Tuesday, July 8, 2025
Homeರಾಜ್ಯನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ದೌಡು

ನಾಳೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ದೌಡು

CM Siddaramaiah to visit Delhi tomorrow

ಬೆಂಗಳೂರು,ಜು.7– ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದೆಹಲಿಗೆ ಭೇಟಿ ನೀಡುತ್ತಿದ್ದು, ಮೈಸೂರಿನ ದಸರಾದಲ್ಲಿ ವೈಮಾನಿಕ ಪ್ರದರ್ಶನ ಆಯೋಜನೆಗೆ ಸಂಬಂಧಪಟ್ಟಂತೆ ರಕ್ಷಣಾ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ.

ಕಳೆದ ದಸರಾದಲ್ಲೂ ವೈಮಾನಿಕ ಪ್ರದರ್ಶನ ಆಯೋಜನೆಗೆ ಪ್ರಯತ್ನಗಳು ನಡೆದಿದ್ದವು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೇವಲ ಹೆಲಿಕಾಪ್ಟರ್‌ ಮತ್ತು ಪ್ಯಾರಾಗ್ಲೈಡಿಂಗ್‌ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಸಂದರ್ಭದಲ್ಲಿ ಏರ್‌ಶೋ ಆಯೋಜಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಬಾರಿ ಕೂಡ ಪ್ರಯತ್ನ ಮುಂದುವರೆಸಿದ್ದಾರೆ.

ನಾಳೆ ಬೆಳಿಗ್ಗೆ ದೆಹಲಿಗೆ ತೆರಳಿ ಸಂಜೆ 4.30ಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಹೈಕಮಾಂಡ್‌ ಜೊತೆ ಚರ್ಚೆ :
ಇದೇ ತಿಂಗಳ 15 ರಂದು ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಪ್ರಮುಖ ನಾಯಕರ ಸಮಾವೇಶ ಆಯೋಜನೆಗೊಳ್ಳಲಿದ್ದು, ಅದರ ಪೂರ್ವಭಾವಿಯಾಗಿ ಸಿದ್ದರಾಮಯ್ಯ ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ದೆಹಲಿಗೆ ಭೇಟಿ ನೀಡುವ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿಯವರನ್ನು ಭೇಟಿಯಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ 4 ವಿಧಾನಪರಿಷತ್‌ ಸ್ಥಾನಗಳ ನೇಮಕಾತಿಯ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ಈ ಸಂಬಂಧ ಮಾತುಕತೆ ನಡೆಸಿ ಹೈಕಮಾಂಡ್‌ ನಾಯಕರ ಮನವೊಲಿಸಿ ಅನುಮತಿ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಜೊತೆಗೆ ಹಿಂದುಳಿದ ವರ್ಗಗಳ ಘಟಕದ ಸಮಾವೇಶದಲ್ಲಿ ಚರ್ಚೆ ನಡೆಸಬೇಕಾಗಿರುವ ವಿಷಯಗಳು ಮತ್ತು ಅದರ ದಿಕ್ಕುದೆಸೆಗಳ ಬಗ್ಗೆ ಹೈಕಮಾಂಡ್‌ ನಾಯಕರೊಂದಿಗೆ ಸಮಾಲೋಚನೆ ನಡೆಸಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಸಂಚಲನ ಮೂಡಿಸುವಂತಹ ವಿಷಯಗಳ ನಿಗದಿಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ.

ದೆಹಲಿ ಪ್ರವಾಸದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವರ ಭೇಟಿಗೂ ಸಿದ್ದರಾಮಯ್ಯನವರು ಪ್ರಯತ್ನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News