ಬೆಂಗಳೂರು,ಜು.9- ರಾಜ್ಯ ಬಿಜೆಪಿಯಲ್ಲಿ ಅಂತ್ಯ ಕಾಣದ ಭಿನ್ನಮತದಿಂದಾಗಿ ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿ ತಲೆದೋರಿರುವ ಅಸಮಾಧಾನದ ಹೊಗೆಯನ್ನು ಆರಿಸಲು ಹೈಕಮಾಂಡ್‌ಗೆ ಸಾಧ್ಯವಾಗುತ್ತಿಲ್ಲ.
ಯಡಿಯೂರಪ್ಪ ಕರ್ನಾಟಕದಲ್ಲಿ ಪಕ್ಷ ಕಟ್ಟಿ ಬೆಳೆಸಿದವರು. ರಾಜ್ಯದಲ್ಲಿ ಬಿಜೆಪಿಯನ್ನು ಝೀರೋದಿಂದ ಅಧಿಕಾರಕ್ಕೆ ತಂದವರು. ಶಿವಮೊಗ್ಗದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಜೋಡಿ ಸಂಘದ ಸೂಚನೆಯಂತೆ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟನೆ ಮಾಡಿದವರು. ಆರ್ಥಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದ ದಿನಗಳಲ್ಲಿ ಸ್ಕೂಟರ್‌ನಲ್ಲಿ ಸುತ್ತಾಡಿ ಉಳ್ಳವರ ಕೈಯಿಂದ ಸಹಕಾರ ಪಡೆದುಕೊಂಡು ಕಮಲ ಪಕ್ಷವನ್ನು ನೆಲೆನಿಲ್ಲಿಸಿದವರು. ಹಾಗಾಗಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ತಮದೇ ಆದ ಮಹತ್ವ ಇದೆ.
ರಾಜ್ಯದ ವಿಧಾನಸಭೆಯಲ್ಲಿ ಬಿಜೆಪಿ ಬಲ ಇದ್ದಿದ್ದು, ಕೇವಲ 2. ಆದರೆ ಅದೇ ಬಲವನ್ನು ವೃದ್ದಿಸಿಕೊಂಡು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಮೊದಲು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿ ಸರ್ಕಾರ ರಚನೆ ಮಾಡಿ ಉಪ ಮುಖ್ಯಮಂತ್ರಿಯಾದರು.ಬಳಿಕ ಮೈತ್ರಿ ಸರ್ಕಾರ ಪತನದ ಲಾಭ ಬಿಜೆಪಿಗೆ ಆಯ್ತು. ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿ ಮುಖ್ಯಮಂತ್ರಿಯಾದರು.
ನವೆಂಬರ್ 12, 2007 ನವೆಂಬರ್ 19, 2007 ರಲ್ಲಿ 7 ದಿನಗಳ ಕಾಲ ಅವರು ಮುಖ್ಯಮಂತ್ರಿ ಆಗಿದ್ದರು. ಮೇ 30, 2008 ಜುಲೈ 31, 2013 ರಿಂದ ಸುಮಾರು 3 ವರ್ಷ ಸಿಎಂ ಆದರು. ಮೇ 17, 2018 ? ಮೇ 19, 2018 ರಲ್ಲಿ ಕೇವಲ 2 ದಿನಗಳ ಕಾಲ ಅವರು ಮುಖ್ಯಮಂತ್ರಿಯಾಗಿದ್ದರು.ಜುಲೈ 26, 2019 ರಿಂದ ಜುಲೈ 28, 2021 2 ವರ್ಷಗಳ ಕಾಲ ಅವರು ರಾಜ್ಯದ ಚುಕ್ಕಾಣಿ ಹಿಡಿದಿದ್ದರು. ಹೀಗೆ ಬಿಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ತಮದೇ ಆದ ಚಾಪು ಮೂಡಿಸಿದ್ದಾರೆ.
ಲಿಂಗಾಯತರ ಬಲ :
ಯಡಿಯೂರಪ್ಪ ಅವರಿಗೆ ಲಿಂಗಾಯತ ಸಮುದಾಯದ ಬಲ ಇದೆ. ಆರಂಭದಲ್ಲಿ ಕಾಂಗ್ರೆಸ್ ಜೊತೆಗಿದ್ದ ಲಿಂಗಾಯತ ಸಮುದಾಯವನ್ನು ತಮತ್ತ ಸೆಳೆಯುವಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾದರು. ಈ ಕಾರಣಕ್ಕಾಗಿ ಲಿಂಗಾಯತ ಸಮುದಾಯದ ಬಲ ಬಿಜೆಪಿಗೆ ದಕ್ಕಿತು. ಇದನ್ನು ಬಿಎಸ್‌ವೈ ಮತ್ತಷ್ಟು ಗಟ್ಟಿಗೊಳಿಸಿದರು.ಕೇವಲ ಹಿಂದುತ್ವದ ಆಧಾರದಲ್ಲಿ ಮಾತ್ರ ಪಕ್ಷ ಸಂಘಟನೆ ಮಾಡದೆ ಕೆಲವು ಸಂದರ್ಭದಲ್ಲಿ ಅದರ ಆಚೆಗೂ ಪಕ್ಷವನ್ನು ಭದ್ರಗೊಳಿಸಲು ನೋಡಿದರು.
