ಬೆಂಗಳೂರು,ನ.17- ವಿಧಾನಸಭೆಯಲ್ಲಿ ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‍ಗೆ ಅಧಿಕಾರದ ಅಮಲು ನೆತ್ತಿಗೇರಿದೆ. ಜನತೆ ಶೀಘ್ರದಲ್ಲೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ವರ್ಗಾವಣೆಯ ದಂಧೆ ನಡೆಯುತ್ತಲೇ ಇದೆ ಎಂದು ನಾವು ಹೇಳಿದ್ದೆವು. ಈಗ ಅವರ ಪಕ್ಷದವರೇ ನಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಪ್ರಶ್ನೆ ಮಾಡಿದರು.
ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ದರ್ಪ, ದುರಹಂಕಾರ, ಮ್ಮಾಕು ಬಹಳ ದಿನ ನಡೆಯುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ನಿಮಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ಕೊಟ್ಟರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯ ವೇಳೆ ಪತ್ತೆಯಾದ ಹಣದ ಮೂಲ ಯಾರಿಗೆ ಸೇರಿದ್ದು ಎಂಬುದನ್ನು ಕಾಂಗ್ರೆಸ್ ನಾಯಕರು ಹೇಳಲು ಸಿದ್ದರಿದ್ದೀರಾ? ಐಟಿ ದಾಳಿಯಾದಾಗ ಮುಖ್ಯಮಂತ್ರಿ ಡಿಸಿಎಂ ಸೇರಿದಂತೆ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡಿದರು ಎಂದು ಕಿಡಿಕಾರಿದರು.
ಕಾಶ್ಮೀರ ಕಣಿವೆಯಲ್ಲಿ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ
ಕಡೆಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಐಟಿ ದಾಳಿಯನ್ನು ಸ್ವಾಗತಿಸಬೇಕು. ಬದಲಿಗೆ ದಾಳಿ ನಡೆದಿದ್ದು ತಪ್ಪು ಎಂಬ ರೀತಿಯಲ್ಲಿ ಮಾತನಾಡಿದರು ಎಂದು ಕಿಡಿಕಾರಿದರು.
ಸ್ಪೀಕರ್ ಸ್ಥಾನದ ಬಗ್ಗೆ ಲಘುವಾಗಿ ಸಚಿವ ಜಮೀರ್ ಅಹಮ್ಮದ್ ನೀಡಿರುವ ಹೇಳಿಕೆ ಅತ್ಯಂತ ದುರದೃಷ್ಟಕರ. ಸ್ಪೀಕರ್ ಸ್ಥಾನದ ಬಗ್ಗೆಯೇ ಗೌರವವಿಲ್ಲ ಎಂದರೆ ಹೇಗೆ ಎಂದು ವಿಜಯೇಂದ್ರ ಪ್ರಶ್ನೆ ಮಾಡಿದರು.
ಜಮೀರ್ ತಮ್ಮ ಮನದಲ್ಲಿರುವ ಇಂಗಿತವನ್ನೇ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಇತ್ತೀಚೆಗೆ ಅವರಿಗೆ ವಿವಾದ ಎಳೆದುಕೊಳ್ಳುವುದು ಕಾಯಕವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಮಧ್ಯಪ್ರವೇಶಿಸಿ ಜಮೀರ್‍ಗೆ ಬಾಯಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.