Wednesday, June 18, 2025
Homeಬೆಂಗಳೂರು1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ : ವಿದೇಶಿ ಡ್ರಗ್‌ ಪೆಡ್ಲರ್‌ ಬಂಧನ

1 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ : ವಿದೇಶಿ ಡ್ರಗ್‌ ಪೆಡ್ಲರ್‌ ಬಂಧನ

ಬೆಂಗಳೂರು,ಜೂ.17- ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ನೈಜೀರಿಯಾದ ಡ್ರಗ್‌ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ 1.20 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಂಡಿದ್ದಾರೆ. ನಗರದ ಆವಲಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಕೆ.ದೊಮಸಂದ್ರ ಗ್ರಾಮದ ಮನೆ ಯೊಂದರಲ್ಲಿ ವಾಸವಿದ್ದ ವಿದೇಶಿ ಪ್ರಜೆಯನ್ನು ಪೊಲೀ ಸರು ಬಂಧಿಸಿದ್ದಾರೆ.
ವಿದೇಶಿ ಪ್ರಜೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆವಲಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನಂತರ ಕಾರ್ಯಾಚರಣೆ ಕೈಗೊಂಡು ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು, ಪರಿಶೀಲಿಸಿ 600 ಗ್ರಾಂ ಮಾದಕ ವಸ್ತುವಾದ ಬಿಳಿ ಬಣ್ಣದ ಎಂಡಿಎಂಎ ಕ್ರಿಸ್ಟಲ್‌ಗಳನ್ನು ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದು, ಇದರ ಒಟ್ಟು ಮೌಲ್ಯ 1.20 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ವಿದೇಶಿ ಡ್ರಗ್‌ ಪೆಡ್ಲರ್‌ ತನಗೆ ಪರಿಚಯವಿಲ್ಲದವರಿಂದ ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಲಾಭಗಳಿಸುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಈ ಕಾರ್ಯಾಚರಣೆಯನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಎಸಿಪಿ ಮಹಾನಂದ ಮತ್ತು ಸಿಬ್ಬಂದಿ ಹಾಗೂ ಆವಲಹಳ್ಳಿ ಪೊಲೀಸ್‌‍ ಠಾಣೆಯ ಅಧಿಕಾರಿ, ಸಿಬ್ಬಂದಿ ತಂಡವು ಯಶಸ್ವಿಯಾಗಿ ಕೈಗೊಂಡಿವೆ.
ಆರೋಪಿಯಿಂದ ಮೊಬೈಲನ್ನು ವಶಪಡಿಸಿಕೊಂಡಿರುವ ಪೊಲೀಸರು, ಆತ ಯಾರ್ಯಾರ ಡ್ರಗ್‌ ಸರಬರಾಜುಗಾರರ ಜೊತೆ ಸಂಪರ್ಕದಲ್ಲಿದ್ದ ಎಂಬುವುದನ್ನು ಪತ್ತೆ ಹಚ್ಚುತ್ತೇವೆ ಎಂದು ನಗರ ಪೊಲೀಸ್‌‍ ಕಮಿಷನರ್‌ ಸೀಮಂತ್‌ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವಾರ ಇದೇ ತಂಡ ವಿದೇಶಿ ಮಹಿಳೆಯನ್ನು ಬಂಧಿಸಿ 10 ಕೋಟಿ ರೂ. ಬೆಲೆಯ ಮಾದಕ ವಸ್ತು ವಶಪಡಿಸಿಕೊಂಡಿತ್ತು.

RELATED ARTICLES

Latest News