Sunday, August 24, 2025
Homeರಾಜ್ಯಮುಷ್ಕರಕ್ಕೆ ಕರೆಕೊಟ್ಟ ಪಡಿತರ ಸರಬರಾಜುದಾರರು, ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ಬಂದ್‌..!

ಮುಷ್ಕರಕ್ಕೆ ಕರೆಕೊಟ್ಟ ಪಡಿತರ ಸರಬರಾಜುದಾರರು, ಅನ್ನಭಾಗ್ಯ ಅಕ್ಕಿ ಸಾಗಾಣಿಕೆ ಬಂದ್‌..!

Ration suppliers call for strike, Annabhagya rice transportation shutdown

ಬೆಂಗಳೂರು,ಜು.7- ಸರ್ಕಾರದ ವಿರುದ್ಧ ಪಡಿತರ ಆಹಾರಧಾನ್ಯಗಳ ಸರಬರಾಜು ದಾರರು ತಿರುಗಿಬಿದ್ದಿದ್ದು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯಗಳ ಸಾಗಾಣಿಕೆ ಬಂದ್‌ ಮಾಡಲು ಮುಂದಾಗಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ಸುಮಾರು 250 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಾಕಿ ಬರಬೇಕಾದ ಹಿನ್ನಲೆಯಲ್ಲಿ ಅನ್ನಭಾಗ್ಯ ಆಹಾರಧಾನ್ಯ ಸಾಗಾಣಿಕೆ ಮಾಡುತ್ತಿದ್ದ ಲಾರಿಗಳವರು ಸಾಗಾಣಿಕೆ ಬಂದ್‌ ಮಾಡಿ ಮುಷ್ಕರ ನಡೆಸಲು ತೀರ್ಮಾನಿಸಿರುವುದರಿಂದ ಇಂದಿನಿಂದ ಪಡಿತರ ಆಹಾರಧಾನ್ಯ ಸರಬರಾಜು ಬಂದ್‌ ಆಗಲಿದೆ.

ಈ ಕುರಿತು ಮಾತನಾಡಿದ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರುಗಳ ಸಂಘದ ಅಧ್ಯಕ್ಷ ಮತ್ತು ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಷಣುಗಪ್ಪ ಅವರು, ಕಳೆದ ನಾಲ್ಕು ತಿಂಗಳಿನಿಂದ ಸರ್ಕಾರ ಸಾಗಾಣಿಕೆ ವೆಚ್ಚ ನೀಡದೆ ಬಾಕಿ ಉಳಿಸಿಕೊಂಡಿದೆ. ಸರ್ಕಾರದಿಂದ 250 ಕೋಟಿ ರೂ. ಬಾಕಿ ಬರಬೇಕಿದೆ ಎಂದರು.

ಬಾಕಿ ಹಣ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. 15 ದಿನಗಳ ಗಡುವು ಕೂಡ ನೀಡಲಾಗಿತ್ತು. ಹಣ ನೀಡದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸುಮಾರು 3ರಿಂದ 4 ಸಾವಿರ ಓನರ್‌ ಕಮ್‌ ಡ್ರೈವರ್‌ಗಳಿಗೆ ಇದರಿಂದ ಸಂಕಷ್ಟ ಎದುರಾಗಿದೆ. ಬಾಕಿ ಹಣ ಪಾವತಿಯಾಗದಿರುವುದರಿಂದ ಸಾಗಾಣಿಕೆ ವೆಚ್ಚ ಮತ್ತು ಡೀಸೆಲ್‌ ವೆಚ್ಚ ಭರಿಸಲಾಗದೆ ತೊಂದರೆಯಾಗಿದೆ. ಹೀಗಾಗಿ ಅನಿವಾರ್ಯವಾಗಿ ನಾವು ಸರ್ಕಾರದ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಸರ್ಕಾರ ಆಹಾರ ಧಾನ್ಯ ಸಾಗಾಣಿಕೆ ವೆಚ್ಚ ಬಾಕಿ ಉಳಿಸಿಕೊಂಡಿರುವುದರಿಂದ ತೊಂದರೆಯಾಗುತ್ತಿದೆ ಎಂದು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ನಮ ಬೇಡಿಕೆ ಈಡೇರುವವರೆಗೂ ನಾವು ಮುಷ್ಕರ ನಡೆಸುತ್ತೇವೆ ಎಂದು ಅವರು ತಿಳಿಸಿದರು.

RELATED ARTICLES

Latest News