ಬೆಂಗಳೂರು, ಮೇ 25 – ನಟ ಮಡೆನೂರು ಮನು ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು 31 ತಿಂಗಳ ವಾಟ್ಸ್ಆ್ಯಪ್ ಚಾಟ್‌ಗಳನ್ನು ಪಡೆಯಲಾಗಿದ್ದು, ತೀವ್ರ ಸ್ವರೂಪದ ತನಿಖೆ ನಡೆಸಲಾಗುತ್ತಿದೆ.
ಸಂತ್ರಸ್ತೆ ಮತ್ತು ಆರೋಪಿಯ ಮೊಬೈಲ್‌ಗಳನ್ನು ಜಪ್ತಿಪಡಿಸಿಕೊಂಡು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿದಂತೆ 2022 ರ ನವೆಂಬರ್‌ನಲ್ಲಿ ಮೊದಲ ಬಾರಿಯ ಅತ್ಯಾಚಾರದಿಂದ ಆರಂಭಿಸಿ 2025ರ ಮೇವರೆಗಿನ ವಾಟ್ಸ್ ಆ್ಯಪ್ ಚಾಟ್‌ಗಳು, ಕಾಲ್ ರೆಕಾರ್ಡ್ ಸೇರಿದಂತೆ ಇತರ ಸಂವಹನ ದತ್ತಾಂಶಗಳನ್ನು ರೀಡ್ರೈವ್ ಮಾಡಲಾಗಿದೆ. ಅದರ ಪ್ರಕಾರ ಸಂತ್ರಸ್ತೆ ನೀಡಿರುವ ಮಾಹಿತಿಗಳು ಬಹುತೇಕ ಖಚಿತ ಎಂದು ತಿಳಿದುಬಂದಿದೆ.
ಈ ದತ್ತಾಂಶಗಳಲ್ಲಿ ಹಲವು ನಟ, ನಟಿಯರ ಹೆಸರುಗಳು ಉಲ್ಲೇಖವಾಗಿವೆ. ಅತ್ಯಾಚಾರ ನಡೆದಾಗ ಆಘಾತಕ್ಕೊಳಗಾದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದು,
ಆಕೆಯನ್ನು ಮನವೊಲಿಸಿ ಕೆಲವರು ತಡೆದಿದ್ದರು ಎಂದು ಹೇಳಲಾಗಿದೆ. ಈ ಮಧ್ಯವರ್ತಿ ಸಂಧಾನಕಾರರಾಗಿರುವವರಲ್ಲಿ ನಟ, ನಟಿಯರು, ಖ್ಯಾತ ನಿರ್ದೇಶಕರು ಇರುವುದಾಗಿ ತಿಳಿದುಬಂದಿದೆ.
ಪೊಲೀಸರು ಈ ಮಾಹಿತಿ ಆಧರಿಸಿ ನಟ, ನಟಿಯರು ಹಾಗೂ ರಿಯಾಲಿಟಿ ಶೋ ನಡೆಸಿದ ಸಂಸ್ಥೆಯ ಪ್ರಮುಖರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ. ಮಡೆನೂರು ಮನು ಪ್ರಕರಣ ರಿಯಾಲಿಟಿ ಶೋಗಳ ಬಗ್ಗೆ ಭಾರೀ ಚರ್ಚೆ ಹುಟ್ಟುಹಾಕಿದೆ. ಟಿಆರ್ಪಿಗಾಗಿ ರಿಯಾಲಿಟಿ ಶೋನಲ್ಲಿ ಅಶ್ಲೀಲ ಹಾಗೂ ಕಳಪೆಮಟ್ಟದ ಹಾಗೂ ನೈತಿಕತೆ ಮಿತಿಯನ್ನು ದಾಟಿದ ವರ್ತನೆಗಳು, ಸಂಭಾಷಣೆಗಳನ್ನು ಶೋಗಳಲ್ಲಿ ಅಭ್ಯಸಿಸಲಾಗುತ್ತದೆ ಮತ್ತು ಅದನ್ನು ಪ್ರಕಟಿಸಲಾಗುತ್ತದೆ. ದಿನೇದಿನೇ ಪೈಪೋಟಿಯ ಭಾಗವಾಗಿ ರಿಯಾಲಿಟಿ ಶೋಗಳು ಯಾವುದೇ ಸೆನ್ಸಾರ್‌ನ ಅಡೆತಡೆ ಇಲ್ಲದೆ ಮನಸೋ ಇಚ್ಛೆ ವರ್ತನೆ ಪ್ರದರ್ಶಿಸುತ್ತವೆ. ಅದರ ಪರಿಣಾಮ ಈ ರೀತಿ ಬೆಳವಣಿಗೆಗಳಾಗಿವೆ ಎಂದು ಚರ್ಚೆಗಳು ನಡೆಯುತ್ತಿವೆ.
ಮಡೆನೂರು ಮನು ಪ್ರಕರಣದಲ್ಲಿ ಸಂತ್ರಸ್ತೆ ಆರಂಭದಲ್ಲಿ ದೂರು ನೀಡಿದರೆ ಪ್ರಕರಣ ಇಷ್ಟು ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ. ರಿಯಾಲಿಟಿ ಶೋಗೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕಾಗಿ ಆಕೆಯನ್ನು ತಡೆಯಲಾಗಿತ್ತು ಎಂಬ ಟೀಕೆಗಳಿವೆ.
ಸಂತ್ರಸ್ತೆ ತಮ್ಮ ಬಳಿ ಆರೋಪಕ್ಕೆ ಸಂಬಂಧಪಟ್ಟಂತೆ ಸೂಕ್ತ ಸಾಕ್ಷ್ಯಾಧಾರಗಳಿವೆ ಎಂದು ಹೇಳುತ್ತಿದ್ದರೆ, ತಮ್ಮ ಬಳಿಯೂ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಮಡೆನೂರು ಮನು ಅವರ ಪತ್ನಿ ದಿವ್ಯ ಸಮರ್ಥಿಸಿಕೊಂಡಿದ್ದಾರೆ. ಇಂದು ಮಡೆನೂರು ಮನು ಅವರನ್ನು ಶಿಕಾರಿಪುರಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆದಿದೆ ಎಂದು ಹೇಳಲಾದ ಹೋಟೆಲ್‌ನಲ್ಲಿ ಸ್ಥಳ ಮಹಜರು ನಡೆಸಲಾಗಿದೆ.