Friday, July 4, 2025
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಹಾಸನದಲ್ಲಿ ಮುಂದುವರೆದ ಮರಣಮೃದಂಗ, ಹೃದಯಾಘಾತದಿಂದ ಮತ್ತೊಬ್ಬ ಯುವಕ ಸಾವು, ಮೃತರ ಸಂಖ್ಯೆ 32ಕ್ಕೆ ಏರಿಕೆ

ಹಾಸನದಲ್ಲಿ ಮುಂದುವರೆದ ಮರಣಮೃದಂಗ, ಹೃದಯಾಘಾತದಿಂದ ಮತ್ತೊಬ್ಬ ಯುವಕ ಸಾವು, ಮೃತರ ಸಂಖ್ಯೆ 32ಕ್ಕೆ ಏರಿಕೆ

Death toll continues in Hassan, another youth dies of heart attack

ಹಾಸನ, ಜು.4- ಜಿಲ್ಲೆಯಲ್ಲಿ ಹೃದಯಾಘಾತ ಮರಣಮೃದಂಗ ಮುಂದುವರೆದಿದ್ದು, ಕಳೆದ ರಾತ್ರಿ ಯುವಕ ಹಾಗೂ ಮಹಿಳೆಯೊಬ್ಬರು ಹೃದಯಾಘಾತಕ್ಕೆ ಬಲಿಯಾಗಿದ್ದು, ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಹಾಸನ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ 21 ವರ್ಷದ ಮದನ್ ಎಂಬ ಯುವಕ ಹಾಗೂ ದಾಸರಕೊಪ್ಪಲಿನ 55 ವರ್ಷದ ವಿಮಲಾ ಕಳೆದ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೂಲತಃ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ಮದನ್ ತಾಯಿಯ ಜೊತೆ ಚನ್ನಪಟ್ಟಣದಲ್ಲಿ ವಾಸವಿದ್ದ. ಕಳೆದೆರಡು ದಿನಗಳ ಹಿಂದೆ ಚಿಕ್ಕಕೊಂಡಗುಳದ ತನ್ನ ಭಾವನ ಮನೆಗೆ ಬಂದಿದ್ದ. ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ದಿಢೀರನೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಮೃತಪಟ್ಟಿದ್ದಾನೆ.

ಕಳೆದ ರಾತ್ರಿ ವಿಮಲಾ ಅವರಿಗೆ ಎದೆನೋವು ಹಾಗೂ ಬೆನ್ನುನೋವು ಕಾಣಿಸಿಕೊಂಡಿದ್ದು, ಕೂಡಲೇ ಮನೆಯವರು ಆರೈಕೆ ಮಾಡಿದ ನಂತರ ಚೇತರಿಸಿಕೊಂಡಿದ್ದ ಆಕೆ ಊಟ ಕೇಳಿದ್ದು, ಊಟ ಮಾಡುತ್ತಿರುವಾಗಲೇ ಮತ್ತೆ ಎದೆನೋವು ಕಾಣಿಸಿಕೊಂಡಿದೆ.ಕೂಡಲೇ ಆ್ಯಂಬುಲೆನ್ಸ್‌ ಗೆ ಕರೆ ಮಾಡಿದ ಪತಿ ಪತ್ನಿಗೆ ನೀರು ಕುಡಿಸುವಷ್ಟರಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಜನತೆ ಆರೋಗ್ಯದತ್ತ ಒಲವು ತೋರಿದ್ದಾರೆ.ಮುಂಜಾಗ್ರತಾ ಕ್ರಮವಾಗಿ ಜನರು ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಮುಂಜಾನೆ ವಾಕಿಂಗ್, ವ್ಯಾಯಾಮದಂತಹ ಕಸರತ್ತಿನಲ್ಲಿ ನಿರತರಾಗಿರುವ ದೃಶ್ಯಗಳು ಕಂಡುಬಂದವು.

RELATED ARTICLES

Latest News