ಬೆಂಗಳೂರು, ಜೂ.2- ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರ ಅಮಾನತು ಆದೇಶ ರದ್ದುಪಡಿಸಿರುವ ಕೇಂದ್ರೀಯ ಆಡಳಿತ ನ್ಯಾಯಾಧೀಕರಣ (ಸಿಎಟಿ)ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲನವಿ ಸಲ್ಲಿಸಿದೆ.
ಇಂದೇ ಅರ್ಜಿ ಶೀಘ್ರದಲ್ಲಿ ವಿಚಾರಣೆ ನಡೆಸಬೇಕು ಎಂದು ಕೋರಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠಕ್ಕೆ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ನಾಳೆ (ಗುರುವಾರ) ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಒಂದು ಹಂತದಲ್ಲಿ ಇಂದೇ ವಿಚಾರಣೆಯಾಗಬೇಕೆಂಬ ತರಾತುರಿ ಯಾಕೆ ಎಂದು ನ್ಯಾಯಮೂರ್ತಿಗಳು ಪ್ರಶ್ನೆ ಮಾಡಿದರು.
ಇದಕ್ಕೆ ಉತ್ತರಿಸಿದ ಎಜಿ ಶಶಿಕಿರಣ್ ಶೆಟ್ಟಿ, ಸಿಎಟಿ ಆದೇಶದ ಕಾರಣ ಅಧಿಕಾರ ವಹಿಸಿಕೊಳ್ಳಲು ಅಧಿಕಾರಿ ಮುಂದಾಗಿದ್ದಾರೆ. ಹೀಗಾಗಿ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಕೊನೆಯದಾಗಿ, ಗುರುವಾರ ವಿಚಾರಣೆ ನಡೆಸಲಾಗುವುದು ಎಂದು ವಿಭಾಗೀಯ ಪೀಠ ತಿಳಿಸಿತು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದ ಸರ್ಕಾರ, ಆಗಿನ ಪೊಲೀಸ್ ಆಯಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಸೇರಿದಂತೆ ಹಲವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ವಿಕಾಸ್ ಕುಮಾರ್ ಕೇಂದ್ರ ಆಡಳಿತಾತಕ ನ್ಯಾಯಮಂಡಳಿ ಮೊರೆ ಹೋಗಿದ್ದರು.
ವಿಕಾಸ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೇಂದ್ರ ಆಡಳಿತಾತಕ ನ್ಯಾಯಮಂಡಳಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ವಿವರಣೆ ಕೋರಿತ್ತು. ನಂತರ, ನ್ಯಾಯಮೂರ್ತಿ ಬಿ.ಕೆ.ಶ್ರೀವಾತ್ಸವ್ ಮತ್ತು ಸಂತೋಷ್ ಮೆಹ್ರಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತ್ತು. ಮಂಗಳವಾರ ತೀರ್ಪು ಪ್ರಕಟಿಸಿ, ಕರ್ನಾಟಕ ಸರ್ಕರದ ನಿರ್ಧಾರವನ್ನು ರದ್ದುಪಡಿಸಿ ಆದೇಶ ನೀಡಿತ್ತು. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿತ್ತು. ಹೀಗಾಗಿ ಇದೀಗ ಸಿಎಟಿ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
2025ರ ಜೂನ್ 4ರಂದು ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ್ದರು. ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ತಿಳಿಸಿದ್ದ ಸರ್ಕಾರ, ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ, ಅರ್ಜಿದಾರ ಅಧಿಕಾರಿ ವಿಕಾಸ್ ಕುಮಾರ್ ಮತ್ತಿತರರನ್ನು ಅಮಾನತು ಮಾಡಿ ಆದೇಶಿಸಿತ್ತು. ಇದನ್ನು ವಿಕಾಸ್ ಕುಮಾರ್ ಸಿಎಟಿಗೆ ಪ್ರಶ್ನಿಸಿದ್ದರು.
ಘಟನೆಗೆ ಕಾರಣರಾದ ಅಧಿಕಾರಿಗಳನ್ನು ನಿರ್ಲಕ್ಷ್ಯದ ಆರೋಪದಲ್ಲಿ ಅಮಾನತು ಮಾಡಿರುವ ಆದೇಶಕ್ಕೆ ಸೂಕ್ತ ಪುರಾವೆಗಳಿಲ್ಲ. ಜೊತೆಗೆ, ಜನರನ್ನು ನಿಯಂತ್ರಣ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸಮಯವಿತ್ತು ಎಂಬುದನ್ನು ತೋರಿಸುವುದಕ್ಕೂ ಸಾಕ್ಷ್ಯಾಧಾರಗಳಿಲ್ಲ. ವಿಜಯೋತ್ಸವ ಆಚರಣೆಗೆ ಸಂಘಟನೆಕಾರರಾದ ಸೂಕ್ತ ಮನವಿ ಸಲ್ಲಿಸದ ಪರಿಣಾಮ ಪೊಲೀಸರು ಅನುಮತಿಯನ್ನೂ ನೀಡಿರಲಿಲ್ಲ. ಅಲ್ಲದೆ, ಘಟನೆಗೆ ಕಾರಣ ಪತ್ತೆಗೆ ರಚನೆ ಮಾಡಿರುವ ಆಯೋಗ ಈವರೆಗೂ ವರದಿ ನೀಡಿಲ್ಲ ಎಂದು ಸಿಎಟಿ ತಿಳಿಸಿತ್ತು.
ಪೊಲೀಸ್ ಸಿಬ್ಬಂದಿಯೂ ಕೂಡ ಮನುಷ್ಯರೇ ಆಗಿದ್ದಾರೆ. ಅವರು ಮಾತ್ರಿಕರಲ್ಲ, ದೇವರೂ ಅಲ್ಲ, ಅಷ್ಟು ಜನದಟ್ಟಣೆ ನಿಯಂತ್ರಿಸಲು ಪೊಲೀಸರ ಬಳಿ ಅಲ್ಲಾದ್ದೀನ್ ದೀಪದಂತಹ ಮಾಂತ್ರಿಕ ದೀಪವಿರಲಿಲ್ಲ. ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಪೊಲೀಸರಿಗೆ ಸಮಯ ನೀಡಬೇಕಿತ್ತು ಎಂದು ತಿಳಿಸಿ ಸರ್ಕಾರದ ಆದೇಶವನ್ನು ಸಿಎಟಿ ರದ್ದುಪಡಿಸಿ ಆದೇಶಿಸಿತ್ತು. ಇದೀಗ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.