Saturday, July 5, 2025
Homeರಾಜಕೀಯ | Politicsರಾಜ್ಯ ರಾಜಕಾರಣಕ್ಕೆ ಬರ್ತಾರಾ ಖರ್ಗೆ.? ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸದ್ದಿಲ್ಲದೆ ಕಾರ್ಯಾಚರಣೆ..?

ರಾಜ್ಯ ರಾಜಕಾರಣಕ್ಕೆ ಬರ್ತಾರಾ ಖರ್ಗೆ.? ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸದ್ದಿಲ್ಲದೆ ಕಾರ್ಯಾಚರಣೆ..?

Will Mallikarjun Kharge enter state politics?

ಬೆಂಗಳೂರು,ಜು.5 – ಸೆಪ್ಟೆಂಬರ್ ಕ್ರಾಂತಿಯ ಚರ್ಚೆಯಲ್ಲಿ ಅಬ್ಬರಿಸಿ ಹಾರಾಟ ನಡೆಸಿದವರೆಲ್ಲಾ ತಣ್ಣಗಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯ ರಾಜಕಾರಣಕ್ಕೆ ಕರೆತಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಲು ಒಂದು ಬಣ ಸದ್ದಿಲ್ಲದೆ ಕಾರ್ಯಾಚರಣೆ ನಡೆಸುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಸ್ಥಾನದಲ್ಲಿದ್ದು, ಅವರನ್ನು ಕರೆತರುವ ಮೂಲಕ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಅಹಿಂದ ಮೂಲಮಂತ್ರಕ್ಕೆ ಪೆಟ್ಟು ನೀಡುವ ಕಾರ್ಯತಂತ್ರಗಳು ನಡೆಯುತ್ತಿವೆ.

ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಯ್ಕೆಯ ವಿಚಾರವಾಗಿ ಚರ್ಚೆ ನಡೆದಾಗ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗುವ ದಾದರೆ ತಾವು ರೇಸ್‌ನಿಂದ ಹಿಂದೆ ಸರಿಯುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದರು.

ಆಗ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಹೇಳಲೂ ಆಗದೆ, ಅನುಭವಿಸಲೂ ಆಗದೇ ಮೌನಕ್ಕೆ ಶರಣಾಗಿದ್ದರು.
ಡಿ.ಕೆ.ಶಿವಕುಮಾರ್, ಖರ್ಗೆಯವರ ದಾಳ ಉರುಳಿಸಿ ರಾಜಕೀಯ ಎದುರಾಳಿಗಳಿಗೆ ಭರ್ಜರಿ ಪ್ರತಿಕ್ರಿಯೆ ನೀಡಿದ್ದರು. ಆದರೆ ರಣತಂತ್ರದಲ್ಲಿ ಯಾರಿಗಿಂತಲೂ ಏನೂ ಕಡಿಮೆ ಇಲ್ಲದ ಸಿದ್ದರಾಮಯ್ಯ ಮೌನವಾಗಿದ್ದುಕೊಂಡೇ ತಮ್ಮ ಗುರಿ ಸಾಧಿಸಿದರು.

