Tuesday, July 8, 2025
Homeಅಂತಾರಾಷ್ಟ್ರೀಯ | Internationalಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ - ಪಾಕಿಸ್ತಾನ ವಿರುದ್ಧ ಮೋದಿ ವಾಗ್ದಾಳಿ

ಬ್ರಿಕ್ಸ್ ಶೃಂಗಸಭೆಯಲ್ಲಿ ಚೀನಾ – ಪಾಕಿಸ್ತಾನ ವಿರುದ್ಧ ಮೋದಿ ವಾಗ್ದಾಳಿ

There should be no hesitation in imposing sanctions against terrorists: Modi at BRICS

ರಿಯೊ ಡಿ ಜನೈರೊ, ಜು. 7– ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಭಯೋತ್ಪಾದನೆಯನ್ನು ಮೌನವಾಗಿ ಬೆಂಬಲಿಸುವುದು ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ ಹಾಗೂ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ 17 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ ಪಾಕಿಸ್ತಾನ, ಚೀನಾವನ್ನು ಹೆಸರಿಸದೆ ಎರಡೂ ದೇಶಗಳನ್ನು ಟೀಕಿಸಿದರು.ಭಯೋತ್ಪಾದನೆಯನ್ನು ಖಂಡಿಸುವುದು ನಮ್ಮ ತತ್ವವಾಗಬೇಕು, ಕೇವಲ ಅನುಕೂಲಕ್ಕಾಗಿ ಅಲ್ಲ, ಯಾವ ದೇಶದ ಮೇಲೆ ದಾಳಿ ನಡೆದಿದೆ, ಯಾರು ಮಾಡಿದ್ದಾರೆಂದು ನೋಡುತ್ತಾ ಹೋದರೆ ಅದು ಮಾನವೀಯತೆಗೆ ಮಾಡಿದ ದ್ರೋಹವಾಗುತ್ತದೆ ಎಂದಿದ್ದಾರೆ.

ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ವಿಧಿಸುವಲ್ಲಿ ಯಾವುದೇ ಹಿಂಜರಿಕೆ ಬೇಡ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಮಾತು ಮತ್ತು ಕ್ರಿಯೆಯ ನಡುವೆ ಯಾವುದೇ ವ್ಯತ್ಯಾಸ ಇರಬಾರದು ಎಂದ ಅವರು ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷ ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಪಶ್ಚಿಮ ಏಷ್ಯಾದಿಂದ ಯುರೋಪ್‌ ವರೆಗೆ ಜಗತ್ತಿನಲ್ಲಿ ನಡೆಯುತ್ತಿರುವ ಸಂಘರ್ಷಗಳು ಮತ್ತು ಉದ್ವಿಗ್ನತೆಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಶಾಂತಿಯ ಮಾರ್ಗವೇ ಏಕೈಕ ಆಯ್ಕೆ ಎಂದು ಭಾರತ ನಂಬುತ್ತದೆ ಎಂದು ಅವರು ಹೇಳಿದರು.

ಜಗತ್ತನ್ನು ವಿಭಜನೆ ಮತ್ತು ಸಂಘರ್ಷದಿಂದ ದೂರವಿಡುವ ಮಾತುಕತೆ, ಸಹಕಾರ ಮತ್ತು ಸಮನ್ವಯದತ್ತ ಸಾಗುವ ಮತ್ತು ಒಗ್ಗಟ್ಟು ಮತ್ತು ವಿಶ್ವಾಸವನ್ನು ಹೆಚ್ಚಿಸುವ ಪ್ರತಿಯೊಂದು ಪ್ರಯತ್ನಕ್ಕೂ ಭಾರತ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.

