Tuesday, July 1, 2025
Homeರಾಜಕೀಯ | Politicsಕಾಂಗ್ರೆಸ್‌ನಲ್ಲಿ ತೀವ್ರಗೊಂಡ ಸಿಎಂ ಕುರ್ಚಿ ಕದನ

ಕಾಂಗ್ರೆಸ್‌ನಲ್ಲಿ ತೀವ್ರಗೊಂಡ ಸಿಎಂ ಕುರ್ಚಿ ಕದನ

CM chair battle intensifies in Congress

ಬೆಂಗಳೂರು,ಜು.1- ರಾಜಕೀಯವಾಗಿ ಸೆಪ್ಟಂಬರ್‌ ಕ್ರಾಂತಿಯ ಬ್ಯಾನೆ ರಾಜ್ಯದಲ್ಲಿ ದಿನೇದಿನೇ ಉಲ್ಭಣಿ ಸುತ್ತಿದ್ದು, ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ ಉದ್ದೇಶವೇ ತಿರುವು ಮುರುವು ಆದಂತೆ ಕಂಡುಬರುತ್ತಿದೆ. ಎಲ್ಲವೂ ಸರಳ ರೀತಿಯಲ್ಲಿ ನಡೆಯುತ್ತಿದ್ದ ವೇಳೆಯಲ್ಲಿ ಮುಖ್ಯಮಂತ್ರಿ ಮತ್ತವರ ಬೆಂಬಲಿಗರ ದೆಹಲಿ ಪ್ರವಾಸ ಕುತೂಹಲ ಕೆರಳಿಸಿತ್ತು.

ದೆಹಲಿ ಭೇಟಿಯಿಂದ ಸಿದ್ದರಾಮಯ್ಯ ಮರಳಿದ ಬೆನ್ನಲ್ಲೇ ಸಚಿವ ರಾಜಣ್ಣ ಸೆಪ್ಟೆಂಬರ್‌ನಲ್ಲಿ ರಾಜ್ಯದಲ್ಲಿ ಕ್ರಾಂತಿಯಾಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯನವರ ಜೊತೆ ದೆಹಲಿ ಪ್ರವಾಸದಲ್ಲಿದ್ದ ಸಚಿವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ, ಕೆಲವು ಖಾತೆಗಳ ಸಚಿವರು ಸ್ಥಾನ ಪಲ್ಲಟಗೊಳ್ಳಲಿದ್ದಾರೆ ಎಂಬ ವದಂತಿಯನ್ನು ತೇಲಿ ಬಿಟ್ಟಿದ್ದರು.

ಸಿದ್ದರಾಮಯ್ಯನವರ ಪರಮಾಪ್ತರಾಗಿರುವ ರಾಜಣ್ಣ, ದೆಹಲಿ ಭೇಟಿಯ ಬೆನ್ನಲ್ಲೇ ಸೆಪ್ಟೆಂಬರ್‌ ಕ್ರಾಂತಿಯ ಬಗ್ಗೆ ಮಾತನಾಡಿರುವುದು ಡಿಕೆಶಿ ಬಣವನ್ನು ರೊಚ್ಚಿಗೇಳುವಂತೆ ಮಾಡಿದೆ.ಕೆಲ ದಿನಗಳಿಂದ ತಣ್ಣಗಿದ್ದ ಅಧಿಕಾರ ಹಂಚಿಕೆಯ ಸೂತ್ರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಬಂದು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿರುವ ಹೊತ್ತಿನಲ್ಲಿ ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್‌ ಹುಸೇನ್‌, ಡಿ.ಕೆ.ಶಿವಕುಮಾರ್‌ ಸೆಪ್ಟಂಬರ್‌ನಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿರುವ ಇಕ್ಬಾಲ್‌ ಹುಸೇನ್‌, ತಾವೊಬ್ಬರೇ ಅಲ್ಲ ಕಾಂಗ್ರೆಸ್‌‍ನಲ್ಲಿ ನೂರಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಬದಲಾವಣೆ ಬಯಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರ ಜೊತೆಗಿನ ಪ್ರತ್ಯೇಕ ಚರ್ಚೆಯಲ್ಲಿ ಈ ಅಭಿಪ್ರಾಯವನ್ನು ನಾವು ಮಂಡಿಸಲಿದ್ದೇವೆ ಎಂದಿದ್ದಾರೆ.ಸೆಪ್ಟಂಬರ್‌ ಕ್ರಾಂತಿಯ ದಿನಗಳಲ್ಲೇ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದಾರೆ. ಅವರೇ ದಿನಾಂಕಗಳನ್ನು ನಿಗದಿಪಡಿಸಿದ್ದಾರೆ ಎಂದು ಇಕ್ಬಾಲ್‌ ಹುಸೇನ್‌ ಹೇಳುವ ಮೂಲಕ ಸಿದ್ದರಾಮಯ್ಯ ಅವರ ಬಣಕ್ಕೆ ತಿರುಗೇಟು ನೀಡಿದ್ದಾರೆ.

