ಚಿಕ್ಕಬಳ್ಳಾಪುರ,ಜು.2– ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ನಂದಿಬೆಟ್ಟದಲ್ಲಿಂದು ರಾಜವೈಭೋಗ ವಾತಾವರಣ ನಿರ್ಮಾಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟದ ಸಚಿವರು ಬೆಳಿಗ್ಗೆ ಕಾರಿನಲ್ಲಿ ನಂದಿಬೆಟ್ಟ ತಲುಪಿದರು. ಅಲ್ಲಿ ಬೋಗನಂದೀಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಇದೇ ವೇಳೆ ದೇವಸ್ಥಾನದ ಬಳಿ ಇದ್ದ ಕಲ್ಯಾಣಿಯನ್ನು ಮುಖ್ಯಮಂತ್ರಿ ಹಾಗೂ ಸಚಿವರು ವೀಕ್ಷಿಸಿದರು. ನಂದಿಬೆಟ್ಟದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಸಂಪುಟದ ಎಲ್ಲಾ ಸಚಿವರು ದೇವಸ್ಥಾನದ ಪ್ರಾಂಗಣದಲ್ಲಿ ಸಮೂಹ ಭಾವಚಿತ್ರಕ್ಕೆ ಪೋಸ್ ನೀಡಿದರು. ದೇವಸ್ಥಾನದಿಂದ ಬಸ್‌ನಲ್ಲಿ ಮಯೂರ ಸಭಾಂಗಣಕ್ಕೆ ತೆರಳಿ ಸಚಿವ ಸಂಪುಟದಲ್ಲಿ ಪಾಲ್ಗೊಂಡರು.
ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ಆಗಮಿಸುವ ಹಿನ್ನೆಲೆಯಲ್ಲಿ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೂವರು ಎಸ್ಪಿಗಳು ಹಾಗೂ ಹಲವು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಆಯೋಜಿಸಲಾಗಿತ್ತು.



















ಸಚಿವರು, ಮುಖ್ಯಮಂತ್ರಿಯವರ ಸಂಚಾರದ ವೇಳೆ ಸಾರ್ವಜನಿಕರ ವಾಹನಗಳ ಬದಲಿ ಮಾರ್ಗಕ್ಕೆ ತಿರುಗಿಸಲಾಯಿತು. ನಂದಿಬೆಟ್ಟಕ್ಕೆ ಭೇಟಿ ನೀಡಲೇಬೆಕು ಎಂಬುವವರಿಗೆ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಮಯೂರ ಸಭಾಂಗಣದಲ್ಲಿ ಸಂಪುಟ ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ಭದ್ರತಾ ಸಿಬ್ಬಂದಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ.ನಂದಿಬೆಟ್ಟದ ಹಾದಿಯುದ್ದಕ್ಕೂ ಪುಷ್ಪಾಲಂಕಾರಗಳು, ಸ್ವಾಗತ ಕಮಾನುಗಳು ರಂಗನ್ನು ಹೆಚ್ಚಿಸಿತ್ತು. ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನಡೆಯುತ್ತಿರುವ ಸಂಪುಟ ಸಭೆಗೆ ಬಿಗಿ ಕಾವಲು ಉಸಿರುಗಟ್ಟಿಸುವಂತಿತ್ತು.