ಬೆಂಗಳೂರು, ಮೇ 26- ಉತ್ತರ ಕನ್ನಡ ಜಿಲ್ಲೆಯ ಅರೆಬೈಲು ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರೇನು ವಿಧಾನಸೌಧದಲ್ಲಿ ಯಾರ ಮೇಲಾದರೂ ಅತ್ಯಾಚಾರ ಮಾಡಿದ್ದರೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆ ಮಾಡಲು ಆ ಶಾಸಕರು ವಿಧಾನಸೌಧದಲ್ಲಿ ಯಾರನ್ನು ರೇಪ್ ಮಾಡಿರಲಿಲ್ಲ. ಯಾರಿಗೂ ಏಡ್ಸ್ ಇಂಜಕ್ಷನ್ ಚುಚ್ಚಲು ಹೋಗಿರಲಿಲ್ಲ. ಬಿಜೆಪಿಯವರು ತಮ ಬಳಿ ಮುತ್ತು ರತ್ನಗಳನ್ನು ಇಟ್ಟುಕೊಳ್ಳಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮುನಿರತ್ನ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿಗೆ ಟಾಂಗ್ ನೀಡಿದರು.
ಮುಂದುವರೆದ ಅವರು, ಕೆಎಸ್‌ಡಿಸಿಎಲ್ ಸಂಸ್ಥೆಗೆ ಬಹುಬಾಷ ನಟಿ ತಮನ್ನರನ್ನು ರಾಯಭಾಯಿಯನ್ನಾಗಿ ನೇಮಿಸಿರುವ ಕುರಿತು ಮುಖ್ಯಮಂತ್ರಿ ಹಾಗೂ ಬೃಹತ್ ಕೈಗಾರಿಕೆ ಸಚಿವರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳುವ ಮೂಲಕ ಬದಲಾವಣೆಯ ಮುನ್ಸೂಚನೆ ನೀಡಿದರು. ಈ ಹಿಂದೆ ತಾವು ಇಂಧನ ಸಚಿವರಾಗಿದ್ದಾಗ ಎಲ್‌ಇಡಿ ಬಲ್‌್ಪಗಳ ಪ್ರಚಾರಕ್ಕೆ ಪುನೀತ್ ರಾಜ್ ಕುಮಾರ್ ಹಾಗು ರಮ್ಯಾರನ್ನು ರಾಯಭಾರಿಗಳನ್ನಾಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಈಗ ಅರಣ್ಯ ಇಲಾಖೆ ರಾಯಭಾರಿಯಾಗಲು ಕ್ರಿಕೆಟಿಗ ಅನಿಲ್ ಕುಂಬ್ಲೆ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಕುಂಬ್ಲೆ ಕೂಡ ಒಪ್ಪಿಕೊಂಡಿದ್ದಾರೆ ಎಂದರು.
ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿಯಾಗಿರುವ ಕುರಿತು ಸದ್ಯಕ್ಕೆ ನಾನು ಯಾರ ಜೊತೆಯಲ್ಲೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲರ ಜೊತೆ ಚರ್ಚೆ ಮಾಡಿ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು. ಬೆಂಗಳೂರಿಗೆ ಹೆಚ್ ಎ ಎಲ್ ಸಂಸ್ಥೆಯನ್ನು ಯಾವ ಬಿಜೆಪಿ ಸರ್ಕಾರವೂ ಕೊಟ್ಟಿಲ್ಲ. ಮೊದಲಿನಿಂದಲೂ ನಮಲ್ಲಿರುವ ತಂತ್ರಜ್ಞರು ಶಕ್ತಿಶಾಲಿಗಳು ಹಾಗೂ ವಿಜ್ಞಾನಿಗಳಿದ್ದಾರೆ ಎಂದು ಮನದಟ್ಟು ಮಾಡಿಕೊಂಡು ನೆಹರು ಬೆಂಗಳೂರಿನಲ್ಲಿ ಹೆಚ್ ಎ ಎಲ್ ಸ್ಥಾಪನೆ ಮಾಡಿದರು. ಏರ್ ಶೋ ನಡೆಯುತ್ತದೆ. ಬೆಂಗಳೂರು ನಗರದಲ್ಲೇ ಎರಡು ವಿಮಾನ ನಿಲ್ದಾಣಗಳಿವೆ. ಬೀದರ್ ಸೇರಿ ಅನೇಕ ಕಡೆ ಏರ್ ಬೇಸ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೇಂದ್ರದಿಂದ ಹೊಸದಾಗಿ ಯಾವ ಯೋಜನೆಯನ್ನಾದರೂ ಮಂಜೂರು ಮಾಡಿಸಿಕೊಳ್ಳಲಿ. ಪಕ್ಕದ ರಾಜ್ಯಕ್ಕೆ ಹೊಸ ಯೋಜನೆ ಹೋಗಬಾರದು ಎಂಬ ಅಸೂಯೆ ನಮಗೆ ಇಲ್ಲ. ಹೆಚ್.ಎ.ಎಲ್ ನಮ ಆಸ್ತಿ. ನಮ ಸ್ವಾಭಿಮಾನ, ಅದನ್ನು ಬಿಟ್ಟುಕೊಡುವ ಪ್ರಶ್ನೆಯಿಲ್ಲ ಎಂದರು.
ಚಂದ್ರ ಬಾಬು ನಾಯ್ಡು ಹೇಳಿಕೆಗೆ ಪ್ರತಿಯಾಗಿ ರಾಜ್ಯದ ಯಾವ ಸಂಸದರು, ಕೇಂದ್ರ ಸಚಿವರು ಯಾಕೆ ಮಾತನಾಡುತ್ತಿಲ್ಲ. ಸಂಸ್ಥೆಯನ್ನು ಉಳಿಸಿಕೊಳ್ಳುವುದು ನಮ ಜವಾಬ್ದಾರಿ ಅದನ್ನು ಮಾಡುತ್ತೇವೆ ಎಂದರು.
ಇದೇ ವೇಳೆ ಬಂಗಾರಪೇಟೆ ಕ್ಷೇತ್ರದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ವಲಸೆ ಹೋಗಿದ್ದ ಚನ್ನಾರೆಡ್ಡಿ ಸೇರಿದಂತೆ ಅನೇಕ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಬಿಜೆಪಿ, ಜೆಡಿಎಸ್‌ನಿಂದ ಅನೇಕ ನಾಯಕರು ಕಾಂಗ್ರೆಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ಪಕ್ಷದ ಎಲ್ಲಾ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಿಗೆ ಸ್ಥಳೀಯ ಮಟ್ಟದಲ್ಲಿ ಆಸಕ್ತರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷದ ಎರಡು ವರ್ಷಗಳ ಬಳಿಕ ಹೊಸ ಪರ್ವ ಆರಂಭಿಸಿದೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷಕ್ಕೆ ಸೇರ್ಪಡೆಯಾದವರನ್ನು ಬರಮಾಡಿಕೊಂಡರು. ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.