Wednesday, July 2, 2025
Homeರಾಜ್ಯಹೆಚ್ಚಿದ ಹೃದಯಾಘಾತ ಸಾವಿನ ಪ್ರಕರಣಗಳು, ಆತಂಕದಿಂದ ಆಸ್ಪತ್ರೆಯತ್ತ ಜನ ದೌಡು

ಹೆಚ್ಚಿದ ಹೃದಯಾಘಾತ ಸಾವಿನ ಪ್ರಕರಣಗಳು, ಆತಂಕದಿಂದ ಆಸ್ಪತ್ರೆಯತ್ತ ಜನ ದೌಡು

Heart attack deaths on the rise, people rush to hospitals due to anxiety

ಬೆಂಗಳೂರು,ಜು.1- ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಜನಸಾಮಾನ್ಯರ ಆತಂಕದಿಂದ ಆಸ್ಪತ್ರೆಗಳಲ್ಲಿ ತಪಾಸಣೆಗಾಗಿ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹಾಸನದಲ್ಲಿ 42 ದಿನಗಳ ಅವಧಿಯಲ್ಲಿ 23ಕ್ಕೂ ಹೆಚ್ಚು ಮಂದಿ ಕಿರಿಯ ವಯಸ್ಸಿನಲ್ಲೇ ಹೃದಯಾ ಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

ಅದರ ಬೆನ್ನಲ್ಲೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.ಹಾವೇರಿ ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ 48 ವರ್ಷದ ಸರ್ಕಾರಿ ವೈದ್ಯ ಡಾ. ಸಂದೀಪ್‌, ತುಮಕೂರಿನಲ್ಲಿ ಬಿಜೆಪಿ ಯುವಮೋರ್ಚಾದ ಮುಖಂಡ 36 ವರ್ಷದ ನೀಲಕಂಠಸ್ವಾಮಿ, ದಾವಣಗೆರೆಯಲ್ಲಿ 19 ವರ್ಷದ ಯುವತಿ ತರಕಾರಿ ಕತ್ತರಿಸುವಾಗಲೇ ಪಕ್ಕಕ್ಕೆ ವಾಲಿಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಅಲ್ಪಾವಧಿಯಲ್ಲಿ ಆರು ಮಂದಿ ಹೃದಯಾಘಾತಕ್ಕೆ ಒಳಗಾಗಿರುವ ವರದಿ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೇ-ಜೂನ್‌ ತಿಂಗಳಿನಲ್ಲಿ 14 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲೂ ಅಸ್ವಸ್ಥರಾದ ಕೆಲವೇ ನಿಮಿಷಗಳಲ್ಲಿ ಪ್ರಾಣವಾಯು ಹಾರಿಹೋಗಿರುವುದು, ಪ್ರಾಥಮಿಕ ಚಿಕಿತ್ಸೆಗೂ ಅವಕಾಶವಿಲ್ಲದಂತೆ ಸಾವಿನ ಸರಣಿಗಳಾಗುತ್ತಿರುವುದು ಆತಂಕ ಮೂಡಿಸಿದೆ.

ಆಸ್ಪತ್ರೆಗಳ ಮೇಲೆ ಹೆಚ್ಚಿದ ಒತ್ತಡ :
ಅದರಲ್ಲೂ ಬಹುತೇಕ ಮಂದಿ ಚಿಕ್ಕ ವಯಸ್ಸಿನವರೇ ಸಾವನ್ನಪ್ಪುತ್ತಿದ್ದಾರೆ. ಯುವಕರು-ಯುವತಿಯರು ಎಂಬ ಬೇಧವಿಲ್ಲದೆ ಸರಣಿ ಸಾವುಗಳಾಗುತ್ತಿವೆ. ಇದರಿಂದಾಗಿ ಜನರಲ್ಲಿ ಆತಂಕ ಮನೆಮಾಡಿದೆ.

ಜನತೆ ಸಣ್ಣಪುಟ್ಟ ಅಸ್ವಸ್ಥತೆಗಳಿಗೂ ತಪಾಸಣೆಗಾಗಿ ಹೃದ್ರೋಗ ತಜ್ಞರ ಬಳಿ ದಾಂಗುಡಿ ಇಡುತ್ತಿದ್ದಾರೆ. ಇದರಿಂದಾಗಿ ಬೆಂಗಳೂರು, ಮೈಸೂರು, ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಖಾಸಗಿ ಹೃದ್ರೋಗ ತಜ್ಞರ ಬಳಿಯೂ ತಪಾಸಣೆಗೊಳಗಾಗುತ್ತಿರುವ ಸಂಖ್ಯೆ ತೀವ್ರಗೊಂಡಿದೆ. ಸಾಮರ್ಥ್ಯ ಮೀರಿ ರೋಗಿಗಳು ಬರುತ್ತಿರುವುದರಿಂದ ತಪಾಸಣೆಗೆ ಒತ್ತಡ ಹೆಚ್ಚಾಗಿದೆ. ಸಾರ್ವಜನಿಕರು ಮೊದಲು ಸಾಮಾನ್ಯ ಪರೀಕ್ಷೆಗೆ ಒಳಗಾಗಿ ನಂತರ ಹೆಚ್ಚಿನ ಚಿಕಿತ್ಸೆಗೆ ತಜ್ಞರ ಬಳಿ ಹೋಗುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ದಿನಕ್ಕೆ 700 ರಿಂದ 1000 ಇಸಿಜಿಗಳಾಗುತ್ತಿದ್ದವು. ಇತ್ತೀಚೆಗೆ ಒಂದು ಸಾವಿರಕ್ಕೂ ಹೆಚ್ಚಿನ ಇಸಿಜಿ ಮಾಡಲಾಗುತ್ತಿದೆ. ಸುಮಾರು 2 ರಿಂದ 3 ಸಾವಿರ ಜನ ಕಾಲಾವಕಾಶ ಸಾಲದೇ ತೆರಳುತ್ತಿದ್ದಾರೆ ಎಂಬ ವರದಿಗಳಿವೆ.

ಸೌಲಭ್ಯಗಳ ಕೊರತೆ :
ಹೃದಯಾಘಾತ ಎಂಬುದು ಸಮಯವಕಾಶವನ್ನೇ ನೀಡದೇ ಜೀವಹತ್ಯೆ ಮಾಡುತ್ತಿದ್ದು, ಬಹಳಷ್ಟು ಪ್ರಕರಣಗಳಲ್ಲಿ ತತ್‌ಕ್ಷಣಕ್ಕೆ ಸೂಕ್ತ ಚಿಕಿತ್ಸೆ ಪಡೆಯದೆ ಸಾವುಗಳಾಗಿವೆ. ಆ್ಯಂಬುಲೆನ್‌್ಸ ಸೇವೆ ಹಾಗೂ ಪ್ರಾಥಮಿಕ ಚಿಕಿತ್ಸೆಯ ಕೊರತೆ ಬಹಳಷ್ಟು ಪ್ರಕರಣಗಳಲ್ಲಿ ಕಂಡುಬಂದಿದೆ. ರಾಜ್ಯಸರ್ಕಾರ ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಹೃದಯಜ್ಯೋತಿ ಯೋಜನೆಯನ್ನು ಆರಂಭಿಸಿದೆ. ಇದು ತುರ್ತು ಸಂದರ್ಭದಲ್ಲಿ ಜನರ ಜೀವ ಉಳಿಸಲು ಅನುಕೂಲವಾಗುವಂತಹ ಸಲಕರಣೆಗಳನ್ನು ಒದಗಿಸುವ ಮೂಲ ಉದ್ದೇಶ ಹೊಂದಿದೆ. ಆದರೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿರುವ ಬಗ್ಗೆ ಅನುಮಾನಗಳಿವೆ.

RELATED ARTICLES

Latest News