೆನ್ನಲ್ಲೇ ಬಿಜೆಪಿ ಕರ್ನಾಟಕ ಲೂಟಿ -ಕಾಂಗ್ರೆಸ್ ಡ್ಯೂಟಿಟಿ ಎಂಬ ಪೋಸ್ಟರ್ ಬಿಡುಗಡೆ ಮಾಡಿದೆ. ವ್ಯಾಪಕವಾದ ಭ್ರಷ್ಟಾಚಾರ, ಬೆಲೆ ಏರಿಕೆ, ಹಿಂದೂ ಕಾರ್ಯಕರ್ತರ ಹತ್ಯೆಗಳು ಸರಕಾರದ ಸಾಧನೆಯೇ ಎಂದು ಬಿಜೆಪಿಯು ಪ್ರಶ್ನಿಸಿದೆ. ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ದೂರಿದ್ದಾರೆ. ಯಾವ ಸಚಿವರಲ್ಲೂ ಉತ್ಸಾಹವಿಲ್ಲ ಎಂದು ಬಿಜೆಪಿ ಟೀಕಿಸಿದೆ.

ಇತ್ತೀಚೆಗೆ, ಕರ್ನಾಟಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅಪರೇಷನ್ ಸಿಂಧೂರ್ ನಂತರದಲ್ಲಿ ತಿರಂಗಾ ಯಾತ್ರೆ ಮಾಡಿತ್ತು. ಈ ವಿಚಾರದ ಕುರಿತಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರ ಉಂಟಾಗಿತ್ತು. ಕಾಂಗ್ರೆಸ್ ತಿರಂಗಾ ಯಾತ್ರೆಯನ್ನು ಕೇವಲ ದೇಶದ ವಿಚಾರವಾಗಿ ಮಾತ್ರ ಮಾಡಿದ್ದು ಈ ಯಾತ್ರೆಗೆ ನಾವು ಎಲ್ಲರನ್ನೂ ಕರೆದಿದ್ದೇವೆ. ಆದರೆ ಅವರು ನಾವು ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಗೆ ಬಿಜೆಪಿ ನಾಯಕರು ಬರಲಿಲ್ಲ. ಈಗ ಅವರು ಮಾಡುತ್ತಿದ್ದಾರೆ ಎಂದು ಡಾ. ಜಿ ಪರಮೇಶ್ವರ್ ಇತ್ತೀಚೆಗೆ ಹೇಳಿದ್ದರು.

RELATED ARTICLES

Latest News