Thursday, May 29, 2025
Homeರಾಜ್ಯಮಾನನಷ್ಟ ಮೊಕದ್ದಮೆ ವಿರುದ್ಧ ಕಾನೂನು ಹೋರಾಟ : ವಿಜಯೇಂದ್ರ

ಮಾನನಷ್ಟ ಮೊಕದ್ದಮೆ ವಿರುದ್ಧ ಕಾನೂನು ಹೋರಾಟ : ವಿಜಯೇಂದ್ರ

Legal fight against defamation case: Vijayendra

ಬೆಂಗಳೂರು,ಮೇ27-ಸರ್ಕಾರದ ಎರಡು ವರ್ಷಗಳ ಆಡಳಿತ ವೈಫಲ್ಯ ಖಂಡಿಸಿ ಪತ್ರಿಕೆಗಳಿಗೆ ನೀಡಿದ್ದ ಜಾಹಿರಾತು ವಿರುದ್ಧ ಆಡಳಿತಾರೂಢ ಕಾಂಗ್ರೆಸ್‌‍ ಮಾನನಷ್ಟ ಮೊಕದ್ದಮೆ ಹೂಡಿದರೆ, ಅದನ್ನು ಕಾನೂನಾತಕವಾಗಿಯೇ ಹೋರಾಟ ಮಾಡಲು ಪಕ್ಷ ಸಿದ್ದವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಹಿರಂಗ ಸವಾಲು ಹಾಕಿದ್ದಾರೆ.

ಪತ್ರಿಕೆಗಳಿಗೆ ಜಾಹಿರಾತು ನೀಡಿದ್ದನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಜನರಿಗೆ ಏನನ್ನು ಮನವರಿಕೆ ಮಾಡಬೇಕೋ ಅದನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇವರು ಮಾನನಷ್ಟ ಮೊಕದ್ದಮೆ ಹೂಡಿದರೆ ನಾವೇನು ಹೆದರಿ ಕೈಕಟ್ಟಿ ಕೂರುತ್ತೇವೆಯೇ ಎಂದು ಪ್ರಶ್ನೆ ಮಾಡಿದರು.

ಪಕ್ಷದ ಕಚೇರಿಯಲ್ಲಿ ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ವಕ್ತಾರ ಅಶ್ವತ್ಥನಾರಾಯಣ ಅವರ ಜೊತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಸರ್ಕಾರ ವಿಪಕ್ಷಗಳನ್ನು ಹೆದರಿಸಲು ಹೊರಟಿದೆ. ವಿಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷಗಳನ್ನು ಬೆದರಿಸುವುದು ಸರಿಯಲ್ಲ. ನಮ ಪ್ರತಿಪಕ್ಷದ ನಾಯಕರಾದ ಆರ್‌.ಅಶೋಕ್‌ ಅವರು ಸರ್ಕಾರದ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದ್ದಾರೆ. ಸರ್ಕಾರವು ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಇದನ್ನು ಹೇಳಿದರೆ ಅವರ ಮಾನ ನಷ್ಟ ಏನಾಗುತ್ತದೆ? ಅಷ್ಟಕೂ ಮಾನ ಇದ್ದರೆ ತಾನೇ ನಷ್ಟ ಆಗುವುದು ಎಂದು ವ್ಯಂಗ್ಯವಾಡಿದರು.

ಈ ಸರ್ಕಾರ ಕೊಟ್ಟ ಜನರಿಗೆ ಭರವಸೆಗಳನ್ನು ಈಡೇರಿಸಿಲ್ಲ, ನೀರಾವರಿ ಯೋಜನೆಗಳನ್ನು ಜಾರಿ ಮಾಡಿಲ್ಲ. ಸರ್ಕಾರದ ಎರಡು ವರ್ಷದ ಸಾಧನೆ ಎಂದು ಜಾತ್ರೆ ಮಾಡುತ್ತಾರೆ. ಕೇಂದ್ರದ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಏನಾಗಬೇಕೋ ಅದನ್ನು ಮೊದಲು ಕೇಳಿ ಎಂದು ಕಿಡಿಕಾರಿದರು.

ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಅವಿವೇಕದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಮೋದಿ ನೇತೃತ್ವದ ನೀತಿ ಆಯೋಗದ ಮಹತ್ವದ ಸಭೆಗೆ ಸಿದ್ದರಾಮಯ್ಯ ಹೋಗಲಿಲ್ಲ. ಸಿಎಂ ಆ ಸಭೆಗೆ ಹೋಗದೇ ರಾಜ್ಯಕ್ಕೆ ಅಪಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯದ ಸಿಎಂ ಆಗಿದ್ದಾರೋ? ಕಾಂಗ್ರೆಸ್‌‍ ಸಿಎಂ ಆಗಿದ್ದಾರೋ? ಎಂದು ಪ್ರಶ್ನಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳಿಗೆ ಅನುಮತಿ ಕೊಟ್ಟಿಲ್ಲ. ಈ ನಿರ್ಧಾರ ಕೈಗೊಳ್ಳಲು ಯಾವ ಮೂರ್ಖರು ಸಲಹೆ ಕೊಟ್ಟಿದ್ದಾರೋ ಗೊತ್ತಿಲ್ಲ. ಈ ರೀತಿಯ ನಿರ್ಧಾರ ರಾಜ್ಯಕ್ಕೂ ಒಳ್ಳೇದಲ್ಲ, ಬಡವರಿಗೂ ಅನ್ಯಾಯ ಮಾಡಿದಂತೆ. ಈ ನಿರ್ಧಾರವನ್ನು ಸರ್ಕಾರ ವಾಪಸ್‌‍ ತಗೋಬೇಕು. ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ರೆ ಇದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದರು.

ರಾಮನಗರ ಜಿಲ್ಲೆಗೆ ಮರುನಾಮಕರಣ ಮಾಡಲು ಹೊರಟಿರುವುದು ಸ್ವೇಚ್ಛಾಚಾರದ ನಿರ್ಧಾರವಾಗಿದೆ. ಯಾವುದೇ ಜಿಲ್ಲೆಯ ಹೆಸರು ಬದಲಾಯಿಸುವುದಾದರೆ ಅದಕ್ಕೆ ಏನು ಬೆಲೆ ಇದೆ? ಜಿಲ್ಲೆಯ ಹೆಸರು ಬದಲಾವಣೆಗೆ ರಿಯಲ್‌ ಎಸ್ಟೇಟ್‌ ಒಂದೇ ಮಾನದಂಡನಾ? ರಿಯಲ್‌ ಎಸ್ಟೇಟ್‌ ಒಂದೇ ಸಾಕು ಅನ್ನುವುದಾದರೆ ರೈತರ ಪಾಡೇನು? ಯಾರನ್ನೋ ಖುಷಿಪಡಿಸಲು ರಾಮನಗರ ಜಿಲ್ಲೆ ಹೆಸರು ಬದಲಾವಣೆ ಸರಿಯಲ್ಲ ಎಂದರು.

ಮೈಸೂರು ಸ್ಯಾಂಡಲ್‌ ಸೋಪ್‌ಗೆ ರಾಯಭಾರಿಯಾಗಿ ತಮನ್ನಾ ಅವರ ನೇಮಕದ ಕುರಿತು ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರ ಯಾರೋ ಪರಿಣಿತರು ಹೇಳಿದರೆಂದು ತಮನ್ನಾ ಅವರನ್ನು ನೇಮಕ ಮಾಡಿದೆ. ಈ ತೀರ್ಮಾನದಲ್ಲಿ ರಾಜ್ಯದ ಹಿತಾಸಕ್ತಿ ಇದೆಯೋ? ರಾಜಕಾರಣಿಗಳ ಹಿತಾಸಕ್ತಿ ಇದೆಯೋ? ಇದನ್ನು ಸರ್ಕಾರ ಸ್ಪಷ್ಟಪಡಿಸಬೇಕು.

ಸ್ವಲ್ಪವಾದರೂ ತಲೆ ಬೇಕಲ್ಲ, ತಮನ್ನಾಗೆ 6.5 ಕೋಟಿ ಬಂಡವಾಳ ಹಾಕಿದ್ದಾರೆ. 60 ಲಕ್ಷನೂ ಲಾಭ ಬರುವುದಿಲ್ಲ. ಪರಿಣಿತರ ಸಲಹೆ ಮೇರೆಗೆ ನೇಮಕ ಅಂತ ಸಂಸ್ಥೆ ಹೇಳುತ್ತಿದೆ. ಯಾರು ಆ ಪರಿಣಿತರು ಅಂತ ಬಹಿರಂಗಪಡಿಸಲಿ. ಅರ್ಹರನ್ನು ರಾಯಭಾರಿ ಸ್ಥಾನಕ್ಕೆ ಆಯ್ಕೆ ಮಾಡಿ ಎಂದು ಸಲಹೆ ಮಾಡಿದರು.

ಖಾಸಗಿ ಸರ್ವೆಯಲ್ಲಿ ಬಿಜೆಪಿಗೆ 150-160 ಸ್ಥಾನ ಬರುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್‌‍ ನಮ ಮೇಲೆ ಮಾನನಷ್ಟ ಕೇಸ್‌‍ ಹಾಕಲು ಹೊರಟಿದೆ ಎಂದರು. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ನಿಮಗೆ ಹೇಗೆ ಕುತೂಹಲ ಇದೆಯೋ ನನಗೂ ಅಷ್ಟೇ ಕುತೂಹಲ ಇದೆ, ನೋಡೋಣ ಎಂದು ಸಮಜಾಯಿಷಿ ನೀಡಿದರು.

RELATED ARTICLES

Latest News