ಬೆಂಗಳೂರು,ಮೇ31- ರಾಜ್ಯದ ರಸ್ತೆಗಳಲ್ಲಿ ಎಲ್ಲೆಲ್ಲಿ ಸಂಚಾರ ದಟ್ಟಣೆ(ಬಾಟಲ್‌ನೆಕ್) ಸಮಸ್ಯೆ ಇದೆಯೋ ಅವುಗಳನ್ನು ಮೊದಲ ಆದ್ಯತೆ ಮೇಲೆ ಬಗೆಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು.
ವಿಧಾನಸೌಧದಲ್ಲಿಂದು ನಡೆದ ರಾಜ್ಯದ ಪ್ರಗತಿ ಪರಿಶೀಲನೆ ಕುರಿತಂತೆ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಎಲ್‌ಎಒಗಳು ಜಿಲ್ಲಾಧಿಕಾರಿಗಳ ಅಧೀನದಲ್ಲಿ ಬರುವಂತೆ ಸುತ್ತೋಲೆ ಹೊರಡಿಸಲು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಲವು ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳು ಮುಂದಿಟ್ಟಾಗ ಗರಮಾದ ಮುಖ್ಯಮಂತ್ರಿ, ಎಷ್ಟು ವರ್ಷದಿಂದ ಇದೇ ಕತೆ ಹೇಳಿಕೊಂಡು ಕೂತಿರುತ್ತೀರಿ? ಅಗತ್ಯಬಿದ್ದರೆ ಭೂಸ್ವಾಧೀನಕ್ಕಾಗಿಯೇ ವಿಶೇಷ ಅಧಿಕಾರಿಯನ್ನು ನೇಮಿಸಲು ಸಿದ್ದವಿದ್ದು, ನೇಮಿಸಿಕೊಳ್ಳಿ. ಹಳೆಯ ಯೋಜನೆಯಗಳು ಪೂರ್ಣಗೊಳ್ಳದ ಹೊರತು ಹೊಸ ಯೋಜನೆಗಳು ನಮಗೆ ಸಿಗುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಇದಕ್ಕೆ ದನಿಗೂಡಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, 42 ಬಾಕಿ ಯೋಜನೆಗಳಲ್ಲಿ ನಾವು 22 ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಕೇಂದ್ರದಿಂದಲೇ ಬಹಳ ಸಮಸ್ಯೆಯಾಗುತ್ತಿದೆ. ಕೇಂದ್ರದ ಅಧಿಕಾರಿಗಳು ಹಲವು ಕಡೆ ಇನ್ನಷ್ಟು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಮೇಲಿಂದ ಮೇಲೆ ಪರಿಶೀಲನೆ ನಡೆಸಿದರೆ ಪರಿಸ್ಥಿತಿ ಸುಧಾರಿಸಬಹುದೆಂದು ಸಚಿವ ಕೃಷ್ಣಭೈರೇಗೌಡ ಸಲಹೆ ಮಾಡಿದರು.ಎಸ್‌ಎಲ್‌ಎಒಗಳ ಪ್ರಾಕ್ಟೀಸ್ ಅಷ್ಟು ಸರಿ ಇಲ್ಲ. ಮಾರುಕಟ್ಟೆ ಬೆಲೆ, ಮಾರ್ಗಸೂಚಿ ಬೆಲೆಗೂ, ಇವರು ತರುವ ಬೆಲೆಗೂ ಯದ್ವಾತದ್ವಾ ವ್ಯತ್ಯಾಸ ಇರುತ್ತದೆ. ಇದು ಸರ್ಕಾರದ ಮೇಲೆ ಅನಗತ್ಯ ಹೊರೆ ಬೀಳುತ್ತದೆ. ಇದರಲ್ಲಿ ಎಸ್‌ಎಲ್‌ಎಒಗಳ ವರ್ತನೆಗಳು, ಪ್ರಾಕ್ಟೀಸ್ ಸರಿ ಇಲ್ಲ. ಹೀಗಾಗಿ ಇವರನ್ನು ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವುದು ಉತ್ತಮ ಎನ್ನುವ ಅಭಿಪ್ರಾಯವನ್ನು ಸಚಿವರು ಮತ್ತು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದಾಗ, ಮುಖ್ಯಮಂತ್ರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳ ಅಧೀನಕ್ಕೆ ತರುವಂತೆ ಸೂಚಿಸಿದರು.
