ಬೆಂಗಳೂರು, ಜೂ.22– ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಅಬ್ಬರಿಸಿ ಆರ್ಭಟಿಸಿದ ನೈರುತ್ಯ ಮುಂಗಾರು ಮಳೆ ದಕ್ಷಿಣ ಒಳನಾಡಿನಲ್ಲಿ ದುರ್ಬಲಗೊಂಡ ಪರಿಣಾಮ ರಾಜ್ಯದ 17 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಯ ಸಿದ್ದತೆಗೆ ಹಿನ್ನಡೆಯಾಗಿದೆ.ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಪರಿಣಾಮ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜಲಾಶಯಗಳ ಒಳ ಹರಿವು ಗಣನೀಯವಾಗಿ ಏರಿಕೆಯಾಗಿತ್ತು.
ಕಳೆದ ಎರಡು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಭಾಗದಲ್ಲೂ ಮಳೆ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಜಲಾಶಯಗಳ ಒಳಹರಿವು ಕಡಿಮೆಯಾಗುತ್ತಿದೆ. ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲೂ ಶೇ.80ಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದ್ದು, ಮತ್ತೊಂದು ಸುತ್ತಿನ ಮಳೆ ಆರಂಭವಾದರೆ ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಲಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ, ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜೂನ್ ಒಂದರಿಂದ ನಿನ್ನೆಯವರೆಗೆ ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ52.2 ಮಿ.ಮೀ. ಇದ್ದು, ಕೇವಲ 36 ಮಿ.ಮೀ.ನಷ್ಟು ಮಳೆಯಾಗಿದೆ. ಶೇ.31 ರಷ್ಟು ಮಳೆ ಕೊರತೆ ಉಂಟಾಗಿದೆ.
ಉತ್ತರ ಒಳನಾಡಿನ ಬಳ್ಳಾರಿ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಉಳಿದಂತೆ ವಾಡಿಕೆ ಹಾಗೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ71 ಮಿ.ಮೀ. ಆಗಿದ್ದು, 72.5 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.2ರಷ್ಟು ಹೆಚ್ಚು ಮಳೆ ಬಿದ್ದಿದೆ.
ಮಲೆನಾಡು ಭಾಗದ ವಾಡಿಕೆಗಿಂತ ಶೇ.8ರಷ್ಟು ಹಾಗೂ ಕರಾವಳಿ ಭಾಗದಲ್ಲಿ ಶೇ.10ರಷ್ಟು ವಾಡಿಗಿಂತ ಹೆಚ್ಚು ಮಳೆಯಾಗಿದೆ. ಜೂನ್ ಒಂದರಿಂದ ನಿನ್ನೆವರೆಗೆ ರಾಜ್ಯದ ವಾಡಿಕೆ ಮಳೆ ಪ್ರಮಾಣ130.2 ಮಿ.ಮೀ. ಆಗಿದ್ದು, 133.2 ಮಿ.ಮೀ.ನಷ್ಟು ಮಳೆಯಾಗಿದ್ದು, ಒಟ್ಟಾರೆ ವಾಡಿಕೆಗಿಂತ ಶೇ.2ರಷ್ಟು ಹೆಚ್ಚು ಮಳೆಯಾಗಿದೆ.
ಜನವರಿ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ ಶೇ.68ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದೇ ರೀತಿ ಮಾರ್ಚ್ ಒಂದರಿಂದ ಮೇ ಅಂತ್ಯದವರೆಗಿನ ಅವಧಿಯಲ್ಲಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಶೇ. 149ರಷ್ಟು ಹೆಚ್ಚಾಗಿತ್ತು. ಅವಧಿಗೆ ಮುನ್ನ ಮುಂಗಾರು ಆರಂಭವಾಗಿ ಪ್ರಾರಂಭದಲ್ಲೇ ಅಬ್ಬರಿಸಿದರೂ ಕಳೆದ ಎರಡು ವಾರಗಳಿಂದ ಒಳನಾಡಿನಲ್ಲಿ ದುರ್ಬಲಗೊಂಡಿದೆ.
- ಮಾಜಿ ಪ್ರಧಾನಿ ದೇವೇಗೌಡರಿಗೆ ಶ್ರೀಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ
- ಡಿ.ಕೆ.ಶಿವಕುಮಾರ್ ಸಿಎಂ ಕನಸು ಕಾಣಬೇಕಷ್ಟೇ..! : ಹೆಚ್ಡಿಕೆ ವ್ಯಂಗ್ಯ
- ಭ್ರಷ್ಟಾಚಾರ ಬಯಲಿಗೆಳೆದ ಶಾಸಕರಿಗೆ ಬೆದರಿಕೆ : ವಿಜಯೇಂದ್ರ ಗಂಭೀರ ಆರೋಪ
- ಸಂಚಲನ ಮೂಡಿಸಿದೆ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ
- ಅಕ್ರಮ ಗಣಿ ಪ್ರಕರಣಗಳ ಕುರಿತು ಎಚ್.ಕೆ. ಪಾಟೀಲರ ಪತ್ರಕ್ಕೆ ಸಿಎಂ ಸ್ಪಂದನೆ ಏನು.. ?