ಗೌರಿಬಿದನೂರು, ಜು. 1- ತಾಲ್ಲೂಕಿನ ಇಡಗೂರು ಗ್ರಾಮದ ಬಳಿಯ ಬೀಮನಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಮನೆಗೆ ನುಗ್ಗಿ ಮಹಿಳೆಯ ಮಾಂಗಲ್ಯ ಸರವನ್ನು ಕಸಿಯಲು ಯತ್ನಿಸಿದ್ದು, ಪೊಲೀಸರ ಚಾಣಾಕ್ಷತನದಿಂದ ಆರೋಪಿಯನ್ನು ಬಂಧಿಸಿದ್ದಾರೆ.
ರವಿ ಬೀಮನಹಳ್ಳಿ ವಾಸಿ ಸರಗಳ್ಳತನಕ್ಕೆ ವಿಫಲಯತ್ನ ಮಾಡಿದ ಯುವಕ ಎಂದು ಗುರುತಿಸಲಾಗಿದ್ದು, ಅದೇ ಗ್ರಾಮದ ಶಾಂತಮ್ಮ ಎಂಬುವವರ ಸರ ಕಸಿಯಲು ಯತ್ನಿಸಿದ್ದ.
ನಡೆದಿದ್ದೇನು?:
ಶನಿವಾರ ರಾತ್ರಿ ವೇಳೆಯಲ್ಲಿ ರವಿ ಎಂಬವವನು ಶಾಂತಮ್ಮ ಎಂಬುವವರ ಮನೆಗೆ ನುಗ್ಗಿ ಆಕೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಸಿಯಲು ಯತ್ನಿಸಿದ ಸಂದರ್ಭದಲ್ಲಿ ಶಾಂತಮ್ಮ ಜೋರಾಗಿ ಕೂಗಿಕೊಂಡಿದ್ದರಿಂದ ಆರೋಪಿ ರವಿ ಮನೆಯಿಂದ ಓಡಿಹೋಗಿದ್ದಾನೆ. ಹೋಗುವ ಸಂದರ್ಭದಲ್ಲಿ ರವಿ ತನ್ನ ಚಪ್ಪಲಿಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು, ಶಾಂತಮ್ಮ ಮತ್ತು ಗ್ರಾಮದವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ಮಾಡುತ್ತಿರುವ ಸಂದರ್ಭದಲ್ಲಿ ಆರೋಪಿ ರವಿಯೂ ಸಹ ಅಲ್ಲಿಯೇ ಇದ್ದು, ಆತನ ಕಾಲಿನಲ್ಲಿ ಚಪ್ಪಲಿ ವ್ಯತ್ಯಾಸವಿರುವುದನ್ನು ಧರಿಸಿದ್ದನ್ನು ಗಮನಿಸಿದ ಪೊಲೀಸರು, ಶಾಂತಮ್ಮನ ಮನೆಯ ಮುಂದೆ ಬಿಟ್ಟಿದ್ದ ಚಪ್ಪಲ್ಲಿಯನ್ನು ಧರಿಸುವಂತೆ ತಿಳಿಸಿದ್ದು, ಅದು ಆತನದೇ ಎಂದು ದೃಢಪಟ್ಟ ಬಳಿಕ ರವಿಯನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತಾನೇ ಕಳ್ಳತನದ ಯತ್ನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಗ್ರಾಮದವರ ಜೊತೆಯೇ ಇದ್ದವನನ್ನು ಪೊಲೀಸರು ತಮ್ಮ ಚಾಣಾಕ್ಷತನದಿಂದ ಆರೋಪಿಯನ್ನು ಪತ್ತೆ ಹೆಚ್ಚಿರುವುದನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಗ್ರಾಮಾಂತರ ಠಾಣೆಯ ಎಸ್‌ಐ ರಮೇಶ್ ಗುಗ್ಗರಿ, ಮುಖ್ಯ ಪೇದೆ ರಿಜ್ವಾನ್, ಶ್ರೀನಿವಾಸರೆಡ್ಡಿ, ಮಹೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.