ಬೆಂಗಳೂರು, ಜು.5- ಸಂಸ್ಥೆಯ ಯಾವುದೇ ಲಾಭಾಂಶ ಪಡೆಯದ ಸಂಸ್ಥೆ ನಿರ್ದೇಶಕರಿಗೆ ವೇತನವೂ ನೀಡದಂತಹ ಯಂಗ್ ಇಂಡಿಯಾ ಟ್ರಸ್ಟ್‌ನಲ್ಲಿ ಹಗರಣವಾಗಿದೆ ಎಂದು ಪ್ರಕರಣ
ದಾಖಲಿಸುವುದು ದ್ವೇಷ ರಾಜಕಾರಣದ ಪರಮಾವಧಿ ಎಂದು ಹಿರಿಯ ಕಾಂಗ್ರೆಸಿಗ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಿಜೆಪಿ ಪಕ್ಷದ ಅಂಗಸಂಸ್ಥೆಗಳಂತೆ ವರ್ತಿಸುತ್ತಿರುವ ಇ.ಡಿ ಸಂಸ್ಥೆ, ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಗಾಂಧಿ ಕುಟುಂಬವನ್ನು ನಡೆಸಿಕೊಳ್ಳುತ್ತಿರುವ ರೀತಿ ದ್ವೇಷ ರಾಜಕೀಯ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಸಾಮಾನ್ಯವಾದದ್ದು ಎಂದು ತಿಳಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವ್ಯವಹಾರ ನಡೆದಿದೆ ಎಂಬುವುದು ಕಪೋಲಕಲ್ಪಿತ ಆರೋಪಗಳು ಮಾತ್ರವಲ್ಲದೇ, ಸಾಕ್ಷಾಧಾರಗಳಿಲ್ಲದೇ ಇ.ಡಿ ನಡೆಸುತ್ತಿರುವ ವಾದ ಸುಳ್ಳಿಗೆ ಸುಳ್ಳನ್ನೇ ಸಾಕ್ಷಿಗಳಂತೆ ಪ್ರತಿಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.
ಯಂಗ್ ಇಂಡಿಯಾ ಒಂದು ಲಾಭ ರಹಿತ ಸಂಸ್ಥೆ ಎಂಬುದು ಸ್ಪಷ್ಟ, ಲಾಂಭಂಶವನ್ನು ಪಡೆಯದೆ ಸಾರ್ವಜನಿಕ ಸೇವಾ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಯಂಗ್ ಇಂಡಿಯಾದ ನಿರ್ದೇಶಕರಾಗಲಿ, ಷೇರುದಾರರಾಗಲಿ ಯಾವುದೇ ಲಾಂಭಂಶವನ್ನು ಪಡೆಯುವಂತಿಲ್ಲ ಎಂಬ ನಿಯಮವಿದೆ ಹಾಗೂ ಷೇರುದಾರರಿಗೆ ಯಾವುದೇ ಸಂಬಳವನ್ನು ಕೂಡ ನೀಡಲಾಗುವುದಿಲ್ಲ. ಹಾಗಿದ್ದೂ ಕೋಟ್ಯಂತರ ಅವ್ಯವಹಾರವಾಗಿದೆ ಎಂದು ಇ.ಡಿ ಇಲಾಖೆ ಆರೋಪಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಒಂದು ಪೈಸೆಯನ್ನೂ ಅಕ್ರಮವಾಗಿ ನ್ಯಾಷನಲ್ ಹೆರಾಲ್ಡ್ ಜೊತೆಗೆ ಯಂಗ್ ಇಂಡಿಯಾ ಸಂಸ್ಥೆ ವಹಿವಾಟು ನಡೆಸಿಲ್ಲ. ಯಾವ ಆಸ್ತಿಯನ್ನು ವಶಕ್ಕೂ ಪಡೆದುಕೊಂಡಿಲ್ಲ. 2013 ರಿಂದ 2025ರವರೆಗೆ ಕಾಲಕ್ಕೆ ತಕ್ಕಂತೆ ಇ.ಡಿ ಇಲಾಖೆ ತನ್ನ ವಾದವನ್ನು ಬದಲಾಯಿಸುತ್ತಾ ಪೊಳ್ಳು ವಾದ ಮಂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕನ ಪುರಾವೇ ಇಲ್ಲದ ದೂರಿನ ನಂತರ ಇಲ್ಲಿವರೆಗೂ ಯಾವುದೇ ತನಿಖಾ ಅಧಿಕಾರಿ ದಾಖಲೆ ಸಮೇತ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯೊಂದಿಗೆ ನಡೆದಿರುವ ಪ್ರಕ್ರಿಯೆಗಳಿಗೆ ಪ್ರತಿಯೊಂದಕ್ಕೂ ದಾಖಲೆಗಳಿರುವುದು ಇ.