ಬೆಂಗಳೂರು, ಜು.7-ಬೆಂಗಳೂರಿನ ಬನಶಂಕರಿಯಲ್ಲಿ ಕಾನೂನು ಕಾಲೇಜು ಮತ್ತು ಯುಪಿಎಸ್‌ಸಿ ತರಬೇತಿಗಾಗಿ ಕಟ್ಟಡವನ್ನು ಈಗಾಗಲೇ ನಿರ್ಮಿಸಲಾಗಿದೆ. ಕುರುಬರ ಸಂಘದ ನೂತನ ಕಟ್ಟಡ ನಿರ್ಮಾಣವನ್ನು 34 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾವರೆಕೆರೆ ಬಳಿಯ ಕೆತೋಹಳ್ಳಿಯಲ್ಲಿರುವ ಬ್ರಹ್ಮಲೀನ ಜಗದ್ಗುರು ಶ್ರೀ ಬಿರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮಿಗಳ 19ನೇ ವರ್ಷದ ಪುಣ್ಯರಾಧನೆಯ ಸ್ಮರಣಾರ್ಥವಾಗಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರವನ್ನು ಲೋಕಾರ್ಪಣೆ ಮಾಡಿದ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 300 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಮತ್ತು ಯುಪಿಎಸ್ ಸಿ ತರಬೇತಿ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿರುವ ಶ್ರೀ ಕಾಗಿನೆಲೆ ಗುರುಪೀಠದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ವ್ಯಾಪ್ತಿಯಲ್ಲಿ 80 ಎಕರೆ ಸರ್ಕಾರಿ ಜಮೀನನ್ನು ವಿವಿಧ ಸಮಾಜದ ಮಠಮಾನ್ಯಗಳಿಗೆ ಹಂಚುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ವಿವಿಧ ಸಮಾಜದ ಸ್ವಾಮೀಜಿಗಳು ಕೋರಿದಂತೆ ಸಮಾಜದ ಅಭಿವೃದ್ಧಿಗೆ ಅನುದಾನವನ್ನು ನೀಡಲು ಪರಿಶೀಲಿಸಲಾಗುವುದು ಎಂದರು.
ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿದ್ದೆ. ಈಗ ಉದ್ಘಾಟನೆ ಮಾಡುತ್ತಿರುವುದು ಸಂತನ ತಂದಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. 10 ಕೋಟಿ ರೂ.ಬೆಲೆಬಾಳುವ ಒಂದು ಎಕರೆ ಜಾಗವನ್ನು ಮಹೇಶ್ ಅವರು ಕೊಟ್ಟಿದ್ದು ಶ್ಲಾಘನೀಯ ಎಂದು ಹೇಳಿದ್ದಾರೆ.
ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿಯವರು ಯಾವುದೇ ಕಟ್ಟಡಗಳನ್ನು ಅತ್ಯಂತ ಕ್ಷಿಪ್ರವಾಗಿ ಕಟ್ಟುತ್ತಾರೆ. ಎರಡೇ ವರ್ಷಗಳಲ್ಲಿ ಭಕ್ತರಿಂದ ವಂತಿಗೆ ಪಡೆದು ನಿರ್ಮಾಣ
ಮಾಡಿದ್ದಾರೆ. ಸಚಿವ ಸುರೇಶ್ ಅವರು 50 ಲಕ್ಷ ರೂ.ಗಳ ದೇಣಿಗೆ ನೀಡಿದ್ದಾರೆ. ಕುಟೀರವನ್ನು ನಿರ್ಮಾಣ ಮಾಡಲು ಎಲ್ಲರ ಸಹಾಯ ಪಡೆದಿದ್ದಾರೆ. ಸುಮಾರು 4 ಕೋಟಿಯಷ್ಟು ಹಣವನ್ನು
ವೆಚ್ಚ ಮಾಡಿದ್ದು, ಇತರರು ವಸ್ತುಗಳ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಮಠ ಜನರಿಂದಲೇ ಬೆಳೆಯಬೇಕು. ಸರ್ಕಾರದ ಮೇಲೆ ಅವಲಂಬಿತವಾದರೆ ಬೆಳೆಯಲು ಸಾಧ್ಯವಿಲ್ಲ. 1992ರಲ್ಲಿ
ಪ್ರಾರಂಭವಾದ ಮಠವನ್ನು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 25 ಲಕ್ಷ ರೂ.ಗಳನ್ನು ನಿರಾಕರಿಸಲಾಯಿತು ಎಂದು ಸ್ಮರಿಸಿದರು.
ಶೋಷಿತ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಸಮಾಜ ನಿರ್ಮಾಣವಾಗುತ್ತದೆ ವಿದ್ಯೆಯಿಂದ ಮಾತ್ರ ಸ್ವಾಭಿಮಾನ ಬೆಳೆದು ಮನುಷ್ಯರಾಗಲು ಸಾಧ್ಯ. ಇಲ್ಲವೇ ಗುಲಾಮಗಿರಿ ನಮ್ಮಲ್ಲಿ ಮನೆಮಾಡುತ್ತದೆ. ಸಮುದಾಯವನ್ನು ಬೆಳೆಸಿ ಇತರರನ್ನು ಬೆಳೆಸಿ ಎಂದು ಅವರು ಕರೆ ನೀಡಿದರು.
ಕಾಗಿನೆಲೆ ಮಹಾಸಂಸ್ಥಾನದ ಪೀಠದ ವತಿಯಿಂದ ಸಮಾಜಮುಖಿ ಕೆಲಸಗಳಾಗುತ್ತಿರುವುದು ಶ್ಲಾಘನೀಯ. ಇದಕ್ಕೆ ಶ್ರಮಿಸುತ್ತಿರುವ ಜಗದ್ಗುರು ಶ್ರೀ ನಿರಂಜನಾನಂದ ಸ್ವಾಮಿ ಹಾಗೂ ಶಾಖಾಮಠದ ಸ್ವಾಮೀಜಿಗಳಿಗೆ ಅಭಿನಂದಿಸುತ್ತೇನೆ. ಮೈಸೂರಿನಲ್ಲಿ ಯಾಂದಳ್ಳಿ ಗ್ರಾಮದಲ್ಲಿ 12 ಎಕರೆ ಜಾಗವನ್ನು ನೀಡಲಾಗಿದ್ದು, ಭವನ ನಿರ್ಮಾಣವನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷ ಜಗದ್ಗುರು ಶ್ರೀ ನಿರಂಜನಾನಂದಸ್ವಾಮಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್ ಎಂ.ರೇವಣ್ಣ, ಸಚಿವ ಬೈರತಿ ಸುರೇಶ್, ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪುರ, ಬಸವರಾಜ ಶಿವಣ್ಣ, ಹುಲಿನಾಯ್ಕರ್, ಆರ್.ಶಂಕರ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಮಂಜುನಾಥ್, ಶ್ರೀನಿವಾಸ್, ಭೀಮಸೇನಾ ಚಿಮ್ಮನಕಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.