ಬೆಂಗಳೂರು, ಮೇ 26-ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸಂಡೂರು ತಾಲ್ಲೂಕಿನ ಲಕ್ಷ್ಮಿಪುರದ ನಿವಾಸಿಗಳಾದ ಜಯಲಕ್ಷ್ಮಿ,ಆಶಾ ಹಾಗೂ ಇಬ್ಬರು ಮಕ್ಕಳಾದ ಸ್ವಾತಿ ಮತ್ತು ಬಿಂದೂಶ್ರೀ ಅಪಘಾತದಲ್ಲಿ ಮೃತಪಟ್ಟವರು.ಕಾರಿನಲ್ಲಿ ಸಂಡೂರಿನಿಂದ ಆರು ಮಂದಿ ಹೊಸಪೇಟೆಗೆ ಹೋಗುತ್ತಿದ್ದಾಗ ಇಂದು ಬೆಳಗ್ಗೆ 9.30 ರ ಸುಮಾರಿನಲ್ಲಿ ಸಂಡೂರು-ಹೊಸಪೇಟೆ ರಸ್ತೆಯ ಜೈಸಿಂಗಾಪುರ ಬಳಿ ಅಜಾಗರೂಕತೆ ಹಾಗೂ ಅತೀ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದು ಸಂಡೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕಾರಿನೊಳಗೆ ಸಿಕ್ಕಿಕೊಂಡಿದ್ದ ನಾಲ್ವರ ಮೃತದೇಹಗಳನ್ನು ಹೊರ ತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಂಡೂರು ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.