ಬೆಂಗಳೂರು, ಮೇ25– ನಗರ ಹೊರವಲಯದ ರೆಸಾರ್ಟ್‌ವೊಂದರಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದೇವನಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ನಶೆಯಲ್ಲಿ ತೇಲಾಡುತ್ತಿದ್ದ ಸುಮಾರು 31ಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿಯ ಕನ್ನಮಂಗಲ ಸಮೀಪದ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಎಸಿಪಿ ನವೀನ್ ನೇತೃತ್ವದಲ್ಲಿ ಪೊಲೀಸರ ತಂಡ ತಡರಾತ್ರಿ ದಾಳಿ ಮಾಡಿದೆ.
ಪೊಲೀಸರು ಬಂದಾಗಲೂ ಕೆಲವರು ಮಾದಕದ ನಶೆಯಲ್ಲಿ ತೂರಾಡುತ್ತಿದ್ದರು. ನಂತರ ಅವರನ್ನು ವಶಕ್ಕೆ ಪಡೆಯಲಾಗಿದೆ. ಫಾರ್ಮ್ ಹೌಸ್ ಪರಿಶೀಲನೆ ವೇಳೆ ಗಾಂಜಾ, ಕೊಕೈನ್ ಸೇರಿದಂತೆ ಹಲವು ಮಾದಕ ವಸ್ತುಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ.
ಏಳು ಮಂದಿ ಯುವತಿಯರು ಹಾಗೂ 24 ಮಂದಿ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಎಲ್ಲರ ರಕ್ತಪರೀಕ್ಷೆ ಮಾಡಿಸಲಾಗುತ್ತಿದೆ. ಈ ಪಾರ್ಟಿಯಲ್ಲಿ ಬಹುತೇಕ ಮಂದಿ ಹೊರ ರಾಜ್ಯಗಳ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಇದ್ದಾರೆ ಎಂದು ತಿಳಿದುಬಂದಿದೆ.
ಜಿಟಿ ಜಿಟಿ ಮಳೆಯ ನಡುವೆಯೂ ಜೋರು ಡಿಜೆ ಶಬ್ದ ಹಾಗೂ ಮಾದಕ, ಮದ್ಯದ ನಶೆಯಲ್ಲಿ ಇವರೆಲ್ಲರೂ ತೇಲಾಡುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫಾರ್ಮ್ ಹೌಸ್‌ನ ಮೇಲ್ವಿಚಾರಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಈ ರೇವ್ ಪಾರ್ಟಿಯನ್ನು ಆಯೋಜಿಸಿದವರು ಯಾರು? ಈ ಪಾರ್ಟಿಗೆ ಮಾದಕವಸ್ತುಗಳನ್ನು ಸರಬರಾಜು ಮಾಡಿದವರ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಫಾರ್ಮ್ ಹೌಸ್‌ನ ತುಂಬೆಲ್ಲ ಮದ್ಯದ ಬಾಟಲ್ ಸೇರಿದಂತೆ ಹಲವಾರು ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಪೊಲೀಸರನ್ನು ಕಂಡು ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.