Saturday, November 23, 2024
Homeರಾಜ್ಯಒಂದೇ ಕುಟುಂಬದ ನಾಲ್ವರನ್ನು ಕೊಂದಿದ್ದ ಹಂತಕನ ಬಂಧನ

ಒಂದೇ ಕುಟುಂಬದ ನಾಲ್ವರನ್ನು ಕೊಂದಿದ್ದ ಹಂತಕನ ಬಂಧನ

ಬೆಂಗಳೂರು,ನ.15-ತಾಯಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಹಂತಕನನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ ಪ್ರವೀಣ್ ಅರುಣ್ ಚೌಗಲೆ (37) ಬಂತ ಹಂತಕ. ಈತ ಮಂಗಳೂರು ಏರ್ ಪೋರ್ಟ್ ಉದ್ಯೋಗಿ.

ಉಡುಪಿ ತಾಲ್ಲೂಕಿನ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ಹಸೀನಾ(46),ಅತ್ತೆ ಹಾಜಿರಾ, ಇಬ್ಬರು ಹೆಣ್ಣುಮಕ್ಕಳಾದ ಅಫ್ನಾನ್ (23) ಅಜ್ಞಝ್ (21) ಮತ್ತು ಪುತ್ರ ಆಸೀಂ (12) ವಾಸವಾಗಿದ್ದರು. ಇವರ ಪತಿ ನೂರ್ ಮಹಮ್ಮದ್ ದುಬೈನಲ್ಲಿ ನೆಲೆಸಿದ್ದರೆ, ಇವರ ಮೊದಲ ಮಗ ಬೆಂಗಳೂರಿನಲ್ಲಿ ಏರ್ ಪೋರ್ಟ್ ಉದ್ಯೋಗಿ.

ನ.12ರಂದು ಬೆಳಗ್ಗೆ 8.30 ಸುಮಾರಿನಲ್ಲಿ ಹಂತಕ ಆಟೋದಲ್ಲಿ ಇವರ ಮನೆ ಬಳಿ ಡ್ರಾಪ್ ಪಡೆದುಕೊಂಡಿದ್ದಾನೆ. ನಂತರ ಮನೆಯೊಳಗೆ ಹೋಗಿದ್ದು ಅಡುಗೆ ಮನೆಯಲ್ಲಿದ್ದ ಹಸೀನಾಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಇಬ್ಬರೂ ಹೆಣ್ಣು ಮಕ್ಕಳನ್ನು ಸಾಯಿಸಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿ ಹೊರಗೆ ಆಟವಾಡುತ್ತಿದ್ದ ಬಾಲಕ ಆಸೀಂ ಮನೆಯೊಳಗೆ ಬರುತ್ತಿದ್ದಂತೆ ಆತನಿಗೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಮನೆಯೊಳಗೆ ನಡೆಯುತ್ತಿದ್ದ ಕೊಲೆಯನ್ನು ತಪ್ಪಿಸಲು ತಡೆಯಲು ಬಂದ ಹಸೀನಾ ಅವರ ಅತ್ತೆ ಹಾಜಿರಾ ಅವರ ಮೇಲೂ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದಾಗ ಇವರ ಮನೆಯಿಂದ ಕಿರುಚಾಟ, ಕೂಗಾಟ ಕೇಳಿ ನೆರೆಮನೆಯ ಯುವತಿ ಇವರ ಮನೆ ಬಳಿ ಬಂದಾಗ ಆರೋಪಿ ಆಕೆಗೆ ಚಾಕು ತೋರಿಸಿ ಹೆದರಿಸಿ ಪರಾರಿಯಾಗಿದ್ದನು.

ಸುದ್ದಿ ತಿಳಿದು ಉಡುಪಿ ಜಿಲ್ಲೆಯ ಮಲ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಾಲ್ವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬಂದಿತ್ತು. ಎಫ್ಎಸ್ಎಲ್ ತಂಡ ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಪರ್ವ ಆರಂಭ

ಚಾಕುವಿನಿಂದ ಇರಿತಕ್ಕೊಳಗಾಗಿ ಗಾಯಗೊಂಡಿದ್ದ ಹಾಜಿರಾ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿದು ದುಬೈನಿಂದ ಹಸೀನಾ ಅವರ ಪತಿ ನೂರ್ ಮಹಮ್ಮದ್ ಹಾಗೂ ಬೆಂಗಳೂರು ಏರ್ ಪೋರ್ಟ್ ಉದ್ಯೋಗಿಯಾಗಿರುವ ಮೊದಲನೆಯ ಮಗ ಮನೆಗೆ ಬಂದು ಕಣ್ಣೀರು ಹಾಕಿದ್ದರು.

ಐದು ತಂಡ ರಚನೆ
ಆರೋಪಿ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ಹಸೀನಾ ಮನೆಯ ಬಳಿ ವ್ಯಕ್ತಿಯೊಬ್ಬನಿಗೆ ಆಟೋ ಚಾಲಕರೊಬ್ಬರು ಡ್ರಾಪ್ ಕೊಟ್ಟಿರುವುದಾಗಿ ಹೇಳಿದ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದರು.

ಆರೋಪಿಯು ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಕುಡಚಿಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯನ್ನು ತಾಂತ್ರಿಕ ಆಧಾರದಲ್ಲಿ ಪತ್ತೆ ಹಚ್ಚಿದ ಪೊಲೀಸ್ ತಂಡ ತಕ್ಷಣ ಅಲ್ಲಿಗೆ ತೆರಳಿ ಕಾರ್ಯಾಚರಣೆ ಕೈಗೊಂಡು ಸಂಬಂಕರ ಮನೆಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಬಂಧಿಸಿ ಮಲ್ಪೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೇಮ ವೈಫಲ್ಯ ಶಂಕೆ
ಹಸೀನಾ ಅವರ ಎರಡನೇ ಮಗಳು ಮಂಗಳೂರು ಏರ್ ಪೋರ್ಟ್ ನಲ್ಲಿ ಏರ್ ಹೋಸ್ಟರ್ ವೃತ್ತಿ ಮಾಡುತ್ತಿದ್ದು, ಅದೇ ವಿಮಾನ ನಿಲ್ದಾಣದಲ್ಲಿ ಆರೋಪಿ ಪ್ರವೀಣ್ ಅರುಣ್ ಚೌಗಲೆ ಕೆಲಸ ಮಾಡುತ್ತಿದ್ದಾಗ ಆಕೆಯ ಪರಿಚಯವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೇಮ ವೈಫಲ್ಯದಿಂದಾಗಿ ಈ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಆರೋಪಿ ಪ್ರವೀಣ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

RELATED ARTICLES

Latest News