ಬೆಂಗಳೂರು,ಮೇ27– ಮಹಾನಗರದಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇಲ್ಲಿ ಹಲವು ದಶಕದಿಂದ ಅರಣ್ಯ ಭೂಮಿ ಒತ್ತುವರಿ ಆಗಿದ್ದು, ತಾವು ಸಚಿವನಾದ ಬಳಿಕ ಎರಡು ವರ್ಷದಲ್ಲಿ ಸುಮಾರು 4000 ಕೋಟಿ ರೂ. ಮಾರುಕಟ್ಟೆ ಮೌಲ್ಯದ 128 ಎಕರೆ ಅರಣ್ಯ ಒತ್ತುವರಿಯನ್ನು ತೆರವು ಮಾಡಿಸಿರುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ ತನ್ನ ವಶದಲ್ಲಿರುವ ಸುಮಾರು 14,300 ಕೋಟಿ ರೂ. ಮೌಲ್ಯದ 444 ಎಕರೆ ಅರಣ್ಯ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳು ಸೇರಿದಂತೆ ಹಲವು ಸಂಸ್ಥೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಅರಣ್ಯ ಜಮೀನು ಹಿಂಪಡೆದು, ಉದ್ಯಾನವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕಾನೂನು ಹೋರಾಟ ನಡೆದಿದೆ. ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಹಳೆ ಮೈಸೂರು ಭಾಗದಲ್ಲಿ ಬ್ರಿಟಿಷರ ಕಾಲದಲ್ಲಿ ವಿವಿಧ ವ್ಯಕ್ತಿ, ಸಂಸ್ಥೆಗಳಿಗೆ ಸುಮಾರು 5050 ಎಕರೆ ಅರಣ್ಯ ಭೂಮಿಯನ್ನು ದೀರ್ಘಕಾಲದ (999 ವರ್ಷ) ಗುತ್ತಿಗೆ ನೀಡಲಾಗಿತ್ತು. ಈ 999 ವರ್ಷದ ಗುತ್ತಿಗೆ ಅವಧಿಯನ್ನು ಸರ್ಕಾರ 99 ವರ್ಷಕ್ಕೆ ಇಳಿಕೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈಗ ಇವುಗಳಲ್ಲಿ ಕೆಲವು ಗುತ್ತಿಗೆ ಅವಧಿ ಮುಗಿದಿದ್ದರೂ ಅರಣ್ಯ ಇಲಾಖೆಗೆ ಜಮೀನು ಬಿಟ್ಟುಕೊಡದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಎಲ್ಲ ಭೂಮಿ ಹಿಂಪಡೆಯಲು ಕಾನೂನು ಹೋರಾಟ ಮಾಡಲಾಗುತ್ತಿದೆ. ಹೈಕೋರ್ಟ್‌ನಲ್ಲಿ ಈ ಪ್ರಕರಣಗಳ ಅರ್ಜಿ ವಿಚಾರಣೆ ಹಂತದಲ್ಲಿದೆ ಎಂದು ವಿವರಿಸಿದರು.
ಹಲವು ದಶಕಗಳ ಬೇಡಿಕೆ ಈಡೇರಿಕೆ :
ಬೆಂಗಳೂರು ನಗರದಲ್ಲಿ ಅಪರೂಪದ ಹುಲ್ಲುಗಾವಲಿದೆ. ಇದು ನೂರಾರು ಪ್ರಭೇದದ ಪಕ್ಷಿಗಳ ಸಂತಾನೋತ್ಪತ್ತಿಯ ತಾಣವಾಗಿದ್ದು, ಈ ಸುಂದರ ಪರಿಸರ ಉಳಿಸಲು ದಶಕಗಳಿಂದ ಹೋರಾಟ ನಡೆದಿತ್ತು. ತಾನು ಸಚಿವನಾದ ಬಳಿಕ, ಹಲವು ಒತ್ತಡದ ನಡುವೆಯೂ ಹೆಸರುಘಟ್ಟ ಕೆರೆ ಸುತ್ತಮುತ್ತಲ್ಲಿರುವ ಅಪರೂಪದ ಹುಲ್ಲುಗಾವಲು ರಕ್ಷಣೆಗಾಗಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾಗಿ ತಿಳಿಸಿದರು.
ಸರ್ಕಾರದ ಈ ನಿರ್ಧಾರಕ್ಕೆ ಪಕ್ಷಭೇದ ಮರೆತು ಎಲ್ಲ ಕ್ಷೇತ್ರದ ಗಣ್ಯರೂ ಅಭಿನಂದನೆ ಸಲ್ಲಿಸಿದ್ದಾರೆ. ಇಂತಹ ಉತ್ತಮ ಕಾರ್ಯ ಮಾಡಿದಾಗ ಸಿಗುವ ಆನಂದ, ಸಂತೋಷ ಅಪರಿಮಿತ ಎಂದು ಈಶ್ವರ್ ಖಂಡ್ರೆ ಸಂತೃಪ್ತಿ ವ್ಯಕ್ತಪಡಿಸಿದರು.