ತುಮಕೂರು,ಜು.3- ಸೆಪ್ಟೆಂಬರ್ ರಾಜಕೀಯ ಕ್ರಾಂತಿಯ ಬಗ್ಗೆ ಹೇಳಿಕೆ ನೀಡಿ ವಿವಾದದ ಕಿಚ್ಚುಹಚ್ಚಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೂ ಶಿಸ್ತು ಉಲ್ಲಂಘನೆಯ ನೋಟಿಸ್ ನೀಡಬೇಕೆಂದು ಕಾಂಗ್ರೆಸ್ ಶಾಸಕರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕುಣಿಗಲ್ ಕ್ಷೇತ್ರದ ಶಾಸಕ ಎಚ್.ಡಿ. ರಂಗನಾಥ್ ಕಾಂಗ್ರೆಸ್, ಮಂತ್ರಿ ಅಥವಾ ಶಾಸಕರಿಂದ ಬೆಳೆದುಬಂದಿಲ್ಲ. ಕಾರ್ಯಕರ್ತರ ತ್ಯಾಗ, ಬಲಿದಾನಗಳಿಂದ ಈ ಹಂತಕ್ಕೆ ಬಂದಿದೆ. ಅದನ್ನು ಹಾಳು ಮಾಡುವ ಯಾರೇ ಆದರೂ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ನೀಡಿದ್ದಾರೆ. ಅವರಿಗೆ ನೋಟೀಸ್ ನೀಡಲಾಗಿದೆ. ಅದೇ ರೀತಿ ಸಚಿವರು ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ.
ಪಕ್ಷದಲ್ಲಿ ಒಬ್ಬರಿಗೆ ಒಂದು, ಮತ್ತೊಬ್ಬರಿಗೆ ಇನ್ನೊಂದು ನ್ಯಾಯ ಮಾಡಲು ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಅಭಿಲಾಷೆ ನನಗೂ ಇದೆ. ಹೋರಾಟ ಮನೋಭಾವದ ನಮ ಕುಟುಂಬದವರಿಗೆ ಅವಕಾಶ ಸಿಗಬೇಕು. ಈ ಬಗ್ಗೆ ನಮ ಮನದಾಳವನ್ನು ಹೇಳಿಕೊಳ್ಳಲು ಸಮಯಾವಕಾಶ ನೀಡಿ ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಲ್ಲಿ ಮನವಿ ಮಾಡಿದ್ದೇನೆ. ಬಹುಶಃ ಸೋಮವಾರ ಭೇಟಿಗೆ ಸಮಯ ಸಿಗಬಹುದು.
ಅಲ್ಲಿ ಚರ್ಚೆ ಮಾಡುತ್ತೇನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಗಲಿದೆ ಎಂದು ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವಾರು ಮಂದಿ ಹೇಳುತ್ತಿದ್ದಾರೆ. ಇದೇ ರೀತಿ ಎರಡೂವರೆ ವರ್ಷದ ಬಳಿಕ ಆಧಿಕಾರದ ಬದಲಾವಣೆಯಾಗಲಿದೆ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಯಾವ ವಿಚಾರಗಳ ಬಗ್ಗೆಯೂ ನಾನು ಸಾರ್ವಜನಿಕವಾಗಿ ಚರ್ಚೆ ಮಾಡಲು ಬಯಸುವುದಿಲ್ಲ. ಪಕ್ಷದ ವೇದಿಕೆಯಲ್ಲಿ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದರು.
ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ. ಎಲ್ಲಾ ನಿರ್ವಹಣೆ ಉತ್ತಮವಾಗಿದೆ. ಗುಬ್ಬಿಯ ಎಸ್.ಆರ್. ಶ್ರೀನಿವಾಸ್, ಸಚಿವ ಚೆಲುವರಾಯಸ್ವಾಮಿ, ಮಾಗಡಿಯ ಎಚ್.ಸಿ. ಬಾಲಕೃಷ್ಣ ಮತ್ತು ನಾನು ಸಂತೋಷದಿಂದ ಇದ್ದೇನೆ ಯಾವುದೇ ತಕರಾರು ಇಲ್ಲ ಎಂದರು.
ಕುಣಿಗಲ್‌ಗೆ ನೂರು ಸಾವಿರ ಎಂಸಿಎಫ್‌ಡಿ ನೀರು ತರಬೇಕು ಎಂಬುದು ನನ್ನ ಉದ್ದೇಶ. ಅದಕ್ಕಾಗಿ ನಾನು ಯಾವುದೇ ಹೋರಾಟಕ್ಕಾದರೂ ಸಿದ್ಧ. ಸಚಿವ ವಿ. ಸೋಮಣ್ಣನವರು ಸಭೆಗೆ ಕೆರದಿದ್ದಾರೆ. ಅಲ್ಲಿಗೆ ಅಂಕಿ-ಅಂಶಗಳ ಸಮೇತ ಹೋಗುತ್ತೇನೆ. ಕುಣಿಗಲ್‌ಗೆ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತೇನೆ ಎಂದರು.
ನನ್ನ ತಾಲ್ಲೂಕಿಗೆ ಹಂಚಿಕೆಯಾಗಿರುವ ನೀರು ಹರಿದ ಬಳಿಕ ಯಾರು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಲಿ, ನನ್ನ ತಕರಾರಿಲ್ಲ. ಲಿಂಕ್ ಕೆನಾಲ್ ಯೋಜನೆ ತಡೆದರೆ ಪ್ರಾಣತ್ಯಾಗಕ್ಕೂ ಮುಂದಾಗಬೇಕಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ನನಗೆ ಬೆಂಬಲ ಇದೆ. ರಾಜಕೀಯ ಕಾರಣಕ್ಕಾಗಿ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.