ಬೆಂಗಳೂರು,ಮೇ27- ನೈರುತ್ಯ ಮುಂಗಾರು ಮಳೆ ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಬೀಳುತ್ತಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ.
ಕಳೆದ ನಾಲ್ಕೈದು ದಿನಗಳಿಂದಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರೆದಿದೆ. ನಿನ್ನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಿರುನಾನಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ 193 ಮಿ.ಮೀ.ನಷ್ಟು ಭಾರೀ ಪ್ರಮಾಣದ ಮಳೆಯಾಗಿದೆ. ಅವಽಗೂ ಮುನ್ನ ಆರಂಭವಾಗಿರುವ ಮುಂಗಾರು ನಿರಂತರವಾಗಿ ಬೀಳುತ್ತಿದ್ದು ರಾಜ್ಯದ ಬಹುತೇಕ ಕಡೆಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ.
ಮಲೆನಾಡು ಹಾಗೂ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಆಯಾ ನದಿಪಾತ್ರದ ಜಲಾಶಯಗಳ ನೀರಿನ ಮಟ್ಟವು ಮೇ ತಿಂಗಳಿನಲ್ಲೇ ಗಣನೀಯ ಏರಿಕೆ ಕಂಡಿದೆ. ಇದರಿಂದ ಈ ಬಾರಿ ಜಲಾಶಯಗಳು ಬಹುಬೇಗ ಭರ್ತಿಯಾಗಬಹುದೆಂಬ ಆಶಾಭಾವನೆ ಮೂಡಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಕೊಡಗು, ದಕ್ಷಿಣಕನ್ನಡ, ಉಡುಪಿ, ಹಾಸನ, ಕಲಬುರಗಿ, ಉತ್ತರಕನ್ನಡ, ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ.
ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಬೆಳಗಾವಿ, ಕೊಪ್ಪಳ, ತುಮಕೂರು, ಬಾಗಲಕೋಟೆ, ದಾವಣಗೆರೆ ಮತ್ತು ಬೆಂಗಳೂರು ನಗರದಲ್ಲಿ ಸಾಧಾರಣ ಪ್ರಮಾಣದ ವ್ಯಾಪಕ ಮಳೆಯಾಗಿದೆ.ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದ್ದರೆ, ಹಾವೇರಿ, ಬೀದರ್, ಕೋಲಾರ, ಬೆಂಗಳೂರು ಗ್ರಾಮಾಂತರ, ಧಾರವಾಡ ಹಾಗೂ ವಿಜಯನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಭಾರೀ ಮಳೆ ಮುಂದುವರೆದಿದೆ. ಪೊನ್ನಂಪೇಟೆ 117, ಮಡಿಕೇರಿ 101, ಸೋಮವಾರಪೇಟೆ 94.5 ಬಂಟ್ವಾಳ 186.5, ಸರಪಾಡಿ 151.5, ಪಡುಮಾರ್ನಾರು, ಬೋಳಿಯಾರು, ಇಡ್ಕಿದುನಲ್ಲಿ 149, ಇಟ್ಲಾಪಡನೂರು, ಕಾರ್ಕಳ 180, ಸಕಲೇಶಪುರದ ಒಗದಹಳ್ಳದಲ್ಲಿ 149, ಅಬ್ಜಲ್‌ಪುರದ ಆನೂರು 111.5 ಮಿ.ಮೀನಷ್ಟು ಮಳೆಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ ಮೇ ಅಂತ್ಯದವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ. ಆನಂತರ ಒಂದು ವಾರ ಕಾಲ ಮಳೆ ಬಿಡುವು ಕೊಡುವ ಸಾಧ್ಯತೆಗಳಿವೆ.ಕರಾವಳಿ, ಮಲೆನಾಡು ಹಾಗು ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಪ್ರಮಾಣದ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಕೆಲವೆಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.