Thursday, May 29, 2025
Homeರಾಜ್ಯBIG BREAKING : ಬಿಜೆಪಿಯಿಂದ ಶಾಸಕರಾದ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಉಚ್ಚಾಟನೆ

BIG BREAKING : ಬಿಜೆಪಿಯಿಂದ ಶಾಸಕರಾದ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಉಚ್ಚಾಟನೆ

BJP expels MLAs Shivaram Hebbar, S.T. Somashekar

ಬೆಂಗಳೂರು, ಮೇ27– ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

ಕಳೆದ ಮಾರ್ಚ್ 26ರಂದು ಪಕ್ಷ ವಿರೋಧಿ ಚಟುವಟಿಕೆ . ಹಿನ್ನಲೆಯಲ್ಲಿ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟಿಸಿದ ಬೆನ್ನಲ್ಲೇ ಕೇಂದ್ರ ಬಿಜೆಪಿ ವರಿಷ್ಠರು ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರುಗಳಿಗೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಗೇಟ್ ಪಾಸ್ ನೀಡಿದೆ.

ಬೆಂಗಳೂರಿನ ಯಶವಂತಪುರ ಹಾಗೂ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಈ ಇಬ್ಬರು ಕಾಲ ಬದಲಾದ ನಂತರ ಕಾಂಗ್ರೆಸ್ ಜೊತೆ ಬಹಿರಂಗವಾಗಿ ಗುರುತಿಸಿಕೊಂಡಿದ್ದರು.

ಹಲವು ಬಾರಿ ಎಚ್ಚರಿಕೆ ಕೊಟ್ಟಿದ್ದರೂ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದ ಹಿನ್ನಲೆಯಲ್ಲಿ ಕೇಂದ್ರ ಶಿಸ್ತು ಸಮಿತಿ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಕೇಂದ್ರ ಬಿಜೆಪಿಯ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂಪಾಠಕ್ ಆದೇಶದಲ್ಲಿ ತಿಳಿಸಿದ್ದಾರೆ.

ಪಕ್ಷದಲ್ಲಿ ಶಿಸ್ತು ಮುಖ್ಯ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಂದೇಶವನ್ನು ಭಿನ್ನರಿಗೆ ರವಾನಿಸಿದೆ.
ಈ ಹಿಂದೆ ಈ ಇಬ್ಬರಿಗೂ ಪಕ್ಷ ವಿರೋಧಿ ಚಟುವಟಿಕೆ ಮೇಲೆ ನೋಟಿಸ್ ನೀಡಲಾಗಿತ್ತು. ಪಕ್ಷದ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದರೂ ನಿಮ್ಮ ಉತ್ತರ ತೃಪ್ತಿಕರಾಗಿಲ್ಲ ಎಂದು ಉಚ್ಚಾಟನೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ನಿಮಗೆ ಸ್ಪಷ್ಟನೆ ಕೊಟ್ಟಿದ್ದರೂ ನೀವು ತಪ್ಪುಗಳನ್ನು ಪುನರಾವರ್ತಿಸುತ್ತಲೇ ಇದ್ದೀರಿ. ಹೀಗಾಗಿ ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳುವ ಉದ್ದೇಶದಿಂದ ನಿಮ್ಮನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಸೂಚ್ಯವಾಗಿ ತಿಳಿಸಿದೆ.

ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಇಬ್ಬರು :
2018 ಹಾಗೂ 2023ರ ವಿಧಾನಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಈ ಇಬ್ಬರು ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನಲೆಯಲ್ಲಿ ಕಾಂಗ್ರೆಸ್ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದರು. ಶಾಸಕಾಂಗ ಸಭೆ ಸೇರಿದಂತೆ ಪಕ್ಷದ ಚಟುವಟಿಕೆ ಹಾಗೂ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳಬೇಡಿ ಎಂದು ರಾಜ್ಯ ಘಟಕ ಬಹಿರಂಗವಾಗಿ ಎಚ್ಚರಿಕೆ ಕೊಟ್ಟಿದ್ದರೂ ನಿರ್ಲಕ್ಷ್ಯ ಮಾಡಿದ್ದರು.

ಅದರಲ್ಲೂ ನಿರ್ಣಾಯಕವಾದ ರಾಜ್ಯ ಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಬಹಿರಂಗವಾಗಿಯೇ ಮತ ಹಾಕುವ ಮೂಲಕ ಬಿಜೆಪಿಗೆ ಭಾರೀ ಮುಜುಗರ ಸೃಷ್ಟಿಸಿದ್ದರು.

ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲೂ ಪಕ್ಷದ ಯಾವುದೇ ಹೋರಾಟದಲ್ಲೂ ಭಾಗಿಯಾಗಿರಲಿಲ್ಲ. ಬದಲಿಗೆ ಕಾಂಗ್ರೆಸ್ ಸರ್ಕಾರದ ಎಲ್ಲಾ ನಿರ್ಧಾರಗಳನ್ನು ಸ್ವಾಗತಿಸುತ್ತಿದ್ದರು. ಲೋಕಸಭೆ ಹಾಗೂ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಬೆಂಬಲಿಸುವ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಿದ್ದರು.
ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕೇಂದ್ರ ಬಿಜೆಪಿ ವರಿಷ್ಠರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಯತ್ನಾಳ್ ಉಚ್ಚಾಟನೆ ಸಂದರ್ಭದಲ್ಲೇ ಭಿನ್ನಮತಿಯರಿಗೆ ರವಾನಿಸಿದ್ದರು.

ಉಳಿದವರಿಗೂ ಆತಂಕ :
ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ.ಸೋಮಶೇಖರ್ ಉಚ್ಚಾಟನೆಗೊಂಡ ಬೆನ್ನಲ್ಲೇ ಇದೀಗ ಭಿನ್ನಮತ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪಕ್ಕೆ ಸಿಲುಕಿರುವ ಹರಿಹರ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೂ ಆತಂಕ ಶುರುವಾಗಿದೆ.

ಕೇಂದ್ರ ಬಿಜೆಪಿ ವರಿಷ್ಠರು ಇವರಿಗೂ ಕೂಡ ಸ್ಪಷ್ಟನೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಈಗಾಗಲೇ ಇದರ ಬಗ್ಗೆ ಸ್ಪಷ್ಟ ನೀಡಲಾಗಿದೆ. ಆದರೆ ವರಿಷ್ಠರು ಯಾವಾಗ ಏನು ಕ್ರಮ ಕೈಗೊಳ್ಳುತ್ತಾರೆಂಬ ಆತಂಕ ಶುರುವಾಗಿದೆ.

RELATED ARTICLES

Latest News