ಬೆಂಗಳೂರು,ನ.15- ಬಿಜೆಪಿ ಪಕ್ಷವನ್ನು ನಾಲ್ಕು ವರ್ಷ ಮೂರು ತಿಂಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ ಸಮಾಧಾನ ನನಗಿದೆಯೆಂದು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದ ನಂತರ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಪಕ್ಷದ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಸಿಕ್ಕಿತ್ತು, ಇದನ್ನು ನಿಸ್ವಾರ್ಥವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆಂಬ ತೃಪ್ತಿಯಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ನಾವು ಸೇವಾ ಕಾರ್ಯದ ರೂಪದಲ್ಲಿ ಜನತೆಗೆ ಸ್ಪಂದಿಸುವಂತಹ ಕಾರ್ಯ ಮಾಡಿದ್ದೇವೆ, ಕೇಂದ್ರ ನಾಯಕರು ನಮಗೆ ನೀಡಿದ ನಿರ್ದೇಶನದಂತೆ ಈ ಮಹಾಮಾರಿ ವಿರುದ್ಧ ಹೋರಾಟದಲ್ಲಿ ನಮ್ಮ ಕಾರ್ಯಕರ್ತರು ಹಗಲಿರುಳು ದುಡಿದಿದ್ದಾರೆ ಎಂದರು.
ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಎಲ್ಲರ ಜೊತೆಗೆ ಸೇರಿ ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸುತ್ತಾರೆಂಬ ವಿಶ್ವಾಸ ಇದೆ. ಅವರ ಬೆಂಗಾವಲಾಗಿ ಅವರ ಜೊತೆ ಸದಾ ನಾವು ಕೆಲಸ ಮಾಡುತ್ತೇವೆ ಎಂದರು.
ನನಗೆ ಸಹಕಾರ ನೀಡಿದ ಎಲ್ಲಾ ಹಿರಿಯರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ನೀಡಿದ ಸಹಕಾರವನ್ನು ವಿಜಯೇಂದ್ರ ಅವರಿಗೂ ನೀಡುತ್ತೀರೆಂಬ ವಿಶ್ವಾಸವಿದೆ. ಎಲ್ಲರೂ ಜೊತೆಗೂಡಿ ವಿಜಯೇಂದ್ರ ಅವರಿಗೆ ಶಕ್ತಿ ತುಂಬಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.