ಅಪೌಷ್ಟಿಕತೆ ನಿವಾರಣೆಗೆ ಒತ್ತು
ತೀವ್ರ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪ್ರತಿ ವರ್ಷ ಶೇ.1ರಷ್ಟು ಕಡಿಮೆ ಮಾಡಿಕೊಂಡು ಹೋಗಲು ಸಾಧ್ಯವಿದೆ. ಒಂದೇ ಬಾರಿಗೆ ನಿಲ್ಲಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಸಾಮಾಜಿಕ ಕಾರಣಗಳೂ ಇವೆ. ಆದ್ದರಿಂದ ಪ್ರತಿವರ್ಷ ಶೇ.1ರಷ್ಟು ಪ್ರಮಾಣ ಕಡಿಮೆ ಮಾಡಿಕೊಂಡು ಬಂದರೆ ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಬೀದರ್, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಮಕ್ಕಳ ಹಿಮೋಗ್ಲೋಬಿನ್ ಪ್ರಮಾಣ ಸೇರಿ ಅವರ ಆರೋಗ್ಯ ತಪಾಸಣೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಹಾಲು, ಮೊಟ್ಟೆ, ಮಾತ್ರೆ ಎಲ್ಲವನ್ನೂ ಕೊಡುತ್ತಿದ್ದರೂ ಏಕೆ ಕೆಲವು ಕಡೆ ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕ ಮಟ್ಟ ಮಾತ್ರ ಸುಧಾರಿಸುತ್ತಿಲ್ಲ ಎಂಬ ಬಗ್ಗೆ ವೈಜ್ಞಾನಿಕ ವರದಿ ನೀಡಿ, ವರದಿ ಆಧಾರದಲ್ಲಿ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಬಹುದು ಎಂದು ಸಿಎಂ ತಿಳಿಸಿದರು.
ಅನರ್ಹ ಪಡಿತರ ಚೀಟಿದಾರರ ಸಂಖ್ಯೆ ವಿಪರೀತ ಹೆಚ್ಚುತ್ತಿರುವುದಕ್ಕೆ ಕಾರಣ ಏನು? ವೈಜ್ಞಾನಿಕ ಅಂಕಿಅಂಶಗಳು ಬೇರೆಯೇ ಹೇಳುತ್ತಿವೆ. ಯಾವ ಜಿಲ್ಲೆಯಲ್ಲೂ ಶೇ.60 ಕ್ಕಿಂತ ಹೆಚ್ಚು ಅರ್ಹರು ಇರಲು ಸಾಧ್ಯವಿಲ್ಲ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು. ಆದರೆ ಶೇ.80, ಶೇ.90 ಅಂತೆಲ್ಲಾ ಇದ್ದರೆ ಅದನ್ನು ಯಾವ ಮಾನದಂಡದಲ್ಲೂ ಒಪ್ಪಲು ಸಾಧ್ಯವಿಲ್ಲ. ಇದರಿಂದ ದೊಡ್ಡ ಅನ್ಯಾಯ ಆಗುವುದು ನಿಜವಾದ ಅರ್ಹರಿಗೆ. ಅರ್ಹರಿಗೆ ಅನ್ಯಾಯ ಆಗುವುದನ್ನು ತಡೆಯಲು ನಕಲಿ, ಡೂಪ್ಲಿಕೇಟ್ ಮತ್ತು ಅನರ್ಹ ಕಾರ್ಡ್‌ಗಳನ್ನು ತಡೆಯಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.
ಶಿಕ್ಷಕರು, ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಪಡಿತರ ಚೀಟಿಗಳಿವೆ. ಇವರಲ್ಲಿ ಹಲವರು ಪಡಿತರ ಪಡೆಯುವುದಿಲ್ಲ. ಆದರೆ ಆಸ್ಪತ್ರೆಗಳಿಗೆ ಹೋಗಲು ಮತ್ತು ಇನ್ನಿತರೆ ಅಗತ್ಯಗಳಿಗೆ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.
ಅರ್ಹರು ಯಾವುದೇ ಕಾರಣಕ್ಕೂ ತಪ್ಪಬಾರದು.
ಅರ್ಹರಿಗೆ ಸವಲತ್ತು ತಪ್ಪಬಾರದು, ಸಮಸ್ಯೆ ಆಗಬಾರದು. ಆದರೆ ಅರ್ಹರಿಗೆ ಸಮಸ್ಯೆ ಆಗದಂತೆ ಅನರ್ಹ ಕಾರ್ಡ್‌ಗಳನ್ನು ರದ್ದಾಗುವ ದಿಕ್ಕಿನಲ್ಲಿ ಏನೇನು ಮಾಡಬಹುದು ಎನ್ನುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಉತ್ತರ ಕೇಳಿದರು. ನಿಮ ಪ್ರಾಯೋಗಿಕ ಅನುಭವದಲ್ಲಿ ಏನೇನು ಸಮಸ್ಯೆಗಳನ್ನು ಎದುರಿಸಿದ್ದೀರಿ, ಈ ಸಮಸ್ಯೆಗಳ ಪರಿಹಾರಕ್ಕೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಸಿಎಂ ಪ್ರಶ್ನಿಸಿದರು.