ಏ. 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಉಲ್ಲೇಖಿಸಿದರು. ಈ ದಾಳಿ ಭಾರತದ ಆತ್ಮ, ಗುರುತು ಮತ್ತು ಗೌರವದ ಮೇಲಿನ ನೇರ ದಾಳಿ ಎಂದು ಪ್ರಧಾನಿ ಹೇಳಿದರು. ಇದು ಕೇವಲ ಭಾರತದ ಮೇಲಿನ ದಾಳಿಯಲ್ಲ, ಇಡೀ ಮಾನವೀಯತೆಯ ಮೇಲಿನ ದಾಳಿಯಾಗಿದೆ. ಈ ಕಷ್ಟದ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ ದೇಶಗಳಿಗೆ ಧನ್ಯವಾದ ಅರ್ಪಿಸಿದರು.ಭಾರತ ಭಯೋತ್ಪಾದನೆಯ ಬಲಿಪಶು ರಾಷ್ಟ್ರವಾಗಿದ್ದರೆ, ಪಾಕಿಸ್ತಾನ ಅದರ ಬೆಂಬಲಿಗ ರಾಷ್ಟ್ರವಾಗಿದೆ ಎಂದು ಬ್ರಿಕ್‌್ಸ ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ ಮೋದಿ, ಬಲಿಪಶುಗಳು ಮತ್ತು ಬೆಂಬಲಿಗರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.

ಭಯೋತ್ಪಾದನೆಗೆ ಬೆಂಬಲ ನೀಡುವುದು, ಭಯೋತ್ಪಾದಕರಿಗೆ ಮೌನ ಒಪ್ಪಿಗೆ ನೀಡುವುದನ್ನು ಸಹಿಸಲಾಗುವುದಿಲ್ಲ. ಈ ಬಗ್ಗೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿದರು. ಅಲ್ಲದೇ ಭಾರತ ಮಹಾತ್ಮ ಗಾಂಧಿ, ಗೌತಮ ಬುದ್ಧರಿಂದ ಪ್ರೇರಿತರಾಗಿ ಶಾಂತಿಯ ಹಾದಿಯಲ್ಲಿ ಮುಂದುವರಿಯುತ್ತಿದೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ, ಮಾನವಕುಲದ ಕಲ್ಯಾಣಕ್ಕೆ ಶಾಂತಿಯೇ ಅತ್ಯುತ್ತಮ ಮಾರ್ಗವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇನ್ನೂ ಪ್ರಧಾನಿ ಮೋದಿ ಅವರ ಭಾಷಣದ ಬಳಿಕ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆ ಅಥವಾ ರಿಯೊ ಡಿ ಜನೈರೊ ಘೋಷಣೆಯನ್ನು ಹೊರಡಿಸಿದವು. ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುವುದಾಗಿ ಸ್ಪಷ್ಟಪಡಿಸಿರುವ ಬ್ರಿಕ್ಸ್ ನಾಯಕರು, ಭಯೋತ್ಪಾದನೆಗೆ ಯಾರೇ ಬೆಂಬಲ ನೀಡಿದರೂ ಅದನ್ನು ಉಗ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಭಯೋತ್ಪಾದನೆಯನ್ನ ರಾಜ್ಯ ನೀತಿಯಾಗಿ ಹೇಗೆ ಬಳಸುತ್ತಿದೆ ಎಂಬುದನ್ನು ಭಾರತವು 17ನೇ ಬಾರಿಗೆ ಸ್ಪಷ್ಟ ಪುರಾವೆಗಳೊಂದಿಗೆ ತೋರಿಸಿದೆ. ಇತ್ತೀಚಿಗೆ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ರಕ್ಷಣಾ ಸಚಿವರ ಸಭೆಯಲ್ಲಿ, ಪಹಲ್ಗಾಮ್‌ ದಾಳಿ ಉಲ್ಲೇಖವಿರದ ಜಂಟಿ ಹೇಳಿಕೆಗೆ ಸಹಿ ಮಾಡಲು, ಭಾರತ ನಿರಾಕರಿಸಿತ್ತು.

RELATED ARTICLES

Latest News