ಬೆಂಗಳೂರು,ನ.28-ಪರಶಿವನೇ ಧರೆಗಿಳಿದು ಬಂದರೂ ಪರಪ್ಪನ ಅಗ್ರಹಾರದ ಅವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲ ಎನ್ನುವುದು ಮತ್ತೊಮೆ ಸಾಬೀತಾಗಿದೆ.ಈ ಹಿಂದೆ ಹಲವಾರು ಭಾರಿ ಬಂಧೀಖಾನೆಗಳಲ್ಲಿ ಮೊಬೈಲ್ ಚಾರ್ಜರ್, ಬೀಡಿ ಸಿಗರೇಟ್ ಮತ್ತಿತರರ ವಸ್ತುಗಳು ಪತ್ತೆಯಾಗಿದ್ದರಿಂದ ಇನುಂದೆ ಯಾವುದೇ ಕಾರಣಕ್ಕೂ ಜೈಲುಗಳಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಎಚ್ಚರಿಕೆ ನೀಡಿದ್ದರು.
ಇದೀಗ ಅವರ ಮಾತಿಗೂ ಕಿಮತ್ತು ದೊರೆತಿಲ್ಲ. ಪರಪ್ಪನ ಅಗ್ರಹಾರ ಕಾರಾಗೃಹದ ಬ್ಯಾರಕ್‌ಗಳ ಮೇಲೆ ಹಿರಿಯ ಅಧಿಕಾರಿಗಳ ತಂಡ ನಿನ್ನೆ ಮತ್ತು ಮೊನ್ನೆ ದಾಳಿ ನಡೆಸಿದಾಗ ಮತ್ತೆ ಮೊಬೈಲ್‌ಗಳು, ಸಿಮ್‌ಗಳು ಮತ್ತಿತರ ನಿಷೇಧಿತ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಸುಧಾರಣೆ ತರಲು ಐಪಿಎಸ್ ಅಧಿಕಾರಿ ಅಂಶುಕುಮಾರ್ ರವರನ್ನು ಸರ್ಕಾರ ನಿಯೋಜಿಸಲಾಗಿದೆ.
ಅಂಶುಕುಮಾರ್ ನೇತೃತ್ವದಲ್ಲಿ ಕಾರಾಗೃಹದ ಮೇಲೆ ಮೊನ್ನೆ ಹಾಗೂ ನಿನ್ನೆ ದಾಳಿ ನಡೆದ ಸಂದರ್ಭದಲ್ಲಿ ಹಲವು ಬ್ಯಾರಕ್‌ಗಳಲ್ಲಿ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಚಾರ್ಜರ್ ಹಾಗೂ ಹಣ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಕಾರಾಗೃಹದಲ್ಲಿರುವ ಖೈದಿಗಳ ಹಾಗೂ ವಿಚಾರಣಾಧೀನ ಖೈದಿಗಳ ತಲೆ ದಿಂಬು, ಶೌಚಾಲಯದ ಗೋಡೆಯೊಳಗೆ, ಕಮಾನುಗಳ ಮೇಲೆ ಮೊಬೈಲ್‌ಗಳು, ಚಾರ್ಜರ್ ವೈರ್, ನಿಷೇಧಿತ ವಸ್ತುಗಳು ಕಂಡು ಒಂದು ಕ್ಷಣ ಅಧಿಕಾರಿಗಳು ಶಾಕ್ ಆಗಿದ್ದಾರೆ.
ಜೈಲಿನಲ್ಲಿ ಖ್ಯಾತ ಚಿತ್ರನಟ ದರ್ಶನ್‌ಗೆ ರಾಜಾತಿಥ್ಯನೀಡಿದ್ದು, ಬ್ಯಾರಕ್‌ಗಳಲ್ಲಿ ಖೈದಿಗಳು, ವಿಚಾರಣಾಧೀನ ಖೈದಿಗಳು ಮೋಜು-ಮಸ್ತಿ ಮಾಡಿದ್ದು, ಹಾಗೂ ವಿಕೃತ ಕಾಮಿ ಉಮೇಶ್‌ರೆಡ್ಡಿ, ಬಂಧಿತ ಉಗ್ರನೊಬ್ಬ ರಾಜಾರೋಷವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.
ಆ ಸಂದರ್ಭದಲ್ಲೇ ಇಡೀ ಬಂಧಿಖಾನೆಯ ಬ್ಯಾರಕ್‌ಗಳ ಮೇಲೆ ಹದ್ದಿನ ಕಣ್ಣಿಡುವಂತೆ ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದರೂ ಅಲ್ಲಿನ ಪರಿಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ.
ಮೊಬೈಲ್, ಸಿಮ್ ಮತ್ತಿತರ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಿದವರು ಯಾರು? ಇದಕ್ಕೆ ನೆರವು ನೀಡಿರುವವರು ಯಾರು? ಸಿಕ್ಕಿರುವ ಮೊಬೈಲ್ ಹಾಗೂ ಸಿಮ್‌ಗಳನ್ನು ಯಾವ ಯಾವ ಖೈದಿಗಳು,ವಿಚಾರಣಾಧೀನ ಖೈದಿಗಳು ಬಳಸಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.
