ಚಿಕ್ಕಬಳ್ಳಾಪುರ,ಜು.2– ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದೂ ಸೇರಿದಂತೆ ಸುಮಾರು 33 ಕ್ಕೂ ಹೆಚ್ಚು ಮಹತ್ವದ ವಿಚಾರಗಳನ್ನು ನಂದಿಬೆಟ್ಟದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಂದಿಗಿರಿಧಾಮದ ಮಯೂರ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಎಲ್ಲಾ ಸಚಿವರೂ ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜೊತೆಗೆ ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಕೊಪ್ಪಳ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಾಗಿದೆ.
ಈಗಾಗಲೇ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಮುಂದುವರೆದ ಭಾಗವಾಗಿ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ,
ಹೊಸಕೋಟೆ ತಾಲ್ಲೂಕುಗಳನ್ನೊಳಗೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಪ್ರಸ್ತಾವ ಚರ್ಚೆಯಾಗಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಭಾಗ್ಯನಗರ ಎಂದು ಹೆಸರಿಡಬೇಕು ಎಂದು ಹಲವು ದಿನಗಳಿಂದ ಸ್ಥಳೀಯ ಪ್ರತಿನಿಧಿಗಳು ಒತ್ತಾಯಿಸಿದ್ದರು. ಅದರ ಬಗ್ಗೆಯೂ ಸಂಪುಟದಲ್ಲಿ ಪ್ರಸ್ತಾವನೆಯಾಗಿದೆ.
ಬೆಂಗಳೂರಿನ ಕಲಾಸಿಪಾಳ್ಯ ಬಿಎಂಟಿಸಿ ಬಸ್‌ನಿಲ್ದಾಣಕ್ಕೆ ಜನೋಪಕಾರಿ ಶ್ರೀ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗುತ್ತಿದೆ.ಹೊಸದಾಗಿ ಘೋಷಿಸಲಾದ ಚಿಕ್ಕಬಳ್ಳಾಪುರದ ಚೇಳೂರು, ಧಾರವಾಡದ ಅಣ್ಣಿಗೆರಿ, ಅಳ್ನಾವರ, ಉಡುಪಿಯ ಕಾಪು, ವಿಜಯಪುರದ ಬಬಲೇಶ್ವರ, ಕೋಲಾರ, ಬಾಗಲಕೋಟೆಯ ತೇರದಾಳ, ಕೊಡಗಿನ ಪೊನ್ನಂಪೇಟೆಯ ಹುದಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 46 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಸಮಾಲೋಚನೆ ನಡೆದಿದೆ.
ಕೋಲಾರ ತಾಲ್ಲೂಕಿನ ಬಾಲಕರ ಸರ್ಕಾರಿ ಕಾಲೇಜಿಗೆ 40 ಕೋಟಿ ರೂ., ಬಾಲಕಿಯರ ಕಾಲೇಜಿಗೆ 20 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ಶಿಡ್ಲಘಟ್ಟ ತಾಲ್ಲೂಕು ಅಮರಾವತಿ ಗ್ರಾಮದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಅನ್ನು 2ನೇ ಹಂತದಲ್ಲಿ ಅಭಿವೃದ್ಧಿಪಡಿಸಲು 123 ಕೋಟಿ ರೂ. ಅಂದಾಜು ವೆಚ್ಚದ ಬಗ್ಗೆ ಚರ್ಚೆ ನಡೆದಿದೆ.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಹೂವುಗಳನ್ನು ಬೆಳೆಯುತ್ತಿದ್ದು, ಅದರ ಮಾರುಕಟ್ಟೆ ಸಲುವಾಗಿ ಅಂತಾರಾಷ್ಟ್ರೀಯ ಪುಷ್ಪ ಹರಾಜು ಸಂಸ್ಥೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಆಲೋಚನೆಯಿದೆ.ಚಿಂತಾಮಣಿ ತಾಲ್ಲೂಕಿನ ಭಕ್ತರಹಳ್ಳಿಯ ಅರಸೀಕೆರೆ ಕೆಳಭಾಗದಲ್ಲಿ ಹೊಸ ಕೆರೆಯನ್ನು 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವನೆ ಇದೆ.
ಬೆಂಗಳೂರು ನಗರದ ಹೆಬ್ಬಾಳ, ನಾಗವಾರ ಕಣಿವೆಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಶಿಡ್ಲಘಟ್ಟ ಅಮಾನೀಕೆರೆಯಿಂದ 45 ಕೆರೆಗಳಿಗೆ ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ತುಂಬಿಸುವ 237 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.
ಪ್ರಮುಖವಾಗಿ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆಯ ನವೀಕರಣ ಹಾಗೂ ಸಮಗ್ರ ಅಭಿವೃದ್ಧಿಗೆ 103 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆ ತಯಾರಾಗಿದ್ದು, ಬಹುತೇಕ ಅನುಮೋದನೆ ದೊರೆಯುವ ನಿರೀಕ್ಷೆಗಳಿವೆ.ಬಿಇಎಂಎಲ್ ಸಂಸ್ಥೆಯ ಸ್ವತ್ತುಗಳನ್ನು ಹೊಸದಾಗಿ ಸೃಷ್ಟಿಸಲಾಗಿರುವ ಬಿಇಎಂಎಲ್ ಲ್ಯಾಂಡ್ ಅಸೆಟ್‌್ಸ ಲಿಮಿಟೆಡ್ ಕಂಪನಿಗೆ ವರ್ಗಾಯಿಸುವ ಕುರಿತು ಮುದ್ರಾಂಕ ಶುಲ್ಕದಲ್ಲಿ ಪೂರ್ಣ ವಿನಾಯಿತಿ ನೀಡಲು ಚರ್ಚಿಸಲಾಗಿದೆ.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಿಲ್ಲಾ ಕುರುಬರ ಸಂಘದ ವಿದ್ಯಾರ್ಥಿ ನಿಲಯಕ್ಕೆ ಉಚಿತ ನಿವೇಶನ ಮಂಜೂರು, 100×100 ಅಡಿ ನಾಗರಿಕ ಸೌಲಭ್ಯ ನಿವೇಶವನ್ನು ಗಾಂಧಿ ಭವನ ನಿರ್ಮಿಸಲು ಉಚಿತವಾಗಿ ಮಂಜೂರು ಮಾಡುವ ಚರ್ಚೆಯಾಗಿದೆ. ಚಿಕ್ಕಬಳ್ಳಾಪುರ ನಂದಿ ವೈದ್ಯಕೀಯ ಕಾಲೇಜು ಹಾಗೂ ಹುಬ್ಬಳ್ಳಿ-ಕರ್ನಾಟಕ ವೈದ್ಯಕೀಯ ಕಾಲೇಜುಗಳಿಗೆ 25 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಎಂಆರ್‌ಐ ಯಂತ್ರಗಳನ್ನು ಒದಗಿಸುವ ಪ್ರಸ್ತಾವನೆ ಇದೆ.