ಕುಗ್ಗದ ಬಲ :
ಪಕ್ಷದಲ್ಲಿ ಆಂತರಿಕ ಭಿನ್ನಮತದ ಕಾರಣಕ್ಕಾಗಿ ಬಿಜೆಪಿಯನ್ನು ತೊರೆದು ಕೆಜೆಪಿ ಕಟ್ಟಿದರು. ಆದರೆ ನಂತರದಲ್ಲಿ ಮರಳಿ ಪಕ್ಷಕ್ಕೆ ವಾಪಸ್ ಆದರು. ಹೀಗಾಗಿ ಬಿಜೆಪಿಗೆ ಬಿಎಸ್ ಯಡಿಯೂರಪ್ಪ ಅನಿವಾರ್ಯ ನಾಯಕರಾಗಿ ಹೊರಹೊಮಿದರು. ಈ ನಡುವೆ ಅವರ ವಿರುದ್ದ ಪಕ್ಷದಲ್ಲಿ ಆಂತರಿಕ ಬಣವೊಂದು ಸಕ್ರಿಯವಾಗತೊಡಗಿತು.
ಇದರ ಪರಿಣಾಮವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ವೈ ನಾಯಕತ್ವಕ್ಕೆ ಮಣೆ ಹಾಕಲಿಲ್ಲ. ಪಕ್ಷದ ಕೆಲವು ಮುಖಂಡರೇ ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಆರೋಪ ಮಾಡತೊಡಗಿದರು. ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಬಿಎಸ್‌ವೈ ಕುಟುಂಬದ ವಿರುದ್ಧ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಲು ಶುರುಮಾಡಿದರು.
ಯಡಿಯೂರಪ್ಪ ಅವರನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಮೂಲೆಗುಂಪು ಮಾಡಲಾಯಿತು. ಚುನಾವಣೆಯ ತಂತ್ರಗಾರಿಕೆಯನ್ನು ಬಿ.ಎಲ್.ಸಂತೋಷ್ ನೋಡಿಕೊಂಡಿದ್ದರು. ಆದರೆ ಇದು ಚುನಾವಣೆಯಲ್ಲಿ ವರ್ಕೌಟ್ ಆಗಿಲ್ಲ. ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿತು. ಇದಕ್ಕೆ ಅನೇಕ ಕಾರಣಗಳ ನಡುವೆ ಒಂದು ಕಾರಣ ಬಿಎಸ್‌ವೈ ಕಡೆಗಣನೆ ಎಂಬುವುದು ಗಮನಾರ್ಹ.
ಸೋಲಿನ ಬಳಿಕ ಪಾಠ!
2023 ರ ಚುನಾವಣೆಯಲ್ಲಿ ಸೋಲುಂಡ ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಮತ್ತೆ ಯಡಿಯೂರಪ್ಪ ಅವರ ಕುಟುಂಬಕ್ಕೆ ಮಣೆ ಹಾಕಿತು. ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರಗೆ ವಿರೋಧಗಳ ನಡುವೆಯೂ ರಾಜ್ಯಾಧ್ಯಕ್ಷ ಸ್ಥಾನ ನೀಡಿತು. ಇದು ವಿರೋಧಿ ಪಾಳಯಕ್ಕೆ ಆದ ಮೊದಲ ಹಿನ್ನಡೆ. ಆದರೆ ವಿಜಯೇಂದ್ರ ವಿರುದ್ಧ ವಿರೋಧಿ ಪಾಳಯ ಬುಸುಗುಡುತ್ತಲೇ ಬಂದಿದೆ.
ಅದರಲ್ಲೂ ಯತ್ನಾಳ್ ನೇತೃತ್ವದ ರೆಬೆಲ್ ಗುಂಪು ವಿಜಯೇಂದ್ರ ನಾಯಕತ್ವವನ್ನು ಖಂಡತುಂಡವಾಗಿ ವಿರೋಧಿಸತೊಡಗಿತು. ಸಾಲುಸಾಲು ಆರೋಪಗಳನ್ನು ಮಾಡತೊಡಗಿತು.
ಹೀಗಿದ್ದರೂ ಬಿಜೆಪಿ ಹೈಕಮಾಂಡ್ ತುರ್ತು ಕ್ರಮ ಕೈಗೊಂಡಿರಲಿಲ್ಲ. ಸತತವಾಗಿ ದೂರು ನೀಡಿದ ಬಳಿಕ ಹಾಗೂ ವಿಜಯೇಂದ್ರ ಬಣ ಸದ್ದು ಮಾಡಿದ ಬಳಿಕ ಹೈಕಮಾಂಡ್ ನಾಯಕರು ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿತ್ತು. ಇದು ವಿಜಯೇಂದ್ರಗೆ ಸಿಕ್ಕ ಆರಂಭಿಕ ಹಂತದ ಜಯ.
