ಚಿಕ್ಕಬಳ್ಳಾಪುರ,ಜು.2– ಮುಂದಿನ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಸಲು ರಾಜ್ಯಸರ್ಕಾರ ಚಿಂತನೆ ನಡೆಸಿದ್ದು, ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಆಗಸ್ಟ್ 11 ರಿಂದ ಹತ್ತು ದಿನಗಳ ಕಾಲ ಮಳೆಗಾಲದ ಅಧಿವೇಶನಕ್ಕೆ ಸಮಯ ನಿಗದಿಯಾಗಿದೆ. ಅದೇ ರೀತಿ ಸಚಿವ ಸಂಪುಟ ಸಭೆಯಲ್ಲಿ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯ ಹಲವಾರು ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಚಿತ್ರದುರ್ಗದ ನಗರಾಭಿವೃದ್ಧಿ ಪ್ರಾಧಿಕಾರದಿಂದ ಭಗೀರಥ ಜಿಲ್ಲಾ ಉಪ್ಪಾರ ಸಂಘಕ್ಕೆ 348.45 ಚ.ಮೀ. ವಿಸ್ತೀರ್ಣದ ನಾಗರಿಕ ನಿವೇಶನ ಹಂಚಿಕೆಯಾಗಿದ್ದು, ಇದರ ಮೌಲ್ಯದಲ್ಲಿ ಗರಿಷ್ಠ ರಿಯಾಯಿತಿ ನೀಡಲು ಚಿಂತನೆ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ತೊರೆಬೀರನಹಳ್ಳಿ ಮತ್ತು ಬೆಳಗೆರೆ ಗ್ರಾಮಗಳ ನಡುವೆ 28 ಕೋಟಿ ರೂ. ವೆಚ್ಚದಲ್ಲಿ ಗುಡಿಹಳ್ಳಿ ಮತ್ತು ತಪ್ಪಗೊಂಡನಹಳ್ಳಿ ಗ್ರಾಮಗಳ ನಡುವೆ 31.40 ಕೋಟಿ ರೂ. ವೆಚ್ಚದಲ್ಲಿ, ಗೋಸಿಕೆರೆ ಗ್ರಾಮದ ಸಮೀಪ 34.50 ಕೋಟಿ ರೂ. ವೆಚ್ಚದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಮೂರು ಬ್ರಿಡ್ಜ್ ಕಂ ಬ್ಯಾರೇಜ್ ಅನ್ನು ನಿರ್ಮಿಸುವ ಪ್ರಸ್ತಾವನೆ ಇದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಗ್ರಾಮದ ಹತ್ತಿರ ಭದ್ರಾನದಿಯಿಂದ 0.19 ಟಿಎಂಸಿ ನೀರನ್ನು ಎತ್ತಿ ಕಂಬದಾಳ್ ಹೊಸೂರು ಮತ್ತು ಸುತ್ತಮುತ್ತಲಿನ ಗ್ರಾಮದ 22 ಕೆರೆಗಳಿಗೆ ನೀರು ತುಂಬಿಸುವ 54 ಕೋಟಿ ರೂ.ಗಳು ಯೋಜನೆ, ಭದ್ರಾವತಿ ಪಟ್ಟಣದ ಭದ್ರಾ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನು ತಡೆಯಲು 50 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ, ಭದ್ರಾನದಿಗೆ ಅಡ್ಡಲಾಗಿ ರಸ್ತೆ, ಸೇತುವೆ ನಿರ್ಮಾಣ, ದೊಣಬಘಟ್ಟ, ಕಾಗೆಕೊಡಮಗ್ಗೆ, ಹೊಳೆಹೊನ್ನೂರು ಗ್ರಾಮದ ಭದ್ರಾವತಿ ಮುಖ್ಯ ರಸ್ತೆಗೆ ಸಂಪರ್ಕ ಸುಧಾರಣೆ ಕಾಮಗಾರಿಯನ್ನು 35 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಸೊರಬ ತಾಲ್ಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ ಬ್ಯಾರೇಜ್ ನಿರ್ಮಿಸಿ 15 ಕೆರೆಗಳನ್ನು ತುಂಬಿಸುವ 38.50 ಕೋಟಿ ರೂ. ವೆಚ್ಚದ ಯೋಜನೆ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ 54.70 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣದ ಕುರಿತು, ಸೊರಬ ತಾಲ್ಲೂಕಿನ ಗುಡವಿ ಗ್ರಾಮದ ಬಳಿ ವರದಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ 32 ಕೆರೆಗಳನ್ನು ತುಂಬಿಸುವ 75.60 ಕೋಟಿ ರೂ. ವೆಚ್ಚದ ಚರ್ಚೆಗಳು ನಡೆದಿವೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಬಳಿ ತುಂಗಾಭದ್ರಾ ನದಿಯಿಂದ ನೀರನ್ನೆತ್ತಿ ಚನ್ನಗಿರಿ ತಾಲ್ಲೂಕಿನ ಕೊಡತಕೆರೆ, ಮಾವಿನಹೊಳೆಕೆರೆ ಸುತ್ತಮುತ್ತಲಿನ 41 ಕೆರೆಗಳನ್ನು ತುಂಬಿಸುವ 365 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೊಹಳ್ಳಿ ತಾಲ್ಲೂಕಿನ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ವಾಹನ ಕಾಂಪೋನೆಂಟ್‌ಗಳ ತಯಾರಿಕೆ ಜೋಡಣೆ, ಬ್ಯಾಟರಿಪ್ಯಾಕ್ ಜೋಡಣೆ, ಚಾರ್ಜಿಂಗ್ ಮೂಲ ಸೌಕರ್ಯ ಮತ್ತು ಪರೀಕ್ಷಾ ಪ್ರಯೋಗಲಾಯಕ್ಕೆ ಪ್ಲಗ್ ಆಂಡ್ ಪ್ಲೇ ಸೌಲಭ್ಯ ಕಲ್ಪಿಸಲು 25 ಕೋಟಿ ರೂ. ವೆಚ್ಚದ ಯೋಜನೆ ಬಗ್ಗೆ ಚರ್ಚೆಯಾಗಿದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ನೋಂದಾಯಿತ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ 31 ವಸತಿ ಶಾಲೆಗಳನ್ನು 1125.25 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲು ಚರ್ಚೆಯಾಗಿದೆ.
ಹಿರಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಸೇವೆಯ ಕುರಿತು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ ತಿದ್ದುಪಡಿಯ ಬಗ್ಗೆ ವಿಸ್ತ್ರತ ಸಮಾಲೋಚನೆಯಾಗಿದೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲ ಪುರಸಭೆ, ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ಪುರಸಭೆಗಳನ್ನು ನಗರಸಭೆಗಳನ್ನಾಗಿ ಕೊಪ್ಪಳ ಜಿಲ್ಲೆ ಹನುಮಸಾಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳಾಗಿವೆ.