Thursday, June 26, 2025
Homeಜಿಲ್ಲಾ ಸುದ್ದಿಗಳು | District NewsHaveriಗುತ್ತಿಗೆದಾರ ಶಿವಾನಂದ ಕೊಲೆ ಪ್ರಕರಣ : ಗುಂಡು ಹಾರಿಸಿ ಇಬ್ಬರು ಆರೋಪಿಗಳನ್ನು ಸೆರೆಹಿಡಿದ ಪೊಲೀಸರು

ಗುತ್ತಿಗೆದಾರ ಶಿವಾನಂದ ಕೊಲೆ ಪ್ರಕರಣ : ಗುಂಡು ಹಾರಿಸಿ ಇಬ್ಬರು ಆರೋಪಿಗಳನ್ನು ಸೆರೆಹಿಡಿದ ಪೊಲೀಸರು

Contractor Shivananda murder case: Police arrest two accused

ಹಾವೇರಿ, ಜೂ.26-ಗುತ್ತಿಗೆದಾರ ಶಿವಾನಂದ ಅವರ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾರೆ.
ಗಾಯಗೊಂಡಿರುವ ಪ್ರಮುಖ ಆರೋಪಿಗಳಾದ ನಾಗರಾಜ್ ಮತ್ತು ಅಶ್ರಫ್‌ನನ್ನು ಹುಬ್ಬಳ್ಳಿ ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದ್ದ ಗುತ್ತಿಗೆದಾರ ಶಿವಾನಂದ ಕೊಲೆ ಪ್ರಕರಣದಲ್ಲಿ ಆರೋಪಿಗಳು ಪ್ರತೀದಿನ ಊರೂರು ಸುತ್ತುತ್ತಾ ತಲೆಮರೆಸಿಕೊಳ ುತ್ತಿದ್ದರು.
ಇಂದು ಬೆಳಗಿನ ಜಾವ ಪ್ರಮುಖ ಆರೋಪಿ ಸೇರಿದಂತೆ ಇಬ್ಬರು ಆರೋಪಿಗಳು ತಾಲ್ಲೂಕಿನ ಚಿಕ್ಕಾಂಶಿ ಹೊಸೂರಿನಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಖಚಿತ ಮಾಹಿತಿ ಮೇರೆಗೆ ಪಿಎಸ್‌ಐಗಳಾದ ಸಂಪತ್‌ಕುಮಾ‌ರ್ ಹಾಗೂ ಶರಣಪ್ಪ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿ
ಕರೆತರುವಾಗ ಮಾರ್ಗಮಧ್ಯೆ ಆರೋಪಿಗಳಿಬ್ಬರೂ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಪಿಎಸ್‌ಐ ಸಂಪತ್‌ಕುಮಾರ್ ರವರು ತಮ್ಮ ಪಿಸ್ತೂಲಿನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗಳಿಗೆ
ಎಚ್ಚರಿಸಿದ್ದಾರೆ.ಪೊಲೀಸರ ಮಾತನ್ನು ಲೆಕ್ಕಿಸದೇ ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆ ಇಬ್ಬರು ಪಿಎಸ್‌ಐಗಳು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡುಗಳು ಆರೋಪಿಗಳ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಇತ್ತೀಚೆಗೆ ಶಿಗ್ಗಾವಿ ಪಟ್ಟಣದಲ್ಲಿ ಹಾಡ ಹಗಲೇ ನಡೆದ ಕಾಂಗ್ರೆಸ್ ಮುಖಂಡ ಶಿವಾನಂದ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವಾಗಲೇ ಪ್ರಮುಖ ಆರೋಪಿ ನಾಗರಾಜ್ ಮನೆಗೆ ಮೊನ್ನೆ ತಡರಾತ್ರಿ ಬೆಂಕಿ ಹಚ್ಚಿದ್ದರು.

ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳು ಸುಟ್ಟು ಕರಕಲಾಗಿದೆ.ಶಿವಾನಂದ ಹಾಗೂ ಆರೋಪಿಗಳ ನಡುವೆ ಆಸ್ತಿ ವಿಚಾರವಾಗಿ ಮನಸ್ತಾಪವಿತ್ತು ಎನ್ನಲಾಗಿದೆ. ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ.

RELATED ARTICLES

Latest News