Sunday, June 8, 2025
Homeರಾಜ್ಯಆರ್‌ಸಿಬಿ ವಿಜಯೋತ್ಸವದ ದುರಂತ ಪ್ರಕರಣ ತನಿಖೆಗೆ ತಿಂಗಳ ಗಡುವು

ಆರ್‌ಸಿಬಿ ವಿಜಯೋತ್ಸವದ ದುರಂತ ಪ್ರಕರಣ ತನಿಖೆಗೆ ತಿಂಗಳ ಗಡುವು

RCB Victory Day Tragedy Investigation Set for One Month

ಬೆಂಗಳೂರು, ಜೂ.7-ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಒಂದು ತಿಂಗಳ ಒಳಗೆ ತನಿಖೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಹೈಕೋರ್ಟ್‌ನ್ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವನ್ನು ಕೋರಲಾಗಿದೆ.

ನ್ಯಾಯಮೂರ್ತಿ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸಿ ಜೂ.5ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಾಲ್ತುಳಿತದ ವಿಷಯದ ವ್ಯಾಪ್ತಿಯು ತುರ್ತಾಗಿರವುದರಿಂದ ತನಿಖೆಯನ್ನು ಚುರುಕುಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒಳಾಡಳಿತ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಜೂ.4ರಂದು ಆರ್‌ಸಿಬಿ ತಂಡ ವಿಜಯೋತ್ಸವ ಅಭಿನಂದನಾ ಸಮಾರಂಭ ನಡೆಯುವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಈ ಆಯೋಗವನ್ನು ರಚಿಸಲಾಗಿದೆ.

ಕಾಲ್ತುಳಿತದ ಪ್ರಕರಣಕ್ಕೆ ಆದ್ಯತೆ ನೀಡಿ ಒಂದು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಾಗಿರುವ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮರಣ ಹೊಂದಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಕುನ್ಹಾ ಅವರ ನೇತೃತ್ವದ ವಿಚಾರಣಾ ಆಯೋಗದ ಅವಧಿಯನ್ನು ಆಗಸ್ಟ್ 1ರಿಂದ ಆ.31ರವರೆಗೆ ವಿಸ್ತರಿಸಲಾಗಿದೆ.

ಆವಧಿ ವಿಸ್ತರಣೆ:
ಕೋವಿಡ್-19ರ ಸಾಂಕ್ರಾಮಿಕ ರೋಗದ ನಿವಾರಣೆ ಹಾಗೂ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗಳ ಆಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳ ಔಷಧಿ ಹಾಗೂ ಉಪಕರಣಗಳು, ಸಾಮಾಗ್ರಿ ಖರೀದಿ, ಆಮ್ಲಜನಕ ನಿರ್ವಹಣೆ, ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳು ಮೊದಲಾದ ವಿಷಯಗಳು ಕುರಿತು ರಚಿಸಲಾಗಿರುವ ವಿಚಾರಣಾ ಆಯೋಗದ ಅವಧಿಯನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.

ಈ ವಿಚಾರದ ಬಗ್ಗೆ 2021ರ ಜುಲೈ-ಆಗಸ್ಟ್‌ನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ನೀಡಿರುವ ವರದಿಯಲ್ಲಿನ ಗಂಭೀರವಾದ ಆರೋಪಗಳ ಬಗ್ಗೆ ತನಿಖೆ ನಡೆಸಲು ಸರ್ಕಾರ ನ್ಯಾಯಮೂರ್ತಿ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ 2023ರ ಆಗಸ್ಟ್ 25ರಂದು ಅಧಿಸೂಚನೆ ಹೊರಡಿಸಲಾಗಿತ್ತು.
2023ರ ಅಕ್ಟೋಬರ್ 7ರಂದು ವಿಚಾರಣಾ ಆಯೋಗಕ್ಕೆ ವಿಚಾರಣೆ ಮಾಡಬೇಕಾದ ಅಂಶಗಳನ್ನು ನಿಗದಿಪಡಿಸಿ ಅಧಿಸೂಚಿಸಲಾಗಿತ್ತು.

RELATED ARTICLES

Latest News