ಗೆದ್ದರೂ, ಗೆದ್ದಿಲ್ಲ!
ಯತ್ನಾಳ್ ಉಚ್ಚಾಟನೆ ವಿಜಯೇಂದ್ರಗೆ ಸಿಕ್ಕ ಆರಂಭಿಕ ಮುನ್ನಡೆ. ಆದರೆ ಹೈಕಮಾಂಡ್ ನಾಯಕರು ವಿಜಯೇಂದ್ರ ಪರವಾಗಿ ಪೂರ್ಣ ಪ್ರಮಾಣದಲ್ಲಿ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ವಿಜಯೇಂದ್ರ ನಾಯಕತ್ವದ ವಿರುದ್ಧ ಮತ್ತೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಜಿಎಂ ಸಿದ್ದೇಶ್ವರ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರವಿಂದ ಲಿಂಬಾವಳಿ ಸೇರಿದಂತೆ ಬಿಎಸ್‌ವೈ ಕುಟುಂಬದ ವಿರೋಧಿ ಬಣ ವಿಜಯೇಂದ್ರ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದೆ. ಕೆಜೆಪಿಗೆ ಹೋಗಿದ್ದ ಬಿಎಸ್‌ವೈ ಮತ್ತೆ ಬಿಜೆಪಿಗೆ ವಾಪಸ್ ಬಂದಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ರೆಬೆಲ್ ಟೀಂ ಪ್ರತ್ಯೇಕ ಸಭೆಗಳನ್ನು ನಡೆಸಿ ಚರ್ಚೆ ನಡೆಸಿದ್ದಾರೆ.
ವರಿಷ್ಠರ ನಡೆ ಕುತೂಹಲ
ಇಷ್ಟೆಲ್ಲಾ ಬೆಳವಣಿಗೆಗಳ ನಡೆಯುತ್ತಿದ್ದರೂ ಬಿಜೆಪಿ ವರಿಷ್ಠರು ಸ್ಪಷ್ಟ ಹೆಜ್ಜೆ ಇಡುತ್ತಿಲ್ಲ. ಇನ್ನೂ ಕಾದುನೋಡುವ ತಂತ್ರ ಪ್ರಯೋಗ ಮಾಡುತ್ತಿದ್ದಾರೆ. ಅಧ್ಯಕ್ಷ ಸ್ಥಾನ ಸಿಗುವ ಭರವಸೆಯನ್ನು ವಿಜಯೇಂದ್ರ ಹೊಂದಿದ್ದರೂ ಬಿಜೆಪಿಯ ಮತ್ತೊಂದು ಬಣ ಇದಕ್ಕೆ ವಿರೋಧ ಸೂಚಿಸುತ್ತಿದೆ.ಒಂದು ವೇಳೆ ವಿರೋಧಗಳಿಗೆ ಬಗ್ಗಿ ಬೇರೊಬ್ಬರಿ ಅಧ್ಯಕ್ಷ ಸ್ಥಾನ ನೀಡಿದರೆ ಅದು ಬಿಜೆಪಿಯ ಮೇಲೆ ಪರಿಣಾಮ ಬೀರಲಿದೆ. ಹಾಗಂತ ವಿಜಯೇಂದ್ರ ಅವರನ್ನೇ ಮುಂದುವರಿಸಿದರೆ ಭಿನ್ನಗುಂಪುಗಳ ವಿರೋಧ ಮತ್ತಷ್ಟು ತೀವ್ರಗೊಳ್ಳಲಿದೆ. ಹಾಗಾಗಿ ಹೈಕಮಾಂಡ್ ನಾಯಕರು ಯಾವ ಹೆಜ್ಜೆ ಇಡುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ.
- ನವದೆಹಲಿಯಲ್ಲಿ MSTC ಕಾರ್ಪೊರೇಟ್ ಕಚೇರಿ ಉದ್ಘಾಟಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ
- SHOCKING : 4ನೇ ತರಗತಿ ವಿದ್ಯಾರ್ಥಿ ಪಾಠ ಕೇಳುತ್ತಿರುವಾಗಲೇ ಹೃದಯಾಘಾತದಿಂದ ಸಾವು
- ವಾಯು ಪಡೆ ವಿಮಾನ ಪತನ, ಇಬ್ಬರು ಪೈಲೆಟ್ ಸಾವು
- ಕಳಸಾ-ಬಂಡೂರಿ ಅಣೆಕಟ್ಟು ನಿರ್ಮಾಣ ಆರಂಭ : ಡಿಕೆಶಿ
- ಕರ್ನಾಟಕದ ವಿಷಯದಲ್ಲಿ ಕೇಂದ್ರ ಸರ್ಕಾರದ ದ್ವೇಷ-ತಾರತಮ್ಯ ನೀತಿ ವಿರುದ್ಧ ಸಿಎಂ, ಡಿಸಿಎಂ ಹೋರಾಟ : ಸುರ್ಜೇವಾಲ