Sunday, July 20, 2025
Homeಇದೀಗ ಬಂದ ಸುದ್ದಿದುರ್ಬಲಗೊಂಡ ಮುಂಗಾರು, ಕರಾವಳಿಯಲ್ಲಿ ತಗ್ಗಿದ ಮಳೆ ಆರ್ಭಟ

ದುರ್ಬಲಗೊಂಡ ಮುಂಗಾರು, ಕರಾವಳಿಯಲ್ಲಿ ತಗ್ಗಿದ ಮಳೆ ಆರ್ಭಟ

Monsoon weakens in coastal areas

ಬೆಂಗಳೂರು, ಜೂ.1- ರಾಜ್ಯದಲ್ಲಿ ನೈರುತ್ಯ ಮುಂಗಾರು ಮಳೆ ದುರ್ಬಲಗೊಂಡಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಗಣನೀಯವಾಗಿ ಕಡಿಮೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ನಿನ್ನೆಯಿಂದ ಮಳೆ ಪ್ರಮಾಣ ಇಳಿಕೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ ಬಿಡುವು ಕೊಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಕ್ಯಾಸ್ಟಲ್ ರಾಕ್, ಬಂಟ್ವಾಳದಲ್ಲಿ ತಲಾ 4 ಸೆಂ.ಮೀ., ಕೋಟಾ 3 ಸೆಂ.ಮೀ., ಮಂಕಿ, ಕದ್ರಾ, ಮಂಗಳೂರುಗಳಲ್ಲಿ ತಲಾ 2 ಸೆಂ.ಮೀ., ಕುಮಟಾ, ಸಿದ್ದಾಪುರ, ಉಡುಪಿ,

ಕಾರವಾರ, ಕಾರ್ಕಳ, ಮೂಡುಬಿದರೆ, ಪಣಂಬೂರು, ಕುಂದಾಪುರ, ಮುಲ್ಕಿ, ಉಪ್ಪಿನಂಗಡಿ, ಪುತ್ತೂರು, ಹೊನ್ನಾವರಗಳಲ್ಲಿ ತಲಾ ಒಂದು ಸೆಂ.ಮೀ. ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಪ್ರಮುಖ ನದಿ ಹಾಗೂ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿತ್ತು. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಗಳು ಇಲ್ಲ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ ಮುಂದುವರೆಯಲಿದ್ದು, ಒಳನಾಡಿನಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗುವ ಸಾಧ್ಯತೆಗಳಿವೆ.

ಈ ಬಾರಿ ಮೇ 24ಕ್ಕೆ ಮುಂಗಾರು ಮಳೆ ರಾಜ್ಯ ಪ್ರವೇಶ ಮಾಡಿತ್ತಲ್ಲದೆ, ಆರಂಭದಲ್ಲೇ ಆರ್ಭಟಿಸಿ ಅವಾಂತರ ಸೃಷ್ಟಿ ಮಾಡಿದೆ. ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಶತಮಾನದ ದಾಖಲೆ ಮಳೆಯಾಗಿದೆ. ಪೂರ್ವ ಮುಂಗಾರಿನ ಮಾರ್ಚ್-ಮೇ ನಡುವಿನ ಮೂರು ತಿಂಗಳ ಒಟ್ಟಾರೆ ಮಳೆ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಒಂದು ವಾರದಲ್ಲಿ ಶೇ. 298ರಷ್ಟು ಮಳೆಯಾಗಿದೆ. ಮೇ ತಿಂಗಳಲ್ಲಿ ರಾಜ್ಯದ ವಾಡಿಕೆ ಮಳೆ ಪ್ರಮಾಣ 73.6 ಮಿ.ಮೀ. ನಷ್ಟಿದ್ದು, 218.7 ಮಿ.ಮೀ.ನಷ್ಟು ಮಳೆಯಾಗಿದೆ. ಒಟ್ಟಾರೆ ವಾಡಿಕೆಗಿಂತ ಶೇ.197ರಷ್ಟು ಹೆಚ್ಚು ಮಳೆಯಾಗಿದೆ.

ಏಪ್ರಿಲ್‌ನಲ್ಲಿ ವಾಡಿಕೆ ಮಳೆ ಪ್ರಮಾಣ 32.4 ಮಿ.ಮೀ. ಇದ್ದು, 55.6 ಮಿ.ಮೀ.ನಷ್ಟು ಮಳೆಯಾಗಿತ್ತು. ಒಟ್ಟಾರೆ ವಾಡಿಕೆಗಿಂತ ಶೇ.72ರಷ್ಟು ಅಧಿಕ ಮಳೆ ಬಿದ್ದಿತ್ತು. ಮಾರ್ಚ್ ಒಂದರಿಂದ ಮೇ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ115 ಮಿ.ಮೀ. ಇದ್ದು, 286 ಮಿ.ಮೀ.ನಷ್ಟು ಮಳೆಯಾಗಿದೆ. ವಾಡಿಕೆಗಿಂತ ಶೇ.119.6ರಷ್ಟು ಹೆಚ್ಚು ಮಳೆಯಾಗಿದೆ. ಅಂದರೆ ಬೇಸಿಗೆ ಮಳೆ ಅಥವಾ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ.

ಜನವರಿ ಒಂದರಿಂದ ಮೇ ಅಂತ್ಯವರೆಗಿನ ಐದು ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಶೇ.141 ರಷ್ಟು ಅಧಿಕವಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 119.5 ಮಿ.ಮೀ. ಆಗಿದ್ದು, 287.5 ಮಿ.ಮೀ.ನಷ್ಟು ಮಳೆಯಾಗಿದೆ. ಬೇಸಿಗೆ ಮಳೆ ನಿರಂತರವಾಗಿ ಬಿದ್ದ ಪರಿಣಾಮ ಜಲ ವಿದ್ಯುತ್ ಉತ್ಪಾದಿಸುವ ಜಲಾಶಗಳಿಗೆ, ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದ್ದು, ನೀರಿನ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ.

RELATED ARTICLES

Latest News