Thursday, July 3, 2025
Homeರಾಜ್ಯಐದು ವರ್ಷ ನಾನೇ ಸಿಎಂ ಇದರಲ್ಲಿ ಯಾವುದೇ ಅನುಮಾನ ಬೇಡ : ಸಿದ್ದರಾಮಯ್ಯ

ಐದು ವರ್ಷ ನಾನೇ ಸಿಎಂ ಇದರಲ್ಲಿ ಯಾವುದೇ ಅನುಮಾನ ಬೇಡ : ಸಿದ್ದರಾಮಯ್ಯ

I will be the CM for five years, there is no doubt about it: Siddaramaiah

ಚಿಕ್ಕಬಳ್ಳಾಪುರ,ಜು.2– ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇ ಮುಖ್ಯಮಂತ್ರಿ ಯಾಗಿರುವುದರಲ್ಲಿ ಯಾವುದೇ ಅನುಮಾನ ಇಲ್ಲ, ಬಿಜೆಪಿಯವರು ನಮ ಹೈಕಮಾಂಡ್‌ ಅಲ್ಲ, ಹೀಗಾಗಿ ನಮ ಪಕ್ಷದ ವಿಚಾರಗಳ ಬಗ್ಗೆ ಅವರು ಚರ್ಚಿಸುವ ಅಗತ್ಯವಿಲ್ಲ.

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿಯವರು ನಮ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದರು. ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದ ಬಿಜೆಪಿಯವರು ಈಗ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನಮ ಸರ್ಕಾರ 5 ವರ್ಷಗಳ ಕಾಲ ಬಂಡೆಯಂತಿರುತ್ತದೆ ಎಂದು ಹೇಳಿದರು.

ನಾನು ಮತ್ತು ಡಿಕೆಶಿ ಒಗ್ಗಟ್ಟು ಪ್ರದರ್ಶಿಸಿರುವುದನ್ನು ಬಿಜೆಪಿಯವರು ಮತ್ತು ಮಾಧ್ಯಮದವರು ನಂಬುವುದಿಲ್ಲ. ಬಿಜೆಪಿಯವರಿಗೆ ಸತ್ಯ ಹೇಳುವುದು ಗೊತ್ತಿಲ್ಲ. ಬರೀ ಸುಳ್ಳು ಹೇಳುವುದೇ ಅವರ ಕೆಲಸ. ಅವರು ನಂಬುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ನಾವಂತೂ ಒಟ್ಟಾಗಿದ್ದೇವೆ. ಕಲ್ಲುಬಂಡೆಯಂತಹ ಗಟ್ಟಿ ಸರ್ಕಾರ ನೀಡುತ್ತೇವೆ ಎಂದರು.

