ಬೆಂಗಳೂರು, ಮೇ 25– ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆ ಸೋಂಕಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ 34, ಗ್ರಾಮಾಂತರದಲ್ಲಿ 1 ಸೇರಿ ರಾಜ್ಯದಲ್ಲಿ 40ಕ್ಕೂ ಹೆಚ್ಚು ಮಂದಿ ಸೋಂಕಿಗೆ ಸಿಲುಕಿದ್ದಾರೆ. 85 ವರ್ಷದ ವಯೋವೃದ್ಧರೊಬ್ಬರು ಕೋವಿಡ್‌ನಿಂದಾಗಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಜಾಗೃತರಾಗುವ ಅನಿವಾರ್ಯತೆ ಹೆಚ್ಚಿದೆ.
ಕೋವಿಡ್ ರೂಪಾಂತರಿ ಓಮಿಕ್ರಾನ್ ಉಪತಳಿ ಜೆ-1 ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಈಗಾಗಲೇ ಈ ಸೋಂಕಿಗೆ ಯುವಕ ಸೇರಿ ಮೂವರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೇ 17 ರಂದು 85 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಅವರಿಗೆ ಕೋವಿಡ್ ಸೋಂಕಿರುವುದು ಖಚಿತವಾಗಿದೆ.
ರಾಜಾಜಿನಗರದ ಇಬ್ಬರಿಗೆ ಯಾವುದೇ ಪ್ರವಾಸದ ಇತಿಹಾಸ ಇಲ್ಲದೇ ಇದ್ದರೂ ಕೋವಿಡ್ ಸೋಂಕು ತಗುಲಿರುವುದರಿಂದ ಅವರ ಸಂಪರ್ಕದಲ್ಲಿದ್ದವರನ್ನು ತಪಾಸಣೆಗೊಳಪಡಿಸಲಾಗಿದೆ. ಇಂದಿನಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಆರಂಭಿಸಲಾಗಿದೆ.
ಜ್ವರ, ನೆಗಡಿ, ಕೆಮ್ಮು, ಹೃದಯ ಸಂಬಂಧಿ ಹಾಗೂ ಉಸಿರಾಟದ ತೊಂದರೆ ಇರುವವರು ಎಚ್ಚರಿಕೆಯಿಂದಿರುವ ಜೊತೆಗೆ ಕಡ್ಡಾಯವಾಗಿ ಸೋಂಕು ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.
ಗರ್ಭಿಣಿಯರಿಗೆ, ವೃದ್ಧರಿಗೆ ಮತ್ತು ರೋಗಲಕ್ಷಣಗಳಿರುವ ಶಂಕಿತರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ಈ ಮೊದಲು ಕೋವಿಡ್ ಸೋಂಕು ಉಲ್ಬಣದಲ್ಲಿದ್ದಾಗ ಆರಂಭಿಸಲಾಗಿದ್ದ 8 ಕೋವಿಡ್ ಸೋಂಕು ಪರೀಕ್ಷಾ ಲ್ಯಾಬ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಈಗ ಅವುಗಳನ್ನು ಪುನರ್ ಆರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಪರೀಕ್ಷಾ ಕಿಟ್‌ಗಳ ಕೊರತೆ ಕಂಡುಬಂದಿದೆ. ಪರೀಕ್ಷಾ ಫಲಿತಾಂಶ ಶೀಘ್ರವಾಗಿ ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಆಸ್ಪತ್ರೆಗಳಲ್ಲಿ ಐಸೋಲೇಶನ್ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ.