Tuesday, July 1, 2025
Homeರಾಜಕೀಯ | Politicsಶಾಸಕರ ಜೊತೆ ಸುರ್ಜೇವಾಲ ಸಮಾಲೋಚನೆ, ನಾಲಿಗೆ ಹರಿಬಿಡುವವರ ವಿರುದ್ಧ ಗರಂ

ಶಾಸಕರ ಜೊತೆ ಸುರ್ಜೇವಾಲ ಸಮಾಲೋಚನೆ, ನಾಲಿಗೆ ಹರಿಬಿಡುವವರ ವಿರುದ್ಧ ಗರಂ

Surjewala's consultation with MLAs

ಬೆಂಗಳೂರು,ಜು.1– ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಎರಡನೇ ದಿನವೂ ಶಾಸಕರ ಜೊತೆಗಿನ ಸಮಾಲೋಚನೆ ಮುಂದುವರೆಸಿದ್ದು ಪ್ರತ್ಯೇಕ ಮಾತುಕತೆಗಳ ಮೂಲಕ ಹದ್ದುಮೀರಿ ನಡೆಯುತ್ತಿದ್ದವರಿಗೆ ಬೆವರಿಳಿಸುತ್ತಿದ್ದಾರೆ. ಹೈಕಮಾಂಡ್ ನಾಯಕರು ರಾಜ್ಯಕ್ಕಾಗಮಿಸುವ ಸುಳಿವು ಸಿಗುತ್ತಿದ್ದಂತೆ ರಾಜಕೀಯವಾಗಿ ಒಂದಷ್ಟು ಕಂತೆಬೊಂತೆಗಳ ಮಾತುಗಳನ್ನಾಡಿ ಬೇಳೆ ಬೇಯಿಸಿಕೊಳ್ಳುವ ಉಮೇದಿನಲ್ಲಿದ್ದವರಿಗೆ ಸುರ್ಜೇವಾಲ ಅವರ ಮಾತುಕತೆಯ ಧಾಟಿ ಗರಬಡಿದಂತೆ ಮಾಡಿದೆ..

ಸಾಮಾನ್ಯವಾಗಿ ರಾಜಕೀಯವಾಗಿ ಪ್ರಶ್ನೆಗಳಿರಬಹುದು, ಅಭಿವೃದ್ಧಿಗೆ ಸರ್ಕಾರ ಸ್ಪಂದಿಸದೇ ಇರುವ ಮಾಹಿತಿಗಳನ್ನು ಕೇಳಬಹುದು. ಸಚಿವರ ಕಾರ್ಯವೈಖರಿ, ಸರ್ಕಾರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅಭಿಪ್ರಾಯ ಸಂಗ್ರಹಿಸಬಹುದು ಎಂದು ತರಾವರಿ ಆಲೋಚನೆಗಳಲ್ಲಿ ಸುರ್ಜೇವಾಲ ಅವರನ್ನು ಭೇಟಿ ಮಾಡಿದವರಿಗೆ ಎದುರಾಗುವ ಪ್ರಶ್ನೆಗಳು ತಬ್ಬಿಬ್ಬುಗೊಳಿಸಿವೆ. ಮೊಟ್ಟಮೊದಲಿಗೆ ಸುರ್ಜೇವಾಲ ಕಳೆದ ಎರಡು ವರ್ಷದಲ್ಲಿ ನಿಮ್ಮ ಕ್ಷೇತ್ರದಲ್ಲಿ ನೀವು ಮಾಡಿರುವ ಸಾಧನೆಗಳೇನು? ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಸಾಧನೆಗಳ ವಿವರಣೆಯಲ್ಲಿ ಅಂಕಿಸಂಖ್ಯೆ ಹಾಗೂ ದಿನಾಂಕಗಳ ಸಹಿತ ವಿವರಿಸಬೇಕಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳದೆ ರಾಜಕೀಯವಾಗಿ ಮಾತುಕತೆ ನಡೆಯಬಹುದು ಎಂದು ಬಿಡುಬೀಸಾಗಿಕೈಬೀಸಿಕೊಂಡು ಬಂದಿದ್ದ ಶಾಸಕರಿಗೆ ಸುರ್ಜೇವಾಲ ಅವರ ಪ್ರಶ್ನೆಗಳು ಬೆವರಿಳಿಯುವಂತೆ ಮಾಡಿವೆ.

ರಾಜಕೀಯವಾಗಿ ಚರ್ಚೆ ಮಾಡಲು ಬೇರೆ ವೇದಿಕೆ ಇದೆ. ಚುನಾವಣಾ ವೇಳೆ ಜನ ನಮ್ಮನ್ನು ನಂಬಿ ಮತ ಹಾಕಿದ್ದಾರೆ. ಅವರಿಗೆ ನೀಡಿದ್ದ ಭರವಸೆಗಳಲ್ಲಿ ಎಷ್ಟು ಈಡೇರಿವೆ?, ಜನರಿಗೆ ನೀವೆಷ್ಟು ಲಭ್ಯವಿದ್ದೀರ?, ಸಚಿವರನ್ನು ಕರೆತಂದು ಎಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೀರ? ಎಂಬೆಲ್ಲಾ ವಿವರಗಳನ್ನು ನೀಡುವುಂತೆ ಸುರ್ಜೇವಾಲ ಸೂಚನೆ ನೀಡಿದ್ದಾರೆ.

ನಂತರದಲ್ಲಿ ಇಲಾಖಾವಾರು ಅನುದಾನದ ಲಭ್ಯತೆ ಮತ್ತು ಸಚಿವರ ಸ್ಪಂದನೆಗಳ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಯಾವೆಲ್ಲಾ ಸಚಿವರು ಸ್ಪಂದಿಸುತ್ತಿದ್ದಾರೆ. ಯಾರು ನಿಷ್ಕ್ರಿಯರಾಗಿದ್ದಾರೆ ಶಾಸಕರಿಗೆ ಸಿಗದೇ ಇರುವ ಸಚಿವರು ಯಾರು, ಶಾಸಕರ ಪತ್ರಗಳನ್ನು ಹೊರತುಪಡಿಸಿ ಬೇರೆಯವರಿಗೆ ಮಣೆ ಹಾಕುತ್ತಿರುವ ಇಲಾಖೆಗಳಾವುವು ಎಂಬೆಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ.

ಪಕ್ಷ ಸಂಘಟನೆಗೆ ಶಾಸಕರ ಕೊಡುಗೆಯೇನು, ಪಕ್ಷ ಕಚೇರಿಗೆ ಎಷ್ಟು ಬಾರಿ ಭೇಟಿ ನೀಡಿದ್ದೀರ, ಸಂಘಟನಾತ್ಮಕ ಚಟುವಟಿಕೆಗಳು ನಡೆಯುವ ಕೇಂದ್ರ ಸ್ಥಳ ಯಾವುದು ಎಂಬ ಮಾಹಿತಿಯನ್ನು ಕಲೆ ಹಾಕಿರುವ ಸುರ್ಜೇವಾಲ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಪಕ್ಷದ ನಡುವಿನ ಸಂಬಂಧಗಳ ಬಗ್ಗೆಯೂ ವಿವರಣೆ ಪಡೆದುಕೊಂಡಿದ್ದಾರೆ.

ಸರ್ಕಾರದಿಂದ ದೊರೆಯುತ್ತಿರುವ ಅನುದಾನವೆಷ್ಟು, ಭವಿಷ್ಯದಲ್ಲಿ ಯಾವೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ವಿವರಗಳನ್ನು ಪಡೆದುಕೊಂಡಿದ್ದಾರೆ. ಮುಂದಿನ ಸಭೆಯಲ್ಲಿ ಈ ಬಗ್ಗೆ ವಿವರಣೆ ನೀಡಬೇಕಾಗಬಹುದು ಎಂದು ಶಾಸಕರಿಗೆ ಸುರ್ಜೇವಾಲ ಎಚ್ಚರಿಕೆ ನೀಡುವ ಮೂಲಕ ಶಾಲಾ ಮಕ್ಕಳಿಗೆ ಪಾಠ ಮಾಡಿದಂತೆ ತಿಳಿಹೇಳಿದ್ದಾರೆ.