ದೆಹಲಿ ಪ್ರವಾಸದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರ ಧೋರಣೆಗಳು ಬೇರೆ ರೀತಿಯಿದ್ದವು. ಬೆಂಗಳೂರಿನಲ್ಲಿ ರಾಜಣ್ಣ ಶಾಂತಿಯ ಮಾತನ್ನಾಡಿದಾಗಲೂ ಸಿದ್ದು ಮತ್ತವರ ಆಪ್ತ ಬಣ ಪ್ರತಿಕ್ರಿಯೆ ನೀಡದೇ ಮೌನಂ ಸಮತಿ ಲಕ್ಷಣಂ ಎಂಬಂತಿತ್ತು. ಯಾವಾಗ ಇಕ್ಬಾಲ್‌ ಹುಸೇನ್‌ರವರು ಡಿಕೆಶಿಯವರು ಮುಖ್ಯಮಂತ್ರಿಯಾಗಬೇಕು, ಪಕ್ಷ ಅಧಿಕಾರಕ್ಕೆ ತರಲು ಅವರ ಬದ್ಧತೆ, ಶ್ರಮ ಹೆಚ್ಚಿದೆ, ಅದಕ್ಕೆ ಹೈಕಮಾಂಡ್‌ ಮಾನ್ಯತೆ ನೀಡಬೇಕು ಎಂದು ಬಹಿರಂಗವಾಗಿ ಹೇಳಿದರೋ ತಕ್ಷಣವೇ ಸಿದ್ದರಾಮಯ್ಯ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದರು.

ಮೈಸೂರಿನಲ್ಲಿ ಡಿಕೆಶಿಯವರ ಕೈ ಹಿಡಿದು ಮೇಲೆತ್ತುವ ಮೂಲಕ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನ ಮಾಡಿದರು. ಆದರೆ ಅದು ಫಲ ನೀಡಿದಂತೆ ಕಾಣುತ್ತಿಲ್ಲ.ಇಕ್ಬಾಲ್‌ ಹುಸೇನ್‌ ರೊಚ್ಚಿಗೆದ್ದವರಂತೆ ಹೇಳಿಕೆ ನೀಡುತ್ತಿದ್ದಾರೆ. ರಾಜಣ್ಣ ಹೇಗೆ ಸಿದ್ದರಾಮಯ್ಯ ಅವರಿಗೆ ಪರಮಾಪ್ತರೋ ಅದೇ ರೀತಿ ಡಿಕೆಶಿಯವರಿಗೆ ಇಕ್ಬಾಲ್‌ ಹುಸೇನ್‌ ಆಪ್ತರಾಗಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಇಕ್ಬಾಲ್‌ ಹುಸೇನ್‌ ಬಹಿರಂಗ ಹೇಳಿಕೆ ನೀಡಿದರೂ ಡಿಕೆಶಿ ಕೇಳಿಸದಂತೆ ತಮ ಪಾಡಿಗೆ ತಾವಿದ್ದಾರೆ.ರಾಜಣ್ಣ ಅವರ ಹೇಳಿಕೆಯ ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಕಾದುನೋಡುವ ತಂತ್ರ ಅನುಸರಿಸಿದಂತೆ ಇಕ್ಬಾಲ್‌ ಹುಸೇನ್‌ ಹೇಳಿಕೆಯ ಪರಿಣಾಮಗಳನ್ನೂ ಡಿಕೆಶಿ ಕಾಲದ ಮಹಿಮೆಗೆ ಬಿಟ್ಟಿದ್ದಾರೆ.

ಮಾಗಡಿಯ ಎಚ್‌.ಸಿ.ಬಾಲಕೃಷ್ಣ, ಕುಣಿಗಲ್‌ ರಂಗನಾಥ್‌ , ಚನ್ನಗಿರಿಯ ಬಸವರಾಜ್‌ ಶಿವಗಂಗ ಸೇರಿದಂತೆ ಹಲವಾರು ಮಂದಿ ಶಾಸಕರು ಸಣ್ಣದಾಗಿ ಡಿಕೆಶಿಯವರ ಪರವಾಗಿ ಧ್ವನಿ ಎತ್ತಲಾರಂಭಿಸಿದ್ದಾರೆ.

ನೂರಕ್ಕೂ ಹೆಚ್ಚು ಜನ ಮುಖ್ಯಮಂತ್ರಿ ಬದಲಾವಣೆಗೆ ಬಯಸಿದ್ದಾರೆ ಎಂದು ಇಕ್ಬಾಲ್‌ ಹುಸೇನ್‌ ಹೇಳಿರುವುದು ಸೆಪ್ಟಂಬರ್‌ ಕ್ರಾಂತಿಯ ಬ್ಯಾನೆ ಗಂಭೀರ ಸ್ವರೂಪಕ್ಕೆ ತಿರುಗಿದಂತೆ ಮಾಡಿದೆ.ರಾಜಣ್ಣ ಕ್ರಾಂತಿಯ ಬಗ್ಗೆ ಮಾತನಾಡಿ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿ ಡಿಕೆಶಿಯವರ ಧ್ವನಿ ಅಡಗಿಸುವ ಕಾರ್ಯತಂತ್ರ ಅನುಸರಿಸಿದರು. ಆದರೆ ಡಿಕೆಶಿ ಬಣ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಆರಂಭಿಸಿದೆ.

ಸದ್ಯಕ್ಕೆ ಆರಂಭದ ಹಂತದಲ್ಲಿರುವ ಈ ಚರ್ಚೆ ಹಂತಹಂತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ. ಈ ಮೊದಲು ಇಂತಹುದೇ ಚರ್ಚೆಗಳು ನಡೆದಾಗ ಹೈಕಮಾಂಡ್‌ ಮಧ್ಯಪ್ರವೇಶ ಮಾಡಿ ಬಾಯಿ ಮುಚ್ಚಿಕೊಂಡು ಅಭಿವೃದ್ಧಿ ಕಡೆ ಗಮನ ಕೊಡಿ, ಇಂತಹ ಚರ್ಚೆಗಳ ಮೂಲಕ ಪಕ್ಷದ ವರ್ಚಸ್ಸು ಹಾಳುಮಾಡಬೇಡಿ ಎಂದಿತ್ತು. ಆಗ ಎಲ್ಲವೂ ತಣ್ಣಗಾಗಿತ್ತು. ಈಗ ರಾಜಣ್ಣ ಗಾಯ ಕೆರೆದು ಹುಣ್ಣು ಮಾಡಿದ್ದು, ಸೆಪ್ಟಂಬರ್‌ ಕ್ರಾಂತಿಯ ಬ್ಯಾನೆಗೆ ಸುರ್ಜೇವಾಲ ಮದ್ದು ಅರೆಯುತ್ತಾರೆಯೇ ಅಥವಾ ರೋಗ ಉಲ್ಭಣಿಸಲು ಬಿಟ್ಟುಬಿಡುತ್ತಾರೆಯೇ ಎಂಬ ಕುತೂಹಲ ಕೆರಳಿದೆ.

RELATED ARTICLES

Latest News