ಬೆಂಗಳೂರು,ಮೇ27– ಒಳಮೀಸಲಾತಿ ಅನುಷ್ಠಾನ ಕುರಿತಾಗಿ ನಡೆಸುತ್ತಿರುವ ಸಮಗ್ರ ಸಮೀಕ್ಷೆಯಲ್ಲಿ ಎಲ್ಲಾ 101 ಜಾತಿಯ ಸಮುದಾಯದವರು ತಮ್ಮ ಮೂಲ ಜಾತಿಗಳನ್ನು ನೊಂದಾಯಿಸಬೇಕು ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ಗಾಂಧಿಭವನದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ .ಮುನಿಯಪ್ಪ ಹಾಗೂ ಆರ್.ಬಿ.ತಿಮ್ಮಾಪುರ ಅವರ ನೇತೃತ್ವದಲ್ಲಿ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಾದಿಗ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ದಾಸ್ ನೇತೃತ್ವದ ಏಕಸದಸ್ಯ ಆಯೋಗದ ನಿರ್ದೇಶನದಂತೆ ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ ನಡೆಸುತ್ತಿದ್ದು ಅದರಂತೆ ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಸಮೀಕ್ಷೆ ಹೆಚ್ಚಾಗಿ ನಡೆಸಲು ಆಯಾ ಭಾಗದ ಮುಖಂಡರಿಗೆ ನಿರ್ದೇಶನ ನೀಡಲಾಯಿತು.
ಬೆಂಗಳೂರು ನಗರದಲ್ಲಿ ಇಲ್ಲಿಯವರೆಗೂ ಶೇಕಡ 45ರಷ್ಟು ಸಮೀಕ್ಷೆ ನಡೆದಿದ್ದು ರಾಜ್ಯದಾದ್ಯಂತ ಶೇಕಡಾ 84 % ರಷ್ಟು ಪ್ರಮಾಣದಲ್ಲಿ ಸಮೀಕ್ಷೆಯಾಗಿದ್ದು ಸಮದಾಯದವರು ಎಲ್ಲಾರು ಸಮೀಕ್ಷೆಯಲ್ಲಿ ಭಾಗವಹಿಸಿ ಮತ್ತು ಆನ್‌ಲೈನ್‌ನಲ್ಲೂ ನೊಂದಣಿ ಮಾಡಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.

ಮೇ 5ರಿಂದ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಮೇ29ರವರೆಗೂ ಸಮೀಕ್ಷೆ ನಡೆಯಲಿದೆ. ಆನ್‌ಲೈನ್ ಮೂಲಕ ಜೂನ್ 1ರವರೆಗೂ ನೋಂದಣಿಗೆ ಅವಕಾಶವಿದ್ದು, ಅದರಂತೆ ಪರಿಶಿಷ್ಟ ಜಾತಿಯ 101 ಜಾತಿಗಳ ಸಮುದಾಯದವರು ತಮ್ಮ ಮೂಲಜಾತಿಗಳನ್ನು ನೊಂದಾಯಿಸುವಂತೆ ಮುಖಂಡರಿಗೆ ಮನವಿ ಮಾಡಿದರು.
ಇದು ಸಮುದಾಯದ ಅಳಿವು-ಉಳಿವಿನ ಪ್ರಶ್ನೆ. ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಸಮುದಾಯಗಳ ಆರ್ಥಿಕ ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಲು ಈ ಒಳಮೀಸಲಾತಿ ಅತ್ಯಗತ್ಯ. ಯಾರೂ ನಿರ್ಲಕ್ಷ್ಯ ಮಾಡದೇ ಸಮಗ್ರ ಸಮೀಕ್ಷೆಯಲ್ಲಿ ಮೂಲ ಜಾತಿಗಳ ಹೆಸರನ್ನು ನೊಂದಾಯಿಸಬೇಕು ಎಂದರು.
ಇದಕ್ಕೂ ಮುನ್ನ ಮಾಜಿ ಪ್ರಧಾನ ಮಂತ್ರಿ ಜವಹಾರ್ ಲಾಲ್ ನೆಹರೂ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ,ಮಾಜಿ ಶಾಸಕ ಧರ್ಮಸೇನ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ ಬೀಮಪ್ಪ, ತೇಗನೂರು, ಬಾಬುರಾಮ ಹುಡಬಿ, ಬೀಮಶಂಕರ್, ಮುಖಂಡರಾದ ಕೋಗಿಲು ವೆಂಕಟೇಶ್ , ಆರ್ ಲೋಕೇಶ್, ವಿಜಯಸಿಂಹ, ಗೌತಮ್, ನಾರಾಯಣ್ ದೊಡೇರಿ ವೆಂಕಟೇಶ್, ಮುತ್ತುರಾಜ್ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.