ಬೆಂಗಳೂರು,ಜು.1- ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ನಡೆದಿದೆ ಎಂದು ಹೇಳಲಾದ ಭ್ರಷ್ಟಾಚಾರದ ಬಗ್ಗೆ ಸಚಿವ ಜಮೀರ್ ಅಹಮ್ಮದ್ ಖಾನ್‌ರವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ವರದಿ ನೀಡಿದ್ದಾರೆ.
ನಿನ್ನೆ ಶಾಸಕ ಬಿ.ಆರ್.ಪಾಟೀಲ್, ಪಕ್ಷದ ವರಿಷ್ಠ ನಾಯಕರಲ್ಲೊಬ್ಬರಾದ ಸುರ್ಜೇವಾಲ ಅವರನ್ನು ಭೇಟಿ ಮಾಡಿ ತಮ್ಮ ವಿವಾದಿತ ಹೇಳಿಕೆಗಳ ಬಗ್ಗೆ ಇನ್ನಷ್ಟು ವಿವರಣೆ ನೀಡಿದ್ದರು. ಅದರ ಬೆನ್ನಲ್ಲೇ ಇಂದು ಸಚಿವ ಜಮೀರ್ ಅಹಮ್ಮದ್ ಖಾನ್ ವರದಿ ನೀಡಿದ್ದಾರೆ.
ವಸತಿ ಇಲಾಖೆಯಲ್ಲಿ ಹೊಸದಾಗಿ ಯಾವ ಮನೆಗಳನ್ನೂ ಹಂಚಿಕೆ ಮಾಡಿಲ್ಲ. ಈಗಾಗಲೇ ಮಂಜೂರಾಗಿರುವ ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗಿದೆ. ಹೀಗಾಗಿ ಹೊಸ ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಆಧಾರರಹಿತ ಎಂದು ಸಚಿವರು ವಿವರಣೆ ನೀಡಿದ್ದಾರೆ.
ಬಿ.ಆರ್.ಪಾಟೀಲ್ ಸಾರ್ವಜನಿಕವಾಗಿ ಹೇಳಿಕೆ ನೀಡುವ ಬದಲಾಗಿ ನೇರವಾಗಿ ತಮಗೆ ಅಥವಾ ಮುಖ್ಯಮಂತ್ರಿಯವರಿಗೆ ದೂರು ನೀಡಬಹುದಿತ್ತು. ಅದನ್ನು ತನಿಖೆ ನಡೆಸಲು ಸರ್ಕಾರ ಸಿದ್ದವಿತ್ತು. ಆದರೆ ಅವರ ಬಹಿರಂಗ ಹೇಳಿಕೆಯ ಹಿಂದೆ ಬೇರೆ ರೀತಿಯ ರಾಜಕೀಯ ಅಡಗಿದೆ ಎಂದು ಜಮೀರ್ ಅಹಮ್ಮದ್ ಖಾನ್ ಪ್ರತಿದೂರು ನೀಡಿದ್ದಾರೆ.
ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಸಲ್ಲಿಸುವ ಫಲಾನುಭವಿಗಳ ಪಟ್ಟಿಯನ್ನು ಆಧರಿಸಿ ರಾಜೀವ್ ಗಾಂಧಿ ವಸತಿ ನಿಗಮ ಮನೆಗಳ ಮಂಜೂರಾತಿ ಮಾಡುತ್ತದೆ. ಈ ಸಂದರ್ಭದಲ್ಲಿ ಶಾಸಕರು ನೀಡುವ ಪತ್ರಗಳನ್ನೂ ಪರಿಗಣಿಸಲಾಗುತ್ತದೆ.
ಬಿ.ಆರ್.ಪಾಟೀಲ್ ಹೇಳಿದಂತೆ ತಮ್ಮ ಕಚೇರಿಯಲ್ಲಿ ಲಂಚ ಪಡೆದು ಮನೆಗಳನ್ನು ಮಂಜೂರು ಮಾಡುತ್ತಿಲ್ಲ ಎಂದು ಜಮೀರ್ ಅಹಮ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದೇ ವೇಳೆ ಬೆಳಗಾವಿಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಅವರು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.
- ಐದು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಟೀಕಿಸಿದ ಕಾಂಗ್ರೆಸ್
- ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ನಿರೀಕ್ಷೆ
- ಬಿಎಸ್ಎಫ್ ಯೋಧನ ಪತ್ನಿ ಮೇಲೆ ಅತ್ಯಾಚಾರ
- ನನಗೆ ಮಂತ್ರಿಗಿರಿಯ ಆಸೆಯಿಲ್ಲ : ರಾಜುಕಾಗೆ
- ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