ಬೆಂಗಳೂರು, ನ.17- ನಗರದಲ್ಲಿ ಹೆಚ್ಚುತ್ತಿರುವ ಸೈಬರ್ ಪ್ರಕರಣಗಳನ್ನು ಭೇದಿಸಲು ಡಿಸಿಪಿ ಮಟ್ಟದ ನಾಲ್ಕು ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚಾಗುತ್ತಿರುವ ಸೈಬರ್ ಪ್ರಕರಣಗಳನ್ನು ವ್ಯವಸ್ಥಿತವಾಗಿ ಭೇದಿಸಲು ನಗರದ ಎಲ್ಲಾ ಠಾಣೆಗಳಲ್ಲಿ ಸಮನ್ವಯ ಹಾಗೂ ಕೇಂದ್ರಸರ್ಕಾರ ಮತ್ತು ಬ್ಯಾಂಕ್‍ನ ನೋಡಲ್ ಸಿಬ್ಬಂದಿಯೊಂದಿಗೆ ಸಂಪರ್ಕ ಸಾಧಿಸಲು ಡಿಸಿಪಿ ಮಟ್ಟದ ಅಧಿಕಾರಿಗಳ ನಾಲ್ಕು ತಂಡವನ್ನು ರಚಿಸಲಾಗಿದೆ.
ನಗರದಲ್ಲಿ ಹೆಚ್ಚು ಸೈಬರ್ ವಂಚನೆ ದೂರುಗಳು ಆಧಾರ್ ಎನೇಬಲ್ ಪೇಮೆಂಟ್ (ಬೆರಳಚ್ಚು) ನಿಂದ ಆಗುತ್ತಿದೆ. ಇವರಿಗೂ 116 ಪ್ರಕರಣಗಳು ದಾಖಲಾಗಿದ್ದು, ಈ ವಂಚನೆಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ವಿಚಾರಣೆ ನಡೆಸಲು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರಿಗೆ ಉಸ್ತುವಾರಿ ನೀಡಲಾಗಿದೆ. ಆನ್‍ಲೈನ್ ಜಾಬ್‍ಗೆ ಸಂಬಂಧಿಸಿದಂತೆ 4000 ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇವುಗಳ ಸಮಗ್ರ ತನಿಖೆಯ ಜವಾಬ್ದಾರಿಯನ್ನು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರಿಗೆ ನೀಡಲಾಗಿದೆ.
ಡಿಸಿಎಂ ಭೇಟಿ ರಾಜಕೀಯ ಬಣ್ಣ ಬೇಡ: ಜಿ.ಟಿ.ದೇವೇಗೌಡ
ಮತ್ತೊಂದು ರೀತಿಯ ಸೈಬರ್ ವಂಚನೆ ಕೊರಿಯರ್ ಮೂಲಕ ನಡೆಯುತ್ತಿದ್ದು, ಜನರಿಗೆ ಕೊರಿಯರ್ ಬಂದಿದೆ ಎಂದು ಕರೆ ಮಾಡಿ ಹಣ ಕಟ್ಟುವಂತೆ ಕೇಳಿ ವಂಚನೆ ಮಾಡಲಾಗುತ್ತದೆ. ಇಂತಹ ಪ್ರಕರಣಗಳನ್ನು ಭೇದಿಸಲು ಪೂರ್ವ ವಿಭಾಗದ ಸಂಚಾರಿ ಪೊಲೀಸ್ ಡಿಸಿಪಿ ಕುಲದೀಪ್ ಜೈನ ರವರು ನೀಡಲಾಗಿದೆ. ಇತೀಚಿಗೆ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಮ ಪ್ರಚೋದಿತ ವಂಚನೆ ಜಾಲ ಬೆಳಿದಿದ್ದು, ಇಂತಹ ಪ್ರಕರಣಗಳನ್ನೂ ಭೇದಿಸಲು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡವತ್ ಅವರನ್ನು ನೇಮಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಸೈಬರ್ ಪ್ರಕರಣಗಲ್ಲಿ ಒಂದೇ ಆರೋಪಿಯಿಂದ ಬೇರೆ ಬೇರೆ ಕಡೆ ವಂಚನೆ ಆಗಿರುತ್ತದೆ ಹಾಗೂ ಒಂದೇ ಸ್ಥಳ ಅಥವಾ ತಂಡ ಭಾಗಿಯಾಗಿರುತ್ತಾರೆ. ಇಂತಹ ಪ್ರಕರಣಗಳನ್ನು ಭೇದಿಸಲು ಎಲ್ಲಾ ಪೊಲೀಸ್ ಠಾಣೆಗಲ್ಲಿ ದಾಖಲಾಗುವ ಸೈಬರ್ ಪ್ರಕರಣ ವರದಿಯನ್ನು ಪಡೆದು ಸೂಕ್ತ ರೀತಿಯಲ್ಲಿ ತನಿಖೆ ಮಾಡಲು ಸಹಾಯವಾಗುತ್ತದೆ ಎಂದು ಆಯುಕ್ತರು ಹೇಳಿದರು.
ಬೇನಾಮಿ ಬ್ಯಾಂಕ್ ಖಾತೆ ತೆರೆದು ಸೈಬರ್ ವಂಚನೆಯಲ್ಲಿ ಬಳಸಿರುವ ತಂಡವನ್ನು ಬಂಧಿಸಿದ್ದು, ಇವರು ಹೋಟಲ್, ಪೆಟ್ರೋಲ್ ಬಂಕ್, ಬ್ಯಾಂಕ್‍ನಲ್ಲಿ ಕೆಲಸ ಮಾಡುವ ಅಮಾಯಕರಿಗೆ ಐದು – ಹತ್ತು ಸಾವಿರದ ಆಮಿಷವೊಡ್ಡಿ ಆಧಾರ್ ಸಂಖ್ಯೆ, ಪ್ಯಾನ್ ಕಾರ್ಡ್, ಬ್ಯಾಂಕ್ ಕೆವೈಸಿ ಪಡೆದು ವಂಚನೆ ಮಾಡುವಾಗ ಈ ಖಾತೆಗಳನ್ನು ಬಳಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಒಬ್ಬ ಆರೋಪಿಯು ದುಬೈಗೆ ಹೋಗಿ ಅಲ್ಲಿ ತರಬೇತಿ ಪಡೆದುಬಂದಿದ್ದಾಗಿ ಹೇಳಿದ್ದಾನೆ. ವಂಚಿಸಿದ ಹಣವನ್ನು ಅಂತಾರಾಜ್ಯ ಮತ್ತು ಬೇರೆ ರಾಷ್ಟ್ರಗಳಿಗೂ ವರ್ಗಾವಣೆ ಮಾಡುತ್ತಿದ್ದರು. ದುಬೈನಲ್ಲಿ ಇಂತಹ ವಂಚನೆ ಮಾಡುವ ಬಗ್ಗೆ ತರಬೇತಿ ನೀಡುವ ಕಾರ್ಯಾಗಾರ ಮಾಡುತ್ತಾರೆ ಎಂದು ಹೇಳಿದ್ದಾನೆ. ಈ ಪ್ರಕರಣ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದರು.