ಬೆಂಗಳೂರು, ಮೇ 25- ಬಿಜೆಪಿಯ 18 ಶಾಸಕರ ಅಮಾನತು ಆದೇಶವನ್ನು ಹಿಂಪಡೆಯಲು ಚಿಂತನೆ ನಡೆದಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷವಿರಲಿ ಸಂವಿಧಾನ ಪೀಠಕ್ಕೆ ಗೌರವ ನೀಡಲೇಬೇಕು. ಪೀಠಕ್ಕೆ ಆಗೌರವವಾದ ಹಿನ್ನೆಲೆಯಲ್ಲಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು ಎಂದರು.
ಅದರ ಬಳಿಕ ಶಾಸಕರು, ಪ್ರತಿಪಕ್ಷದ ನಾಯಕರು ಹಾಗೂ ಬಹಳಷ್ಟು ನಾಯಕರು ಚರ್ಚೆಯ ಸಂದರ್ಭದಲ್ಲಿ ಏನೋ ಹೆಚ್ಚುಕಮ್ಮಿಯಾಗಿದೆ. ಅಮಾನತು ಆದೇಶವನ್ನು ಹಿಂಪಡೆಯಿರಿ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದಾರೆ ಎಂದು ಹೇಳಿದರು. ಎಲ್ಲರ ಬೇಡಿಕೆಯಂತೆ ಆಮಾನತನ್ನು ಹಿಂಪಡೆಯಲು ಆಲೋಚನೆ ನಡೆದ್ದಿದ್ದು, ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಯಾವ ರೀತಿ ಸಡಿಲ ಮಾಡಬೇಕು ಎಂಬುದನ್ನು ಪರಿಶೀಲಿಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್.ಕೆ.ಪಾಟೀಲ್, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇತರರ ಜೊತೆ ಇಂದು ಸಂಜೆ ಚರ್ಚೆ ನಡೆಸಲಾಗುವುದು ಎಂದರು.
ಸಚಿವ ಸಂಪುಟ ಸಭೆಯಿಂದ ಶಾಸಕರ ಅಮಾನತು ಆದೇಶ ಹಿಂಪಡೆಯುವ ಬಗ್ಗೆ ಸಲಹೆ ಪಡೆದಿರುವ ಬಗ್ಗೆ ಪ್ರತಿಕ್ರಯಿಸಿದ ಸಭಾಧ್ಯಕ್ಷರು, ಅಂದು ಗದ್ದಲವಾದಾಗ ತಾವು ಕಲಾಪದಲ್ಲಿ ಅದನ್ನು ಪ್ರಸ್ತಾಪಿಸಿದ್ದು, ಅದನ್ನು ಬಹುಮತದಿಂದ ಶಾಸಕಾಂಗ ನಿರ್ಣಯ ಅಂಗೀಕರಿಸಿದೆ. ಆ ರೀತಿ ತೆಗೆದುಕೊಂಡ ನಿರ್ಣಯವನ್ನು ವಿಧಾನಸಭಾಧ್ಯಕ್ಷರು ಏಕಮುಖವಾಗಿ ಹಿಂಪಡೆಯುವುದು ಸೂಕ್ತವಲ್ಲ. ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಆದರೆ ಹೇಗೆ ಹಿಂಪಡೆಯಬೇಕು ಎಂಬುದಕ್ಕೆ ಸರ್ಕಾರ ಮತ್ತು ಪ್ರತಿಪಕ್ಷದ ಸಹಕಾರ ಅಗತ್ಯ. ಈ ಹಿನ್ನೆಲೆಯಲ್ಲಿ ಸಂಪುಟದ ಅಭಿಪ್ರಾಯ ಸಂಗ್ರಹಿಸಿದ್ದಾಗಿ ತಿಳಿಸಿದರು.
ಯಾವುದೋ ಸಂದರ್ಭದಲ್ಲಿ ಹೆಚ್ಚಿಕಡಿಮೆಯಾಗುತ್ತದೆ. ಆರು ತಿಂಗಳ ಕಾಲ 18 ಮಂದಿ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಅದರಲ್ಲಿ ಈಗಾಗಲೇ ಎರಡು ತಿಂಗಳು ಮುಗಿದಿದೆ. ಈ ದೇಶದಲ್ಲಿ ಎಂಥವರಿಗೂ ಕ್ಷಮೆಯಿದೆ. ಶಾಸಕರು ನಮ್ಮವರೇ. ಹಾಗಾಗಿ ಎಲ್ಲರೂ ಸೇರಿ ವಿಚಾರವನ್ನು ಇತ್ಯರ್ಥಗೊಳಿಸುತ್ತೇವೆ ಎಂದರು.
ನಾವೆಲ್ಲಾ ಒಟ್ಟಾಗಿದ್ದೇವೆ. ಸಕಾರಾತ್ಮಕವಾಗಿ ನಿರ್ಣಯ ತೆಗೆದುಕೊಳ್ಳುತ್ತೇವೆ. ಶಾಸಕರ ವಿರುದ್ಧ ಕ್ರಮ ಕೈಗೊಂಡಿರುವುದು ಬಿಜೆಪಿಯವರು ಎಂಬ ಕಾರಣಕ್ಕಾಗಿ ಅಲ್ಲ. ಸಂವಿಧಾನಪೀಠಕ್ಕೆ ಆಗೌರವ ತೋರಿಸಿದರು ಎಂಬ ಕಾರಣಕ್ಕಾಗಿ ಅಮಾನತುಗೊಳಿಸಲಾಗಿತ್ತು ಎಂದು ಹೇಳಿದರು.
ಹಿನ್ನೆಲೆ :
ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ, ಭೈರತಿ ಬಸವರಾಜು, ಮುನಿರತ್ನ, ದೊಡ್ಡನಗೌಡ ಪಾಟೀಲ್, ಎಸ್.ಆರ್.ವಿಶ್ವನಾಥ್, ಚನ್ನಬಸಪ್ಪ, ಪಾಟೀಲ್, ಸುರೇಶ್ ಗೌಡ, ಶರಣು ಸಲಗಾರ್, ಶೈಲೇಂದ್ರ ಬೆಳದಾಲೆ, ಸಿ.ಕೆ.ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರೀಶ್, ಭರತ್ ಶೆಟ್ಟಿ, ಚಂದ್ರು ಲಮಾಣಿ, ಧೀರಜ್ ಮುನಿರಾಜು, ಉಮಾನಾಥ್ ಕೋಟ್ಯಾನ್, ಬಸವರಾಜ್ ಮತ್ತಿ ಮೋಡ್ ಸೇರಿ 18 ಶಾಸಕರನ್ನು ಬಜೆಟ್ ಅಧಿವೇಶನದಲ್ಲಿ ಸಭಾಧ್ಯಕ್ಷರು ಆರು ತಿಂಗಳ ಕಾಲ ಅಮಾನತು ಮಾಡಿದ್ದರು.
ಆಮಾನತಿನ ಬಳಿಕ ಕಠಿಣ ಷರತ್ತುಗಳನ್ನು ವಿಧಿಸಲಾಗಿತ್ತು. ಶಾಸಕರು ವಿಧಾನಸೌಧಕ್ಕೆ ಬರುವಂತಿಲ್ಲ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂಬೆಲ್ಲಾ ಕಟ್ಟುಪಾಡುಗಳಿದ್ದವು. ಶಾಸಕರ ಅಮಾನತು ಸಾಮಾನ್ಯವಾಗಿ ಆಯಾ ಅಧಿವೇಶನಕ್ಕೆ ಸೀಮಿತವಾಗಿರುತ್ತದೆ. ಆದರೆ ಈ ಬಾರಿಯ 18 ಮಂದಿಯನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಿದ್ದು ಮತ್ತು ಶಾಸಕರಿದ್ದೂ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು ಭಾರೀ ಚರ್ಚೆ ಉಂಟಾಗಿ ಬಿಜೆಪಿ ನಾಯಕರು ಅಮಾನತನ್ನು ಹಿಂಪಡೆಯಬೇಕು ಎಂದು ಪದೇಪದೇ ಒತ್ತಾಯಿಸಿದ್ದರು.
ಬಿಜೆಪಿ ಶಾಸಕರ ನಿಯೋಗ ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಸಭಾಧ್ಯಕ್ಷರು ಮತ್ತು ಸಭಾಧ್ಯಕ್ಷರ ಪೀಠದ ಬಗ್ಗೆ ಗೌರವವಿದೆ. ಆದರೆ, ಸಚಿವ ಕೆ.ಎನ್.ರಾಜಣ್ಣ ಅವರು ಪ್ರಸ್ತಾಪಿಸಿದ ಹನಿಟ್ರಾಪ್ ವಿಚಾರದ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಲಾಗಿತ್ತು ಎಂದು ಬಿಜೆಪಿ ಸಮಜಾಯಿಷಿ ನೀಡಿದೆ. ಅಲ್ಲದೆ, ಬಿಜೆಪಿ ಶಾಸಕರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡಿದೆ. ಜೊತೆಗೆ ಸಭಾಧ್ಯಕ್ಷರು ಶಾಸಕರ ಅಮಾನತು ಆದೇಶ ವಾಪಸ್ಸು ಪಡೆಯದಿದ್ದರೆ, ನ್ಯಾಯಾಲಯದ ಮೊರೆ ಹೋಗುವುದಾಗಿ ಬಿಜೆಪಿ ಹೇಳಿತ್ತು. ಆದರೂ ಇದುವರೆಗೆ ಶಾಸಕರ ಅಮಾನತು ರದ್ದಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಸ್ಪೀಕರ್ ತೀರ್ಮಾನಗಳಿಗೆ ಬದ್ಧ : ಡಿಕೆಶಿ
ಬಿಜೆಪಿಯ 18 ಶಾಸಕರ ಅಮಾನತು ಆದೇಶದ ಬಗ್ಗೆ ಸಹಾನೂಭೂತಿಯಿದ್ದು ಸ್ಪೀಕರ್ ಅವರು ತೆಗೆದುಕೊಳ್ಳುವ ತೀರ್ಮಾನಗಳಿಗೆ ಬದ್ಧವಾಗಿರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ಶಾಸಕರು, ನಾಯಕರು ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಅದರ ಆಧಾರದ ಮೇಲೆ ಇಂದು ಸಭೆ ಕರೆಯಲಾಗಿದೆ. ಅಲ್ಲಿ ಏನು ಚರ್ಚೆಯಾಗಲಿದೆ. ಯಾವ ಪ್ರಸ್ತಾವನೆ ಮಂಡನೆಯಾಗಲಿದೆ ಎಂಬುದು ಗೊತ್ತಿಲ್ಲ ಎಂದರು.
ಶಾಸಕರ ಅಮಾನತನ್ನು ಹಿಂಪಡೆಯುವ ಬಗ್ಗೆ ಸಹಾನೂಭೂತಿಯಿಂದಿದ್ದೇವೆ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಸ್ಪೀಕರ್ ಅವರು ಯಾವುದೇ ತೀರ್ಮಾನ ತೆಗೆದುಕೊಂಡರೂ ಬೆಂಬಲಸುತ್ತೇವೆ ಎಂದು ತಿಳಿಸಿದರು. ಕೋವಿಡ್ ಸೋಂಕಿನ ಬಗ್ಗೆ ಮತ್ತೊಂದು ದಿನ ವಿವರಣೆ ನೀಡುವುದಾಗಿ ಹೇಳಿದರು.