ನವದೆಹಲಿ, ಜೂ.2- ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಹಾಗೂ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಸ್ಫೋಟಕ ಆಟಗಾರ ಗ್ರೆನ್ ಮ್ಯಾಕ್ಸ್ ವೆಲ್ ಅವರು ಇದುವರೆಗೂ ತಾವಾಡಿರುವ 149 ಏಕದಿನ ಪಂದ್ಯಗಳಿಂದ 4 ಶತಕ ಹಾಗೂ 23 ಅರ್ಧಶತಕಗಳ ನೆರವಿನಿಂದ 3,990 ರನ್ ಗಳಿಸಿದ್ದಾರೆ. ಅರೆಕಾಲಿಕ ಬೌಲರ್ ಆಗಿರುವ ಮ್ಯಾಕ್ಸಿ 77 ವಿಕೆಟ್ ಪಡೆದಿದ್ದಾರೆ.
ಭಾರತದ ಆತಿಥ್ಯದಲ್ಲಿ ನಡೆದಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮ್ಯಾಕ್ಸಿ ಮಹತ್ತರ ಪಾತ್ರ ವಹಿಸಿದ್ದರು. ಅಫ್ಘಾನಿಸ್ತಾನ ವಿರುದ್ದದ ನಡೆದಿದ್ದ ಪಂದ್ಯದಲ್ಲಿ ಗಾಯದ ಸಮಸ್ಯೆಯನ್ನು ಮೆಟ್ಟಿನಿಂತು ದ್ವಿಶತಕ (201) ಸಿಡಿಸಿ ತಂಡವನ್ನು ಗೆಲ್ಲಿಸಿದ್ದ ಮ್ಯಾಕ್ಸ್‌ವೆಲ್ ಆಟ ಅವಿಸ್ಮರಣೀಯವಾಗಿದೆ.
ಟಿ-20ಯತ್ತ ಚಿತ್ತ:
ಏಕದಿನ ಕ್ರಿಕೆಟ್ ಗೆ ಗ್ರೆನ್ ಮ್ಯಾಕ್ಸ್ ವೆಲ್ ಗುಡ್ ಬೈ ಹೇಳಿದ್ದರೂ, ಭಾರತದ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ಟೂರ್ನಿಯಲ್ಲಿ ಆಡುವುದರತ್ತ ಹೆಚ್ಚು ಗಮನ ಹರಿಸಿರುವುದಾಗಿ ತಿಳಿಸಿರುವ ಮ್ಯಾಕ್ಸ್‌ವೆಲ್, ಐಪಿಎಲ್, ಬಿಗ್‌ಬ್ಯಾಶ್ ಸೇರಿದಂತೆ ವಿಶ್ವದಾದ್ಯಂತ ನಡೆಯುವ ಫ್ರಾಂಚೈಸಿ ಲೀಗ್ ಗಳ ಅನುಭವ ಮೂಲಕ ಚುಟುಕು ವಿಶ್ವಕಪ್ ಟೂರ್ನಿಗೆ ಸಜ್ಜಾಗುವುದಾಗಿ ಮ್ಯಾಕ್ಸಿ ಹೇಳಿದ್ದಾರೆ.