ಮುಂದುವರೆದ ಸಭೆ:
ಇಂದು ಕೂಡ ಶಾಸಕರೊಂದಿಗೆ ಸಮಾಲೋಚನೆ ಮುಂದುವರೆಸಿರುವ ಸುರ್ಜೇವಾಲ, ಮಾಲೂರು ಕ್ಷೇತ್ರದ ಕೆ.ವೈ.ಮಂಜೇಗೌಡ, ಬೆಂಗಳೂರಿನ ಪುಲಿಕೇತಿ ನಗರದ ಎ.ಸಿ.ಶ್ರೀನಿವಾಸ್, ಶಿವಾಜಿನಗರದ ರಿಜ್ವಾನ್ ಅರ್ಷದ್, ಶಾಂತಿನಗರದ ಎನ್.ಎ.ಹ್ಯಾರಿಸ್, ಗೋವಿಂದ ರಾಜನಗರ ಕ್ಷೇತ್ರದ ಪ್ರಿಯಾಕೃಷ್ಣ, ವಿಜಯನಗರದ ಎಂ.ಕೃಷ್ಣಪ್ಪ, ಆನೇಕಲ್‌ನ ಬಿ.ಶಿವಣ್ಣ, ಹೊಸಕೋಟೆಯ ಶರತ್ ಬಚ್ಚೇಗೌಡ, ನೆಲಮಂಗಲದ ಎನ್ .ಶ್ರೀನಿವಾಸ್, ಮಾಗಡಿಯ ಎಚ್.ಸಿ.ಬಾಲಕೃಷ್ಣ, ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್, ರಾಮನಗರದ ಇಕ್ಸಾಲ್ ಹುಸೇನ್, ಕೊಳ್ಳೇಗಾಲದ ಕೃಷ್ಣಮೂರ್ತಿ, ಚಾಮರಾಜನಗರದ ಪುಟ್ಟರಂಗಶೆಟ್ಟಿ, ಗುಂಡ್ಲುಪೇಟೆಯ ಗಣೇಶ್ ಪ್ರಸಾದ್, ಮೈಸೂರಿನ ತನ್ನೀರ್ ಸೇಶ್, ಕೆ.ಆರ್.ನಗರದ ಬಿ.ರವಿಶಂಕರ್, ಎಚ್.ಡಿ.ಕೋಟೆಯ ಅನಿಲ್‌ ಚಿಕ್ಕಮಾಧು ಸೇರಿದಂತೆ 20ಕ್ಕೂ ಹೆಚ್ಚು ಶಾಸಕರುಗಳ ಜೊತೆ ಸುರ್ಜೇವಾಲ ಚರ್ಚೆ ನಡೆಸಿದ್ದಾರೆ.

ಸಚಿವರಿಂದ ಅಭಿಪ್ರಾಯ ಸಂಗ್ರಹ:
ನಿನ್ನೆ ಶಾಸಕರ ಜೊತೆಗಿನ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜೊತೆ ಸುರ್ಜೇವಾಲ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿದರು. ಡಿಕೆಶಿ ತೆರಳಿದ ಬಳಿಕ ಸಿದ್ದರಾಮಯ್ಯನವರ ಜೊತೆ ಮತ್ತಷ್ಟು ಕಾಲ ರಹಸ್ಯ ಸಮಾಲೋಚನೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಇಂದು ಸಂಜೆ ಕೆಲ ಸಚಿವರಿಂದ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆಗಳಿವೆ.

RELATED ARTICLES

Latest News