ತುಮಕೂರು, ಜೂ.24- ಕೊಬ್ಬರಿ ಬೆಲೆ ನಾಗಲೋಟದಲ್ಲಿ ಓಡುತ್ತಿದ್ದು, ಕ್ವಿಂಟಾಲ್‌ಗೆ ಬರೋಬ್ಬರಿ 26 ಸಾವಿರ ರೂ. ಗೆ ಮಾರಾಟವಾಗುವ ಮೂಲಕ ಸಾರ್ವಕಾಲಿಕ ಗರಿಷ್ಠ ದರ ದಾಖಲಿಸಿದೆ.
ಈ ಬಾರಿ ತೆಂಗು ಬೆಳೆಗಾರರು ನಿರೀಕ್ಷಸದ ಮಟ್ಟದಲ್ಲಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಬೆಳೆಗಾರರಿಗೆ ಸೋಜಿಗ ಎನಿಸಿದೆ.
ಕಲ್ಪತರು ನಾಡು ತುಮಕೂರಿನಲ್ಲಿ ತೆಂಗು ಇಳುವರಿ ಈ ಬಾರಿ ಗಣನೀಯವಾಗಿ ಇಳಿಮುಖವಾಗಿದೆ.ಇಳುವರಿಯಿಲ್ಲದೆ ರೈತರು ಬೆಲೆ ಕೇಳಿಯಷ್ಟೇ ಖುಷಿ ಪಡುವಂತಾಗಿದೆ. ನಿನ್ನೆ ತಿಪಟೂರು ಮಾರುಕಟ್ಟೆಗೆ 3,351 ಕ್ವಿಂಟಾಲ್ ಕೊಬ್ಬರಿ ಬಂದಿದ್ದು, ಸರಾಸರಿ 25,300 ರೂ.ನಂತೆ ಮಾರಾಟವಾಗಿದೆ.
ಕನಿಷ್ಠ ದರ 23 ಸಾವಿರ ಹಾಗೂ ಗರಿಷ್ಠ ದರ 26,167 ರೂ.ಗೆ ಮಾರಾಟವಾಗಿದೆ.
ತೆಂಗಿನಕಾಯಿ ಬೆಲೆ ತುಸು ಇಳಿದಿದ್ದು, ಕೊಬ್ಬರಿ ಬೆಲೆ ಮಾತ್ರ ನಿರಂತರವಾಗಿ ಏರುತ್ತಲೇ ಇದೆ. ಕೊಬ್ಬರಿ ಎಣ್ಣೆಗೂ ಕೂಡ ಉತ್ತಮ ಬೆಲೆ ಬಂದಿದ್ದು, ಮಾರುಕಟ್ಟೆಯಲ್ಲಿ 15 ಕೆ.ಜಿ. ಕೊಬ್ಬರಿ ಎಣ್ಣೆಗೆ 5,500 ರೂ.ಗೆ ಮಾರಾಟವಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ 600 ರೂ. ಬೆಲೆ ಹೆಚ್ಚಳವಾಗಿದೆ. ಕಲ್ಪವೃಕ್ಷದ ಪ್ರತಿಯೊಂದು ವಸ್ತುವೂ ಕೂಡ ಉಪಯೋಗಕ್ಕೆ ಬರುತ್ತದೆ ಎಂಬುದು ಪ್ರಸ್ತುತ ಸಂದರ್ಭದಲ್ಲಿ ನಿಜವಾಗಿದೆ. ಚಿಪ್ಪಿಗೂ ಕೂಡ ಶುಕ್ರದೆಸೆ ತಿರುಗಿದ್ದು ಒಂದು ಟನ್ ಚಿಪ್ ಗೆ 25 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಅದೇ ರೀತಿ ತೆಂಗಿನಮಟ್ಟೆಗೂ ಕೂಡ ಬೆಲೆ ಬಂದಿದೆ. ಒಂದು ತೆಂಗಿನ ಮರ ನೆಟ್ಟು ಬೆಳೆಸಿದರೆ ಜೀವನಪೂರ್ತಿ ಕುಟುಂಬವನ್ನು ಸಾಕುತ್ತದೆ ಎಂಬ ಗಾದೆ ಮಾತು ಈಗ ಸತ್ಯವಾದಂತಿದೆ.
ಬೆಲೆಗೆ ಕಾರಣ :
ತೆಂಗು ಬೆಳೆಯುವ ಪ್ರದೇಶವನ್ನು ಅಡಿಕೆ ಗಿಡಗಳು ಆವರಿಸಿದ್ದು, ಉತ್ಪಾದನೆ ಕುಂಠಿತವಾಗಿದೆ. ಇದರ ಜೊತೆಗೆ ನುಸಿ ಸೇರಿದಂತೆ ಮತ್ತಿತರ ರೋಗಗಳಿಗೆ ತುತ್ತಾಗಿ ತೆಂಗಿನ ಮರಗಳು ಒಣಗುತ್ತಿರುವುದರಿಂದ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-07-2025)
- ಪೊಲೀಸ್ ಕಸ್ಟಡಿ ಸಾವು ವಿರೋಧಿಸಿ ಬೀದಿಗಿಳಿದ ವಿಜಯ್
- ಸಾಲಬಾಧೆ ತಾಳಲಾರದೆ ಒಂದೇ ಗ್ರಾಮದ ಇಬ್ಬರು ರೈತರ ಆತ್ಮಹತ್ಯೆ
- ಬೆಳಗಾವಿ : ನಡು ರಸ್ತೆಯಲ್ಲೇ ಯುವ ಗಾಯಕನ ಬರ್ಬರ ಹತ್ಯೆ
- ಕಿರು ತೆರೆ ನಟಿ ಶ್ರುತಿ ಮೇಲಿನ ಹಲ್ಲೆಗೆ ನೈಜ ಕಾರಣ ಬಿಚ್ಚಿಟ್ಟ ಪತಿ