ಡಿ ಇಲಾಖೆಯ ತನಿಖೆಯಿಂದಲೇ ಬಹಿರಂಗವಾಗಿರುವ ಸತ್ಯ ಎಂದು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಕ್ಕೆ ತ್ಯಾಗ ಬಲಿದಾನ ಮಾಡಿರುವ ಕುಟುಂಬವನ್ನು ತೇಜೋವಧೆ ಮಾಡುವ ದುರದ್ದೇಶದಿಂದಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಗಾಂಧಿ ಕುಟುಂಬದ ವಿರುದ್ಧ ಬಳಸಿಕೊಳ್ಳುತ್ತಿರುವುದು ದೇಶದ ಜನರಿಗೆ ಅರಿವಾಗಿದೆ ಎಂದು ತಿಳಿಸಿದ್ದಾರೆ.
ನೆಹರೂ ಅವರ ನಾಯಕತ್ವದಲ್ಲಿ 5000 ಸ್ವತಂತ್ರ ಹೋರಾಟಗಾರರು ಸೇರಿ ಪ್ರಾರಂಭಿಸಿದ ಭವ್ಯ ಇತಿಹಾಸ ಹೊಂದಿರುವ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದ 1937 ರಲ್ಲಿ ಪ್ರಾರಂಭವಾದ ಪತ್ರಿಕಾ ಸಂಸ್ಥೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ, ಬ್ರಿಟಿಷರ ಗುಲಾಮರಾಗಿದ್ದ ಬಿಜೆಪಿ ಪಕ್ಷ ಸುಳ್ಳು ಮೊಕದ್ದಮೆಗಳನ್ನು ಹೂಡಿರುವುದು ಅಸಹ್ಯ ರಾಜಕೀಯದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಜನ ಗಾಂಧಿ ಕುಟುಂಬದ ಜೊತೆಗೆ ನಿಂತಿದೆ, ಸಂವಿಧಾನ, ನ್ಯಾಯಾಂಗದ ಮೇಲಿನ ನಂಬಿಕೆ ಕಳೆದುಕೊಂಡಿಲ್ಲ. ಸತ್ಯ ಹೊರಬರುವಾಗ ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಗಳಂತೆ ವರ್ತಿಸುತ್ತಿರುವ ಇ.ಡಿ, ಐಟಿಗಳಂತಹ ಸಂಸ್ಥೆಗಳಿಗೆ ಕಪಾಳಮೋಕ್ಷವಾಗುವ ಕಾಲ ದೂರವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- ಸಪ್ತ ಸಾಗರದಾಚೆ ಕನ್ನಡನಾಡಿನ ಒಕ್ಕಲಿಗ ಸಂಸ್ಕೃತಿ-ಪರಂಪರೆಯ ಅದ್ಭುತ ಪ್ರದರ್ಶನ
- ಮಂಗಳೂರು : ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದ ಬಿಜೆಪಿ ಮುಖಂಡನ ಪುತ್ರ ಅರೆಸ್ಟ್
- ಆರೋಪಿಯ ವಿಚಾರಣೆ ವೇಳೆ ರಾಜಕೀಯ ನಾಯಕರ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆ
- ಪ್ರೀತಿ ವಿಷಯಕ್ಕೆ ಶಿಕ್ಷಕಿಯನ್ನು ಇರಿದು ಕೊಂದ ಯುವಕ
- ಲವ್ ಜಿಹಾದ್ ಮಾಸ್ಟರ್ ಮೈಂಡ್ ಕಾಂಗ್ರೆಸ್ ಕೌನ್ಸಿಲರ್ ವಿರುದ್ಧ ಪ್ರಕರಣ ದಾಖಲು