ಬೆಂಗಳೂರು,ಜು.1– ನನಗೆ ಮಂತ್ರಿಗಿರಿಯಾಗಲೀ ಅಥವಾ ಬೇರೆ ಇನ್ನಾವುದೇ ಆಸೆಗಳಿಲ್ಲ, ಹಾಗಾಗಿ ಹೆದರಿಕೆಯಿಲ್ಲದೆ ಕ್ಷೇತ್ರಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಹೇಳಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನನ್ನ ಕ್ಷೇತ್ರದ ಜನರ ಹಿತರಕ್ಷಣೆ ಮುಖ್ಯ. ಹೀಗಾಗಿ ಈ ಮೊದಲು ನೀಡಿದ್ದ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ. ಅದಷ್ಟೂ ಅಭಿಪ್ರಾಯ ಗಳನ್ನು ಸುರ್ಜೇವಾಲ ಅವರ ಬಳಿ ಪುನರುಚ್ಚರಿಸುತ್ತೇನೆ ಎಂದಿದ್ದಾರೆ.
ಜೂನ್ 30 ರಂದು ಮಧ್ಯಾಹ್ನ 2 ಗಂಟೆಗೆ ನನಗೆ ಸುರ್ಜೇವಾಲ ಅವರ ಭೇಟಿಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಇದ್ದಿದ್ದರಿಂದಾಗಿ ಸಭೆಗೆ ಹಾಜರಾಗಲಿಲ್ಲ. ಇಂದು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಅವಕಾಶ ಸಿಕ್ಕಿದೆ ಎಂದರು.
ಶಾಸಕ ಬಿ.ಆರ್.ಪಾಟೀಲ್ ಹೇಳಿರುವುದು ಅಕ್ಷರಶಃ ನಿಜವಿದೆ. ನಮಲ್ಲೂ ಅನೇಕ ನೋವುಗಳಿವೆ. ಕೆಲ ಸಚಿವರ ನಡವಳಿಕೆಗಳು ಸರಿಯಿಲ್ಲ. ನಮನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡುವ ಪತ್ರಗಳನ್ನು ಗಮನಿಸುವುದೇ ಇಲ್ಲ. ತಮ ಪಾಡಿಗೆ ತಾವು ಯಾರೊಂದಿಗೋ ಮಾತನಾಡಿಕೊಂಡು ಹೋಗುತ್ತಾರೆ. ಶಾಸಕರು ಸಾರ್ವಜನಿಕವಾಗಿ ಸಚಿವರ ಬಳಿ ಹೋಗಿ ಸಮಸ್ಯೆಗಳನ್ನು ಹೇಳಿಕೊಳ್ಳಲಾಗುವುದಿಲ್ಲ. ಇದಕ್ಕಾಗಿ ಶಾಸಕರಿಗಾಗಿಯೇ ಪ್ರತ್ಯೇಕ ಸಮಯ ನೀಡುವ ಅಗತ್ಯವಿದೆ ಎಂದು ಹೇಳಿದರು.
ನನಗೆ ಯಾರನ್ನೂ ಓಲೈಸುವ ಅಗತ್ಯ ಇಲ್ಲ. ಸಚಿವರ ಬಳಿ ಹೋದರೆ ನನ್ನ ಕೆಲಸಕ್ಕೆ ಸೀಮಿತವಾಗಿ ಮಾತನಾಡಿ ಸಮಯ ವ್ಯರ್ಥ ಮಾಡದೇ ಎದ್ದುಬರುತ್ತೇನೆ. ಗಂಟೆಗಟ್ಟಲೆ ಅವರ ಜೊತೆ ಹರಟೆ ಹೊಡೆಯುವ ಉದ್ದೇಶವಾಗಲೀ, ಅಗತ್ಯವಾಗಲೀ ನನಗಿಲ್ಲ. ಸಚಿವನಾಗಬೇಕು. ಅಧಿಕಾರ ಬೇಕು ಎಂಬ ಯಾವ ಉಮೇದು ನನ್ನದಲ್ಲ.
ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ, ಶಾಸಕ ಸ್ಥಾನ ಬೇಡ ಎಂದರೂ ಅದಕ್ಕೂ ರಾಜೀನಾಮೆ ನೀಡಲು ನಾನು ಸಿದ್ಧ. ನನ್ನ ಮನೆಯಲ್ಲಿ ಅಜ್ಜ, ಮುತ್ತಜ್ಜ ಏನು ಶಾಸಕರಾಗಿರಲಿಲ್ಲ. ಹೀಗಾಗಿ ಹೆದರಿಕೆಯಿಲ್ಲದೆ ನನ್ನ ಅಭಿಪ್ರಾಯಗಳನ್ನು ಮಂಡಿಸುತ್ತೇನೆ ಎಂದು ತಿಳಿಸಿದರು. ನಾನು ಜನರ ಪ್ರತಿನಿಧಿ. ನನ್ನ ಮನೆಯ ಆಸ್ತಿ ಬಗ್ಗೆ ಮಾತನಾಡುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅವರ ಧ್ವನಿಯಾಗಿ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ.
- ಐದು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಟೀಕಿಸಿದ ಕಾಂಗ್ರೆಸ್
- ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ನಿರೀಕ್ಷೆ
- ಬಿಎಸ್ಎಫ್ ಯೋಧನ ಪತ್ನಿ ಮೇಲೆ ಅತ್ಯಾಚಾರ
- ನನಗೆ ಮಂತ್ರಿಗಿರಿಯ ಆಸೆಯಿಲ್ಲ : ರಾಜುಕಾಗೆ
- ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