ನಮ ಡಿ.ಕೆ.ಶಿವಕುಮಾರ್‌ ಯಾವಾಗಲೂ ಸಾಕ್ಷಿಗುಡ್ಡೆ ಕೊಡಿ ಎಂದು ಹೇಳುತ್ತಿರುತ್ತಾರೆ. ಬಿಜೆಪಿಯವರು ಆ ರೀತಿಯ ಯಾವ ಸಾಕ್ಷಿಗುಡ್ಡೆ ಬಿಟ್ಟುಹೋಗಿದ್ದಾರೆ. ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ ಯಾವ ಇಲಾಖೆಯಲ್ಲಿ ಅವರು ಅಭಿವೃದ್ಧಿ ಮಾಡಿದ್ದಾರೆ. ಕುಮಾರಸ್ವಾಮಿಯ ಒಂದು ವರ್ಷ, ಎರಡು ತಿಂಗಳು ಸಮಿಶ್ರ ಸರ್ಕಾರ ಅವಧಿ ಬಿಟ್ಟು ಉಳಿದ ನಾಲ್ಕು ವರ್ಷಗಳಲ್ಲಿ ಬಿಜೆಪಿಯವರು ಯಾವ ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ನಾವು ಎರಡನೇ ವರ್ಷದ ಸಾಧನಾ ಸಮಾವೇಶವನ್ನು ಹೊಸಪೇಟೆಯಲ್ಲಿ ಮಾಡಿದಾಗ ಸುಮಾರು 3 ಲಕ್ಷ ಜನ ಭಾಗವಹಿಸಿದ್ದರು. ಮಳೆಯಿದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸರ್ಕಾರದ ಸಾಧನೆ ಇಲ್ಲದೆ ಅಷ್ಟೂ ಜನ ಬರುತ್ತಾರೆಯೇ ಎಂದರು.ಸಚಿವರಾಗಲು ಎಲ್ಲರಿಗೂ ಆಸೆಗಳಿರುತ್ತವೆ. ಆದರೆ ಶಾಸಕರ ಸಂಖ್ಯಾಬಲದಲ್ಲಿ ಶೇ.15 ರಷ್ಟು ಮಂದಿಯನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯ. ಅದರಲ್ಲಿ 34 ಜನರಿಗೆ ಅವಕಾಶ ಸಿಗುತ್ತದೆ ಎಂದರು.
ಕಾಂಗ್ರೆಸ್‌‍ ಪಕ್ಷದಲ್ಲಿ 142 ಮಂದಿ ಶಾಸಕರ ಬೆಂಬಲ ಇದೆ. ಆದರೂ ಸರ್ಕಾರ ಪತನಗೊಳ್ಳುತ್ತದೆ ಎಂಬುದು ಬಿಜೆಪಿಯವರ ಹಗಲುಗನಸು. ಈ ವಿಚಾರವಾಗಿ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದರು.

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಸಂಬಂಧಪಟ್ಟಂತೆ ನಡೆಯುತ್ತಿರುವ ನ್ಯಾ.ನಾಗಮೋಹನದಾಸ್‌‍ ಸಮಿತಿ ಸಮೀಕ್ಷೆಯ ಅಪಸ್ವರಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಮೊದಲು ಸಮೀಕ್ಷೆದಾರರು ಮನೆಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಜಾತಿಯನ್ನು ಹೇಳದೇ ಇರುವವರಿಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸಮೀಕ್ಷೆ ನಡೆದಿರುವ ಮನೆಗಳ ಮೇಲೆ ಚೀಟಿ ಅಂಟಿಸಲಾಗಿದೆ ಎಂದರು.

ರಾಜ್ಯಸಚಿವ ಸಂಪುಟದ ಸಭೆಗಳನ್ನು ಬೇರೆಬೇರೆ ಭಾಗಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಲಬುರಗಿ, ಮೈಸೂರು ಹಾಗೂ ಬೆಂಗಳೂರು ವಿಭಾಗಗಳಲ್ಲಿ ಬೇರೆಬೇರೆ ಸ್ಥಳಗಳಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಬೆಳಗಾವಿ ವಿಭಾಗದ ವಿಜಯಪುರದಲ್ಲಿ ಸಚಿವ ಸಂಪುಟ ನಡೆಸಬೇಕೆಂಬ ಸಲಹೆ ಇದೆ. ಅದನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

ನಂದಿಬೆಟ್ಟದಲ್ಲಿ ಬೆಂಗಳೂರು ಕಂದಾಯ ವಿಭಾಗದ ಜಿಲ್ಲೆಗಳ ಅಭಿವೃದ್ಧಿ ಕುರಿತು ಚರ್ಚಿಸಲಾಗುತ್ತದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಕಾರ್ಯಕ್ರಮಗಳ ಬಗ್ಗೆ ಇಲ್ಲಿ ಚರ್ಚಿಸಲಾಗುತ್ತದೆ. ಜಿಲ್ಲೆಯ ಸಣ್ಣಪುಟ್ಟ ಕೆಲಸಗಳಿಗೂ ಅನುಮೋದನೆ ನೀಡಲಾಗುವುದು ಎಂದರು.

RELATED ARTICLES

Latest News