ಬೆಂಗಳೂರು, ಜು.8- ಪಕ್ಷ ಸಂಘಟನೆ ಹಾಗೂ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಎಐಸಿಸಿ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮುಖ್ಯಮಂತ್ರಿ ಹಾಗೂ ತಮ್ಮೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಭೇಟಿಯ ವೇಳೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರು ಸಮಯ ಕೊಟ್ಟರೆ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದರು.
ಮೇಕೆದಾಟು, ಕಳಸಾಬಂಡೂರಿ ಯೋಜನೆಗಳಿಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ನಿರಾಕ್ಷೇಪಣೆ ಅಗತ್ಯವಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ರಾಜ್ಯಸರ್ಕಾರ ಒದಗಿಸಲಿದೆ. ಅರಣ್ಯ ನಾಶಕ್ಕೆ ಪರ್ಯಾಯ ಭೂಮಿಯನ್ನು ಒದಗಿಸಲಾಗಿದೆ. ಹೀಗಾಗಿ ನಿರಾಕ್ಷೇಪಣೆ ನೀಡಬೇಕು ಎಂದು ಒತ್ತಾಯಿಸಿದ್ದು, ಇಂದು ಮಧ್ಯಾಹ್ನ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಭೇಟಿಗೆ ಸಮಯ ಕೊಟ್ಟಿದ್ದಾರೆ. ಅವರ ಜೊತೆ ಈ ವಿಚಾರವಾಗಿ ಚರ್ಚೆ ನಡೆಸುವುದಾಗಿ ಡಿಕೆಶಿ ತಿಳಿಸಿದರು.
ಮಹದಾಯಿ ಮತ್ತು ಮೇಕೆದಾಟು ಯೋಜನೆಗಳನ್ನು ಆರಂಭಿಸಲು ರಾಜ್ಯಸರ್ಕಾರ ಸಿದ್ದವಿದೆ. ಕೇಂದ್ರ ಸರ್ಕಾರದ ಪೂರ್ವಾನುಮತಿಯಿಲ್ಲದೆ ಕೆಲಸ ಮಾಡಲಾಗುತ್ತಿಲ್ಲ. ಹೀಗಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ಹಾಕಲಿದ್ದೇನೆ. ಸಂಜೆ ಕೇಂದ್ರ ಜಲಶಕ್ತಿ ಸಚಿವರು ಸಮಯ ನೀಡಿದ್ದು, ಕೃಷ್ಣಾ ನ್ಯಾಯಾಧಿಕರಣ ತೀರ್ಪಿನ ಅಧಿಸೂಚನೆ ಹಾಗೂ ತುಂಗಭದ್ರಾ ನದಿಯ 24 ಟಿಎಂಸಿ ನೀರನ್ನು ಶೇಖರಿಸಲು ಪರ್ಯಾಯ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಅದರ ಅಂಗೀಕಾರಕ್ಕೂ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು.
ಬಿಡಿಎಗೆ ಸಂಬಂಧಪಟ್ಟ ಕೆಲ ಪ್ರಕರಣಗಳು ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಆ ಕುರಿತು ಚರ್ಚೆ ನಡೆಸಲು ಅಧಿಕಾರಿಗಳ ಜೊತೆ ಹಾಗೂ ಕಾನೂನು ಸಚಿವರ ಜೊತೆ ಸಭೆ ನಡೆಸುವುದಾಗಿ ಡಿಕೆಶಿ ಹೇಳಿದರು.
- ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಡಿಸಿಎಂ ಚರ್ಚೆ
- ಇಡಿ ಯಿಂದ ಡಿ.ಕೆ.ಸುರೇಶ್ ವಿಚಾರಣೆ
- ಇಂದು ಅಮರನಾಥನ ದರ್ಶನಕ್ಕೆ ಹೊರಟ 7500 ಭಕ್ತರು
- ಗಾಂಜಾ ನಾಶಕ್ಕೆ ಟೊಂಕ ಕಟ್ಟಿ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
- ಬಿಹಾರ ಮಹಿಳೆಯರಿಗೆ ಮಾತ್ರ ಉದ್ಯೋಗ ಮೀಸಲಾತಿ : ನಿತೀಶ್ ಕುಮಾರ್ ಘೋಷಣೆ