ಬೆಂಗಳೂರು, ಜು. 8– ತಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ಬಿಬಿಎಂಪಿ ನೌಕರರು ಹಾಗೂ ರಾಜ್ಯದ 10 ಮಹಾನಗರ ಪಾಲಿಕೆಗಳ 25 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಇಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯ ಹಾದಿ ಹಿಡಿದಿರುವುದರಿಂದ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಕಾರ್ಯ ಕಲಾಪಗಳು ಸ್ತಬ್ಧಗೊಂಡಿವೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು ಕರೆ ನೀಡಿರುವ ಈ ಮುಷ್ಕರಕ್ಕೆ ರಾಜ್ಯದಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಎಲ್ಲಾ ಪಾಲಿಕೆ ಕಚೇರಿಗಳು ಬಿಕೋ ಎನ್ನುತ್ತಿವೆ.
ಮೈಸೂರು, ಮಂಗಳೂರು, ಹುಬ್ಬಳಿ-ಧಾರವಾಡ, ಹುಬ್ಬಳಿ, ದಾವಣಗೆರೆ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆಗಳ ನೌಕರರು ಇಂದು ತಮ ಕೆಲಸ ಕಾರ್ಯ ಸ್ಥಗಿತಗೊಳಿಸಿ ಹೋರಾಟಕ್ಕೆ ಧುಮುಕಿದ್ದಾರೆ. ಅದರಲ್ಲೂ ರಾಜ್ಯದ ನಾನಾ ಮೂಲೆಗಳಿಂದ ರಾಜಧಾನಿಗೆ ಆಗಮಿಸಿರುವ ಸಾವಿರಾರು ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಜಮಾವಣೆಗೊಂಡು ತಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನಾವು ಹಲವಾರು ಬಾರಿ ಮನವಿ ಪತ್ರಗಳನ್ನು ನಗರಾಭಿವೃದ್ಧಿ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ ನೀಡಿದರೂ ನಮಗೆ ಸಕರಾತ್ಮಕ ಪ್ರತಿಕ್ರಿಯೆ ದೊರಕದಿದರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಎಲ್ಲಾ ಮಹಾನಗರ ಪಾಲಿಕೆಯ ಅಧಿಕಾರಿ ನೌಕರರು ಸಾಮೂಹಿಕ ರಜೆ ಹಾಕಿ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ಬೃಹತ್ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‌ರಾಜ್ ತಿಳಿಸಿದ್ದಾರೆ.
ಪಾಲಿಕೆ ನೌಕರರ ಪ್ರಮುಖ ಬೇಡಿಕೆಗಳು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು, ಮಾಲಿಗಳು, ಗ್ಯಾಂಗ್‌ಮೆನ್‌ಗಳು ಪಾಲಿಕೆ ಸಿಬ್ಬಂದಿಗಳು ಆಗಿದ್ದು, ಲಾಗ್‌ಸೇಫ್‌ಪದ್ಧತಿಯಲ್ಲಿ ಹಾಜರಾತಿ ಸಲ್ಲಿಸಲು ಕಷ್ಟಕರವಾಗುತ್ತಿರುವುದರಿಂದ ಕೂಡಲೇ ಆ ಪದ್ಧತಿಯನ್ನು ಕೈ ಬಿಡಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 225 ವಾರ್ಡಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಸುಮಾರು 6000 ಕ್ಕೂ ಮೇಲ್ಪಟ್ಟು ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿದ್ಯಾ ಇಲಾಖೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಯರು ರವರ ಮೇಲೆ ಕ್ಷುಲಕ ಕಾರಣಕ್ಕೆ ಕರ್ತವ್ಯ ಲೋಪದ ಅಡಿಯಲ್ಲಿ ಕಾನೂನು ಬಾಹೀರವಾಗಿ ಇಲಾಖಾ ವಿಚರಣೆ ಜರುಗಿಸುತ್ತಿರುವುದನ್ನು ಕೂಡಲೇ ಕೈ ಬಿಡಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯಪಾಲಕಅಭಿಯಂತರರ ಹುದ್ದೆಯಿಂದ ಕಾರ್ಯಪಾಲಕ ಅಭಿಯಂತರರ ಹುದ್ದೆಗೆ ಮುಂಬಡ್ತಿ ಹಾಗೂ ಕಾರ್ಯಪಾಲ ಅಭಿಯಂತರರ ಹುದ್ದೆಯಿಂದ ಅಧೀಕ್ಷಕ ಅಭಿಯಂತರರ ಹುದ್ದೆಗೆ ಕೂಡಲೇ ಮುಂಬಡ್ತಿ ನೀಡಲು ಮನವಿ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂದಾಯ ಇಲಾಖೆಯಲ್ಲಿ ಖಾತಾ ವರ್ಗಾವಣೆ, ಖಾತಾ ನೋಂದಾವಣೆ, ಖಾತಾ ವಿಭಜನೆ, ಖಾತಾ ಒಂದುಗೂಡಿಸುವುದು ಇ-ಆಸ್ತಿ ಪದ್ಧತಿಯನ್ನು ನಿಯಮಾನುಸಾರ ಈ ಹಿಂದೆ ಇದ್ದ ಪದ್ಧತಿಯಲ್ಲಿಯೇ ಮುಂದುವರೆಸಲು ಆದೇಶಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾನೂನು ಬಾಹೀರವಾಗಿ ಎರವಲು ಸೇವೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೂಡಲೇ ಮಾತೃ ಇಲಾಖೆಗೆ ಹಿಂತಿರುಗಿಸಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡಬೇಕು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಮತ್ತು ನೌಕರರ ಸೇವಾ ಜೇಷ್ಠತಾಪಟ್ಟಿಯನ್ನು ಅಂತಿಮಗೊಳಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾನೂನು ಬಾಹೀರವಾಗಿ ಕಾರ್ಯನಿರ್ವಹಿಸುತ್ತಿರುವ ಮಾರ್ಷಲ್‌ಗಳ ಹುದ್ದೆಗಳನ್ನು ಈ ಕೂಡಲೇ ರದ್ದುಪಡಿಸಬೇಕು ಎನ್ನುವುದಾಗಿದೆ.
ವಿಶೇಷ ಆಯುಕ್ತರ ವಿರುದ್ಧ ನೌಕರರು ಗರಂ; ಪಾಲಿಕೆ ನೌಕರರ ಪ್ರತಿಭಟನೆಗೆ ಹೋಗದಂತೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ದಮ್ಕಿ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ತಮ ಕಾರು ಚಾಲಕ ನರಸಿಂಹ ಎಂಬಾತನಿಗೆ ಕರ್ತವ್ಯಕ್ಕೆ ಬರಬೇಕು ಪ್ರತಿಭಟನೆಗೆ ಹೋದರೆ ಶೋಕಸ್ ನೋಟೀಸ್ ನೀಡುವುದಾಗಿ ಸುರಳ್ಕರ್ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.ಸುರಳ್ಕರ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ನೌಕರರು ಫ್ರೀಡಂ ಪಾರ್ಕ್ ನಿಂದ ಮಲ್ಲೇಶ್ವರಂ ಪಾಲಿಕೆ ಕಚೇರಿಗೆ ನುಗ್ಗಲು ಯತ್ನಿಸದ್ದೇ ಅಲ್ಲದೆ, ಅವರ ವಿರುದ್ಧ ಹರಿಹಾಯ್ದಿದ್ದಾರೆ.
ಸ್ಪಷ್ಟನೆ; ಬಿಬಿಎಂಪಿ ಪಶ್ಚಿಮ ವಿಭಾಗದಲ್ಲಿ ಮೂರು ಸಾವಿರ ಮಂದಿ ಸಿಬ್ಬಂದಿ ಇದ್ದಾರೆ. ಅವರ ಪೈಕಿ ಚಾಲಕ ಮತ್ತು ಆಫೀಸ್ ಸಹಾಯಕನಿಗೆ ಮಾತ್ರ ಪ್ರತಿಭಟನೆಗೆ ಹೋಗಬಾರದು ಎಂದು ತಿಳಿಸಿದ್ದೇ. ನಾನು ನೌಕರರ ಪ್ರತಿಭಟನೆಗೆ ಅಡ್ಡಿ ಪಡಿಸುವ ಕಾರ್ಯಕ್ಕೆ ಹೋಗಲ್ಲ. ನಾನು ಕೂಡು ಫ್ರೀಡಂ ಪಾರ್ಕ್‌ಗೆ ತೆರಳುತ್ತೇನೆ ಎಂದು ವಿಶೇಷ ಆಯುಕ್ತ ಸುರಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಸಾವಿರಾರು ಮಂದಿ ಭಾಗಿ; ಪರಿಷತ್ ಗೌರವಾಧ್ಯಕ್ಷ ಎಸ್.ಹೆಚ್.ಗುರುಮೂರ್ತಿ, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ,ರಾಜ್ಯ ಉಪಾಧ್ಯಕ್ಷರುಗಳಾದ ಜಿ.ವೆಂಕಟ್ ರಾಮ್, ವೇಣುಗೋಪಾಲ್ ಬಿ.ಎನ್. ಮತ್ತು ಪ್ರಧಾನ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಖಜಾಂಚಿ ರುದ್ರೇಶ್ ಬಿ ಹಾಗೂ ರಾಜ್ಯ ಕಾರ್ಯದರ್ಶಿ ಪ್ರಹ್ಲಾದ್ ಕುಲಕರ್ಣಿ, ರಾಜ್ಯ ನಿರ್ದೇಶಕರುಗಳಾದ ಸಾಯಿಶಂಕರ್, ಜಗದೀಶ್ ಎಸ್, ಎ.ಜಿ.ಬಾಬು, ಶ್ರೀನಿವಾಸ್ ಕಟ್ಟಿ, ಬಾಬು ಪಿ, ನರಸಿಂಹ ಕೆ, ಶಾಂತಪ್ಪ ಮುಖೇಶಪ್ಪ ಪತ್ತಾರ, ರವೀಂದ್ರ ಶಿರಶ್ಯಾದ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದವರು,10ಮಹಾನಗರ ಪಾಲಿಕೆ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಬಿಬಿಎಂಪಿ ಕಂದಾಯ, ಆರೋಗ್ಯ, ಎಂಜಿನಿಯರ್ ಮತ್ತು ಪೌರ ಕಾರ್ಮಿಕರ ಸಂಘಟನೆಗಳು, ರುದ್ರಭೂಮಿ ನೌಕರರು, ಐ.ಟಿ.ಮತ್ತು ಹೊರಗುತ್ತಿಗೆ ನೌಕರರು, ಆಡಳಿತ ಕಛೇರಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಹುಬಳ್ಳಿ-ಧಾರವಾಡ, ತುಮಕೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ವಿಜಯಪುರ ಹಾಗೂ ಕಲಬುರಗಿ, ಬೆಳಗಾಂ, ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿ, ನೌಕರರು ಸಿಬ್ಬಂದಿಗಳು ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಡಿಸಿಎಂ ಚರ್ಚೆ
- ಇಡಿ ಯಿಂದ ಡಿ.ಕೆ.ಸುರೇಶ್ ವಿಚಾರಣೆ
- ಇಂದು ಅಮರನಾಥನ ದರ್ಶನಕ್ಕೆ ಹೊರಟ 7500 ಭಕ್ತರು
- ಗಾಂಜಾ ನಾಶಕ್ಕೆ ಟೊಂಕ ಕಟ್ಟಿ ನಿಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್
- ಬಿಹಾರ ಮಹಿಳೆಯರಿಗೆ ಮಾತ್ರ ಉದ್ಯೋಗ ಮೀಸಲಾತಿ : ನಿತೀಶ್ ಕುಮಾರ್ ಘೋಷಣೆ