ಬೆಂಗಳೂರು,ಜು.2- ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನೇತೃತ್ವವನ್ನು ಪಾಕಿಸ್ತಾನ ನಿರ್ವಹಿಸುವುದಕ್ಕೆ ಗದ್ದುಗೆಯ ಮೇಲೆ ಭೂತ ಕುಳಿತಂತೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ರಾಜತಾಂತ್ರಿಕ ವೈಫಲ್ಯದಿಂದಾಗಿ ಜಾಗತಿಕ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಮುಂಚೂಣಿಗೆ ಬರುವಂತೆ ಆಗಿದೆ ಎಂದು ಕಿಡಿಕಾರಿದ್ದಾರೆ.
ವಿಶ್ವ ಸಮುದಾಯದಲ್ಲಿ ಫೋಟೊಗೆ ಪೋಸ್ ಕೊಟ್ಟು ವಿದೇಶಿ ಪ್ರವಾಸ ಮಾಡುವುದರಿಂದ ವಿಶ್ವಗುರು ಎಂಬ ಸ್ವಯಂ ಘೋಷಣೆಯಿಂದ ಜಾಗತಿಕವಾಗಿ ಪ್ರಭಾವಶಾಲಿಯಾಗಲು ಸಾಧ್ಯವಿಲ್ಲ. ನೆರೆಹೊರೆ ಮೊದಲು ಎಂಬ ಮೋದಿಯವರ ವಿದೇಶಾಂಗ ನೀತಿ ಕುಸಿದು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ದಾಳಿ ಮತ್ತು ಸಿಂಧೂರ್ ಕಾರ್ಯಾಚರಣೆಯ ನಡುವೆಯೇ ಜಾಗತಿಕ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನ ಮುಂಚೂಣಿ ಅವಕಾಶ ಗಿಟ್ಟಿಸಿದೆ. ಜಾಗತಿಕ ಭಯೋತ್ಪಾದಕರಾದ ಒಸಾಮ ಬಿನ್ ಲಾಡೆನ್, ಅಬ್ದುಲ್ ರವೂಫ್, ಮೌಲಾನ್ ಮಜೂದ್ ಅಜರ್, ಅಫೀಜ್ ಸಯ್ಯದ್, ದಾವುದ್ ಇಬ್ರಾಹಿಂ ಅವರಿಗೆ ಆಶ್ರಯ ನೀಡಲಾಗಿದೆ. ಜೈಶ್-ಎ ಮೊಹಮದ್ (ಜೆಇಎಂ) ಜಮಾತ್-ಉಲ್-ದವಾ (ಜೆಯುಡಿ), ತೆಹ್ರೀಕ್ -ಎ -ಆಜಾದಿ ಜಮು ಮತ್ತು ಕಾಶೀರ (ಟಿಎಜೆಕೆ), ಹಿಜ್‌್ಬ-ಉಲ್-ಮುಜಾಹಿದ್ದೀನ್ (ಎಚ್‌ಎಂ), ಹರ್ಕತ್-ಉಲ್-ಮುಜಾಹಿದ್ದೀನ್(ಎಚ್‌ಯುಎ), ಲಷ್ಕರ್-ಎ-ತೈಬಾ (ಎಲ್‌ಟಿಟಿ), ಜಮು ಮತ್ತು ಕಾಶೀರ ವಿಮೋಚನಾ ಸೇನೆ, ಕಾಶೀರ ಜಿಹಾದ್ ಪಡೆ, ಅಲ್ ಜೆಹಾದ್ ಪಡೆ, ಜಮು ಮತ್ತು ಕಾಶೀರ ವಿದ್ಯಾರ್ಥಿ ವಿಮೋಚನಾ ರಂಗ, ತೆಹ್ರೀಕ್-ಎ-ಹುರಿಯತ್-ಎ-ಕಾಶೀರ್ ಸೇರಿದಂತೆ ಹಲವು ಭಾರತೀಯ ವಿರೋಧಿ ಸಂಘಟನೆಗಳಿಗೆ ನೆರೆ ಒದಗಿಸಿದೆ.
ಪಾಕಿಸ್ತಾನದಲ್ಲಿ ಮಸ್ಕರ್-ಎ-ಅಕ್ಸಾ, ಚೆಲಾಬಂಡಿ, ಅಬ್ದುಲ್ಲಾ ಬಿನ್ ಮಸೂದ್, ದುಲೈ, ಗಹಿರ್, ಹಬೀಬುಲ್ಲಾ, ಬಟ್ರಾಸಿ, ಬಾಲಕೋಟ್, ಬೋಯಿ, ಸೆನ್ಸಾ, ಗುಲ್ಪುರ್, ಬರಾಲಿ, ಡುಂಗಿ, ಮೆಹಮೂನಾ ಜೋಯಾ, ಸರ್ಜಲ್ ಮತ್ತು ಇತರ ಸ್ಥಳಗಳಲ್ಲಿ 21 ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಿದೆ. ಇದೆಲ್ಲದರ ನಡುವೆಯೂ ಈಗ ಜಾಗತಿಕ ಭದ್ರತಾ ಮಂಡಳಿಯ ಮುಂಚೂಣಿ ಸ್ಥಾನದಲ್ಲಿ ಪಾಕಿಸ್ತಾನ ಇದೆ.
ಜೂ.4 ರಂದು ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಕಾರ್ಯಪಡೆಯ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದೆ. ಪದೇಪದೇ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವುದು, ಭಾರತಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡುವುದನ್ನು ಪಾಕಿಸ್ತಾನ ಮುಂದುವರೆಸುತ್ತಲೇ ಇದೆ. ಇದೆಲ್ಲದವರ ನಡುವೆಯೂ ಭಾರತ ಜಾಗತಿಕವಾಗಿ ಪಾಕಿಸ್ತಾನದ ಪ್ರಭಾವವನ್ನು ತಡೆಯಲು ವಿಫಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ತಮ ವೈಯಕ್ತಿಕ ವರ್ಚಸ್ಸಿಗೆ ಒತ್ತು ನೀಡುತ್ತಿದ್ದಾರೆ ಎಂದು, ದೇಶದ ಹಿತಾಸಕ್ತಿ ಪಾಲನೆಯಾಗುತ್ತಿಲ್ಲ ಎಂದು ಸುರ್ಜೇವಾಲ ಕಿಡಿಕಾರಿದ್ದಾರೆ.