ಬೆಂಗಳೂರು,ಜು.3– ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮುಖ ಚಹರೆ ಗುರುತಿಸಿ ಹಾಜರಾತಿ ಪರಿಗಣಿಸುವ ಮತ್ತು ಅದರ ಮಾಹಿತಿಯನ್ನು ಏಕಕಾಲಕ್ಕೆ ಪೋಷಕರಿಗೆ ರವಾನಿಸುವ ತಂತ್ರಜ್ಞಾನವನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಗೊಳಿಸುವ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬ ಗಮನ ಸೆಳೆದಿದ್ದಾನೆ.
ಕೊಂಬೆಟ್ಟು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿರುವ ವಿ. ಅರುಣ್‌ಕುಮಾರ್, ಅಟಲ್ ಟಿಂಕರಿಂಗ್ ಹಾಗೂ ಐಟಿ ಜ್ಞಾನ ಬಳಸಿಕೊಂಡು ಹಾಜರಾತಿ ಉಪಕರಣವನ್ನು ತಯಾರಿಸುವುದಾಗಿ ತಿಳಿಸಲಾಗಿದೆ. ಕಾಲೇಜಿನ ಐಟಿ ವಿಭಾಗದ ಶಿಕ್ಷಕ ಅಶ್ಲೇಶ್ ಕುಮಾರ್ ಮಾರ್ಗದರ್ಶನದಲ್ಲಿ ಈ ಉಪಕರಣ ಸಿದ್ಧಗೊಂಡಿದ್ದು, ವಿದ್ಯಾರ್ಥಿಗಳ ಹಾಜರಾತಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮೂರು ತಿಂಗಳ ಕಾಲ ಅವಿರತ ಪರಿಶ್ರಮದ ಫಲವಾಗಿ ಈ ಉಪಕರಣ ಯಂತ್ರ ರೂಪುಗೊಂಡಿವೆ.
ಉಪಕರಣದ ವೈಶಿಷ್ಟ್ಯಗಳು:
ಈ ಉಪಕರಣದಲ್ಲಿ ಪ್ರತಿ ವಿದ್ಯಾರ್ಥಿಯ ಹೆಸರು, ಐದು ಭಾವಚಿತ್ರಗಳು, ಪೋಷಕರ ಮೊಬೈಲ್ ಸಂಖ್ಯೆ, ತರಗತಿ ಮತ್ತು ವಿಭಾಗದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ವಿದ್ಯಾರ್ಥಿಯು ಉಪಕರಣದ ವೆಬ್ ಕ್ಯಾಮೆರಾ ಮುಂದೆ ಬಂದಾಗ, ಅದು ವಿದ್ಯಾರ್ಥಿಯನ್ನು ಗುರುತಿಸಿ ಹಾಜರಾತಿ ದಾಖಲಿಸುತ್ತದೆ.
ಇದೇ ವೇಳೆ, ಪೋಷಕರ ಮೊಬೈಲ್‌ಗೆ ಟೆಲಿಗ್ರಾಮ್ ಆ್ಯಪ್ ಮೂಲಕ ಹಾಜರಾತಿಯ ಮಾಹಿತಿ ತಲುಪಿಸುತ್ತದೆ. ದಾಖಲಾದ ಹಾಜರಿಯನ್ನು ಎಕ್ಸೆಲ್ ಶೀಟ್‌ನಲ್ಲಿ ಸಂಗ್ರಹಿಸಿ, ಪ್ರತಿದಿನ ಬೆಳಗ್ಗೆ 11 ಗಂಟೆಗೆ ಮುಖ್ಯ ಶಿಕ್ಷಕರ ಮೊಬೈಲ್ ಸಂಖ್ಯೆಗೆ ಟೆಲಿಗ್ರಾಂ ಆ್ಯಪ್ ಮೂಲಕ ಪಿಡಿಎಫ್ ರೂಪದಲ್ಲಿ ರವಾನಿಸುತ್ತದೆ.
ಹಾಜರಾಗದ ವಿದ್ಯಾರ್ಥಿಗಳನ್ನು ಗೈರು ಎಂದು ನಮೂದಿಸಿ ಸಂದೇಶ ರವಾನಿಸುವ ಮೂಲಕ ಆ ದಿನದ ಹಾಜರಾತಿ ಕೊನೆಗೊಳ್ಳುತ್ತದೆ. 11 ಗಂಟೆಯ ನಂತರ ಹಾಜರಾತಿ ದಾಖಲಿಸುವ ಅವಕಾಶ ಇರುವುದಿಲ್ಲ.
ಅಳವಡಿಕೆಯಾಗಿರುವ ಉಪಕರಣಗಳು:
ರಾಸ್ಬೆರಿ ಮದರ್ ಬೋರ್ಡ್, ಎಲ್‌ಸಿಡಿ ನೇಮ್ ಡಿಸ್‌ಪ್ಲೇ, ವೆಬ್ ಕ್ಯಾಮರಾ, ಯುಎಸ್‌ಬಿ ಕನೆಕ್ಟರ್ಸ್, ಎಸ್‌ಡಿ ಕಾರ್ಡ್, ಚಾರ್ಜಿಂಗ್ ಅಡಾಪ್ಟರ್ ಅಗತ್ಯಯಿದೆ. ಸಂದೇಶ ರವಾನೆಗಾಗಿ ವೈ-ಫೈ ಸಂಪರ್ಕ ಅಗತ್ಯವಿರುತ್ತದೆ.
ಪ್ರಸ್ತುತ ತಯಾರಿಸಲಾಗಿರುವ ಉಪಕರಣ 500 ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕೇವಲ 1-2 ಸೆಕೆಂಡುಗಳಲ್ಲಿ ಪ್ರತಿ ವಿದ್ಯಾರ್ಥಿಯ ಹಾಜರಾತಿ ದಾಖಲಾಗುತ್ತದೆ. ಪ್ರಾಯೋಗಿಕ ಹಂತದ ಈ ಉಪಕರಣವನ್ನು ಸುಮಾರು 13,000 ವೆಚ್ಚದಲ್ಲಿ ಅರುಣ್ ತಯಾರಿಸಿದ್ದು, ಪೂರ್ಣಪ್ರಮಾಣದ ಉಪಕರಣ ಸಿದ್ಧಪಡಿಸಲು ತಯಾರಿಕಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಶಾಲಾ ಶಿಕ್ಷಣ ಮತ್ತು ಸಚಿವರ ಕಚೇರಿಯು ವಿದ್ಯಾರ್ಥಿನಿಯ ಈ ಸಾಧನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ.