ಹಾಸನ,ಜೂ.28- ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಜೀವಹಾನಿಯಾಗಿದ್ದು, ಮೃತಪಟ್ಟವರ ಸಂಖ್ಯೆ 17ಕ್ಕೇರಿದೆ.ಕಳೆದ ಒಂದು ತಿಂಗಳಲ್ಲಿ ಹಾಸನದಲ್ಲಿ ವರದಿಯಾಗುತ್ತಿರುವ ಸರಣಿ ಹೃದಯಾಘಾತ ಪ್ರಕರಣಗಳು ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇಂದು ಬೆಳಿಗ್ಗೆ 37 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಯಾವುದೇ ಮುನ್ಸೂಚನೆ ಇಲ್ಲದೆ ಸದೃಢವಾಗಿದ್ದ ವ್ಯಕ್ತಿಯೊಬ್ಬರು ಇಂದು ಬೆಳಿಗ್ಗೆ ತಾವೇ ಖುದ್ದಾಗಿ ಆಟೋ ಚಾಲನೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗೋವಿಂದ(37) ಎಂಬುವರಿಗೆ ಬೆಳಿಗ್ಗೆ 7 ಗಂಟೆ ಸುಮಾರಿನಲ್ಲಿ ಎದೆ ಉರಿ ಕಾಣಿಸಿಕೊಂಡಿದೆ. ದೊಡ್ಡಪ್ಪನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಖುದ್ದು ತಾವೇ ಆಟೋ ಓಡಿಸಿಕೊಂಡು ಹೋಗಿದ್ದಾರೆ.
ವೈದ್ಯರು ತಪಾಸಣೆ ನಡೆಸಿ ರಕ್ತಪರೀಕ್ಷೆಗೆ ಬರೆದುಕೊಟ್ಟಿದ್ದಾರೆ. ಔಷಧಿ ತರಲು ವೈದ್ಯರು ಸೂಚನೆ ನೀಡಿದ್ದಾರೆ. ಅದನ್ನು ತಾನೇ ತರುವುದಾಗಿ ಗೋವಿಂದ ಹೇಳಿದ್ದರು ಎನ್ನಲಾಗಿದೆ. ದೊಡ್ಡಪ್ಪನನ್ನು ಅಲ್ಲಿಯೇ ಕೂರಿಸಿ ಔಷಧಿ ತರಲು ಒಂದೆರೆಡು ಹೆಜ್ಜೆ ಆಕಡೆ ಹೋಗುತ್ತಿದ್ದಂತೆ ಕುಸಿದುಬಿದ್ದಿದ್ದಾರೆ.
ಗೋವಿಂದ ಅವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಸೇರಿ ಇಬ್ಬರು ಮಕ್ಕಳಿದ್ದಾರೆ. ಅತ್ಯಂತ ಆರೋಗ್ಯವಾಗಿದ್ದ ಗೋವಿಂದ ಆಟೋವನ್ನು ಒಬ್ಬನೇ ಪಲ್ಟಿಯಾಗುವಂತೆ ಎತ್ತುತ್ತಿದ್ದ. ಟೈರ್ ಒಡೆದುಹೋಗುವಂತೆ ಜಾಡಿಸಿ ಒದೆಯುವಷ್ಟು ಶಕ್ತಿಶಾಲಿಯಾಗಿದ್ದ. ಯಾವ ಅನಾರೋಗ್ಯದ ಸೂಚನೆಗಳೂ ಇರಲಿಲ್ಲ. ದುಷ್ಚಟಗಳು ತೀವ್ರ ಪ್ರಮಾಣದ ದಾಸನಾಗಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಗೋವಿಂದ ಅವರನ್ನು ಕಂಡು ಸ್ನೇಹಿತರು, ಬಂಧು ಬಳಗ ದುಃಖತಪ್ತವಾಗಿದೆ.ಹಿಂದಿನ ರಾತ್ರಿ ಸ್ನೇಹಿತರನ್ನು ಮಾತನಾಡಿಸಿ, ಕೆಲ ಕಹಿ ಘಟನೆಗಳನ್ನು ಮರೆಯುವಂತೆ ಕೇಳಿಕೊಂಡಿದ್ದ ಎಂದು ಹೇಳಿದ್ದಾರೆ. ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸ್ನೇಹಿತರು, ಬಂಧು ಬಳಗ ಜಮಾಯಿಸಿ ಗೋವಿಂದನ ಸಾವಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾಳಿ ಬದುಕಬೇಕಾದ ಯುವಕ-ಯುವತಿಯರು, ಚಿಕ್ಕವಯಸ್ಸಿನಲ್ಲೇ ಈ ರೀತಿಯ ಹೃದಯಾಘಾತದಿಂದ ತಮ ಬಾಳಪಯಣ ಮುಗಿಸುತ್ತಿರುವುದು ಜನಸಾಮಾನ್ಯರನ್ನು ದಿಗ್ಭ್ರಾಂತಗೊಳಿಸಿದೆ.
ಹೃದಯಾಘಾತಕ್ಕೆ ಕಾರಣವೇನೆಂಬುದು ಯಕ್ಷಪ್ರಶ್ನೆಯಾಗಿದ್ದು, ಜಿಲ್ಲೆಯ ವೈದ್ಯರು ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ. ಇದು ವೈದ್ಯಲೋಕಕ್ಕೆ ಸವಾಲಾಗಿದ್ದು, ಚಿಕ್ಕವಯಸ್ಕರೇ ದುರಂತ ಅಂತ್ಯ ಕಾಣುತ್ತಿರುವುದರ ಮೂಲ ಏನೆಂದು ಪತ್ತೆ ಹಚ್ಚಬೇಕಾಗಿದೆ.ಒತ್ತಡದ ಜೀವನ, ಆಹಾರಶೈಲಿ, ಬದಲಾದ ಜೀವನ ಕ್ರಮವೇ ಹೃದಯಾಘಾತಕ್ಕೆ ಕಾರಣವೆಂದು ಕೆಲವರು ಅಭಿಪ್ರಾಯಪಟ್ಟಿದ್ದು, ಯುವಜನತೆ ಆದಷ್ಟು ಆರೋಗ್ಯದತ್ತ ಗಮನ ಹರಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ.
- ಪಾಕ್ ಪ್ರವಾಹದಲ್ಲಿ 220 ಜನ ಬಲಿ
- ಇಂಡೋನೇಷ್ಯಾದ ಸುಲಾವೆಸಿ ದ್ವೀಪದಲ್ಲಿ 5.8 ತೀವ್ರತೆಯ ಭೂಕಂಪ
- ಪೀಣ್ಯ ಫ್ಲೈ ಓವರ್ ಮೇಲೆ ಅಪಘಾತ, ಗ್ಯಾಸ್ ಸಿಲಿಂಡರ್ ಡೆಲಿವರಿ ಬಾಯ್ ಸಾವು
- ಧರ್ಮಸ್ಥಳದ ಅಪಪ್ರಚಾರ ಪಿತೂರಿ ಮಾಡಿದವರ ವಿರುದ್ಧ ತನಿಖೆಗೆ ಬಿವೈವಿ ಆಗ್ರಹ
- ನಗರ್ತಪೇಟೆ ಅಗ್ನಿ ಅವಘಡ, ಇಬ್ಬರ ಬಂಧನ