ಈಗ ಎಲ್ಲವೂ ಸುಶಾಂತವಾಗಿ ನಡೆಯುತ್ತಿರುವಾಗ ತಿಳಿಗೊಳಕ್ಕೆ ಕಲ್ಲೆಸೆದಂತೆ ರಾಜಣ್ಣನೀಡಿದ ಸೆಪ್ಟೆಂಬರ್ ಕ್ರಾಂತಿ ಭಾರೀ ಸಂಚಲನ ಮೂಡಿಸಿತ್ತು. ಒಂದಷ್ಟು ಮಂದಿ ಡಿ.ಕೆ.ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಆರಂಭಿಸಿದರು. ಹೇಳಿದ್ದನ್ನು ಹೇಳಿ ಮುಗಿಸಿದ ರಾಜಣ್ಣನಂತರ ಏನೂ ಆಗಿಯೇ ಇಲ್ಲ ಎಂಬಂತೆ ಉಲ್ಟಾಸೀದಾ ಮಾತನಾಡಿ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ.
ಅದಕ್ಕೆ ಡಿ.ಕೆ.ಶಿವಕುಮಾ‌ರ್ ಅವರ ಬಣ ಕೊಟ್ಟ ಎದುರೇಟು ಭಾರೀ ಖಾರವಾಗಿತ್ತು. ಅನಿವಾರ್ಯವಾಗಿ ಡಿ.ಕೆ.ಶಿವಕುಮಾರ್‌ರವರೇ ಮಧ್ಯ ಪ್ರವೇಶಿಸಿ ಗದರುವ ಮೂಲಕ ಎಲ್ಲರನ್ನೂ ತಣ್ಣಗಾಗಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ಸಿಕ್ಕಾಗಲೆಲ್ಲಾ ಡಿ.ಕೆ.ಶಿವಕುಮಾರ್‌ರವರನ್ನು ಹೊರಗಿಟ್ಟೆ ಕೆಲಸ ಮಾಡುವ ಪ್ರಯತ್ನ ಮಾಡುತ್ತಾರೆ ಎಂಬ ಅಪವಾದಗಳಿವೆ. ಡಿ.ಕೆ.ಶಿವಕುಮಾ‌ರ್ ವಿದೇಶಿ ಪ್ರವಾಸದಲ್ಲಿದ್ದಾಗ ಬೆಂಗಳೂರಿನಲ್ಲಿ ನಗರ ಪ್ರದಕ್ಷಿಣೆ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಕಾರ್ಯವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡಿದ್ದರು.

ಇತ್ತೀಚೆಗೆ ನಂದಿಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮೂಹ ಭಾವಚಿತ್ರ ತೆಗೆಸುವಾಗ ಡಿ.ಕೆ.ಶಿವಕುಮಾರ್ ಅವರನ್ನು ಹೊರಗಿಟ್ಟಿದ್ದೂ ಕೂಡ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಹಲವಾರು ಕಹಿಘಟನೆಗಳನ್ನು ನುಂಗಿಕೊಂಡು ಡಿ.ಕೆ.ಶಿವಕುಮಾರ್ ಏನೂ ಆಗಿಯೇ ಇಲ್ಲ ಎಂಬಂತೆ ತಾಳ್ಮೆಯಿಂದ ಇರುವುದು ಕಂಡುಬರುತ್ತಿದೆ.

ಒಳಗೊಳಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯ ರಾಜಕಾರಣಕ್ಕೆ ತರುವ ಮೂಲಕ ಡಿಸೆಂಬರ್ ನಂತರದ ಅವಧಿಗೆ ಮುಖ್ಯಮಂತ್ರಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಸಚಿವರು, ಪ್ರಭಾವಿ ನಾಯಕರು ಖರ್ಗೆಯವರ ಬಳಿ ಸಲುಗೆ ಮತ್ತು ಆತ್ಮೀಯತೆಯಿಂದಿರುವ ಪ್ರಮುಖರು ರಾಜ್ಯರಾಜಕಾರಣಕ್ಕೆ ಬರುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

2013 ರಿಂದಲೂ ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿ ಕಳೆದುಕೊಂಡಿರುವ ಖರ್ಗೆಯವರನ್ನು ಹೇಗಾದರೂ ಮಾಡಿ ಮನವೊಲಿಸಿದರೆ ಸಿದ್ದರಾಮಯ್ಯನವರ ಬಣದ ಧ್ವನಿ ಅಡಗಲಿದೆ. ಯಾರೂ ಚಕಾರವೆತ್ತದೆ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಒಂದು ಬಣ ಕಾರ್ಯಾಚರಣೆಗಿಳಿದಿದೆ. ಇದಕ್ಕೆ ಪೂರಕವಾಗಿ ಶಾಸಕರ ಅಭಿಪ್ರಾಯ ಸಂಗ್ರಹದಂತಹ ಪ್ರಹಸನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಡಿ.ಕೆ.ಶಿವಕುಮಾ‌ರ್ ಅವರು ಮಲ್ಲಿಕಾರ್ಜುನ ಖರ್ಗೆಯವರನ್ನು ಒಪ್ಪುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯಗಳ ನಡುವೆಯೂ ಸದ್ದಿಲ್ಲದೆ ಈ ರೀತಿಯ ಕಾರ್ಯಾಚರಣೆ ನಡೆಯುತ್ತಿರುವುದು ಕುತೂಹಲ ಕೆರಳಿಸಿದೆ.

RELATED ARTICLES

Latest News